ಸಾರಾಂಶ
ಸರಗೂರು: ಹುಲಿ ದಾಳಿಯಲ್ಲಿ ರೈತನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ಗ್ರಾಮದ ಮಾದೇವ (45) ಅವರು ಮಹದೇಶ್ವರಸ್ವಾಮಿ ದೇವಸ್ಥಾನದ ಹಿಂಭಾಗದ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅರಣ್ಯದಿಂದ ಬಂದ ಹುಲಿ ಅವರ ಮೇಲೆ ದಾಳಿ ಮಾಡಿದೆ. ಹುಲಿಯು ರೈತನ ಮುಖವನ್ನು ಪರಚಿದ್ದು, ಕಣ್ಣಿನ ಗುಡ್ಡೆ ಹೊರಗಡೆ ಬಂದೆ. ಕಣ್ಣಿನ ಸುತ್ತ ಗಂಭೀರ ಗಾಯಗಳಾಗಿವೆ.ಘಟನೆಯ ಬಳಿಕ ಸ್ಥಳದಲ್ಲಿದ್ದ ಕಾರ್ಮಿಕರು ಕೂಗಿ, ಕಲ್ಲು ಎಸೆದು ಹುಲಿಯನ್ನು ಓಡಿಸಿದ್ದಾರೆ. ಬಳಿಕ ಗಾಯಗೊಂಡ ಮಾದೇವ ಅವರನ್ನು ತಕ್ಷಣ ಸರಗೂರು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೆಡಿಯಾಲ ವಲಯದ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಸೇರಿದ ಪ್ರದೇಶವಾಗಿರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹುಲಿಯ ಚಲನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಬಲೆ ಅಳವಡಿಸಲಾಗಿದೆ.ಗ್ರಾಮಸ್ಥರು ಈ ಘಟನೆಯಿಂದ ಭಯಭೀತರಾಗಿದ್ದು, ರಾತ್ರಿ ವೇಳೆ ಗಸ್ತು ಬಿಗಿಗೊಳಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಸ್ಥಳದಲ್ಲಿ ನೂರಾರು ಮಂದಿ ಇದ್ದರು.