- ಶಾಲೆಗೆ ಮಕ್ಕಳ ಗೈರು ।ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ । ಹಲವು ಗ್ರಾಮಸ್ಥರಿಂದ ತಹಸೀಲ್ದಾರ್ ಗೆ ಮನವಿ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಮರಾಠಿ ಕ್ಯಾಂಪ್- ಬೈರಾಪುರ ಗ್ರಾಮದಲ್ಲಿ ಚಿರತೆ-ಹುಲಿಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಬೈರಾಪುರ ಶಾಲೆ, ಅಂಗನವಾಡಿಗೆ ಮಕ್ಕಳು ಗೈರಾಗಿದ್ದಾರೆ.
ಬೈರಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 3 ಕಿ.ಮೀ.ದೂರದ ಮರಾಠಿ ಕ್ಯಾಂಪಿನಿಂದ 28 ಮಕ್ಕಳು ಹಾಗೂ 13 ಅಂಗನವಾಡಿ ಮಕ್ಕಳು ಬರುತ್ತಿದ್ದಾರೆ. ಬುಧವಾರ ಶಾಲೆ ಮುಗಿಸಿ ಈ ಮಕ್ಕಳು ವಾಪಾಸು ಮರಾಠಿ ಕ್ಯಾಂಪಿಗೆ ಕಾಡಿನ ಮಾರ್ಗದಲ್ಲಿ ಬರುವಾಗ ಏಕಾ ಏಕಿ ಚಿರತೆ ರಸ್ತೆಗೆ ಹಾರಿ ಬಂದಿದೆ. ಇದರಿಂದ ಭಯ ಭೀತರಾದ ಮಕ್ಕಳು ಚೆಲ್ಲಾ ಪಿಲ್ಲಿಯಾಗಿ ಓಡಿ ಮನೆ ಸೇರಿದ್ದರು.ಪೋಷಕರು ಗುರುವಾರ ಬೆಳಿಗ್ಗೆ 10ರ ಸಮಯದಲ್ಲಿ ಮಕ್ಕಳನ್ನು ಶಾಲೆಗೆ ಬಿಡಲು ಅದೇ ದಾರಿಯಲ್ಲಿ ಬರುವಾಗ ಹುಲಿಯೊಂಡು ಅಡ್ಡ ಬಂದಿದೆ. ಗಾಬರಿಯಾದ ಪೋಷಕರು ಬೈರಾಪುರ ಶಾಲೆಗೆ ಬಂದು ಮರಾಠಿ ಕ್ಯಾಂಪಿನ ಎಲ್ಲಾ ಮಕ್ಕಳನ್ನು ವಾಪಾಸು ಮನೆಗೆ ಕರೆದೊಯ್ದಿದ್ದಾರೆ. ಬದಲಿ ರಸ್ತೆ ಮಾಡಿಕೊಡುವವರೆಗೆ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದಿದ್ದಾರೆ.
-- ಬಾಕ್ಸ್--
ಬೇರೆ ರಸ್ತೆ ಮಾಡಿಸಿಕೊಡಲು ಪೋಷಕರ ಆಗ್ರಹ
ಮರಾಠಿ ಕ್ಯಾಂಪ್ ಹಾಗೂ ಬೈರಾಪುರಕ್ಕೆ ಬರುವ ಕಾಡು ಮಾರ್ಗ ಲಕ್ಕವಳ್ಳಿ ಭದ್ರಾ ಅಭಯಾರಣ್ಯಕ್ಕೆ ಸೇರಲಿದೆ. ಮರಾಠಿ ಕ್ಯಾಂಪಿನಿಂದ ಬೈರಾಪುರ ಶಾಲೆಗೆ ಬರುವ ಮಕ್ಕಳು ಇದೇ ಮಾರ್ಗವಾಗಿ ಶಾಲೆಗೆ ಬರಬೇಕಾಗಿದೆ. ಆದ್ದರಿಂದ ಮರಾಠಿ ಕ್ಯಾಂಪಿನ ಗ್ರಾಮಸ್ಥರು ಗುರುವಾರ ತಹಸೀಲ್ದಾರ್ ಗೆ ಮನವಿ ಸಲ್ಲಿಸಿ ಮರಾಠಿ ಕ್ಯಾಂಪಿನಿಂದ ಬೈರಾಪುರಕ್ಕೆ ಕಂದಾಯ ಜಾಗದಲ್ಲಿ ಬೇರೆ ರಸ್ತೆ ಮಾಡಿಸಿಕೊಡುವಂತೆ ಒತ್ತಾಯಿಸಿದ್ದಾರೆ.-- ಬಾಕ್ಸ್--
ಕೊಪ್ಪ ಡಿ.ಎಫ್.ಓ.ಗೆ ಪತ್ರ: ಶಬಾನಾಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಗುರುವಾರ ಬೈರಾಪುರ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪೋಷಕರೊಂದಿಗೆ ಮಾತುಕತೆ ನಡೆಸಿದರು. ಮಕ್ಕಳಿಗೆ ಸೂಕ್ತ ರಕ್ಷಣೆ ಬೇಕಾಗಿದೆ. ಚಿರತೆ, ಹುಲಿ ಕಾಣಿಸಿರು ವುದರಿಂದ ಎನ್.ಆರ್.ಪುರ ಅರಣ್ಯ ಇಲಾಖೆ, ಉಂಬಳೆ ಬೈಲು ಅರಣ್ಯ ಇಲಾಖೆ ಹಾಗೂ ಕೊಪ್ಪ ಡಿ.ಎಫ್.ಓ.ಗೆ ಪತ್ರ ಬರೆದಿದ್ದೇನೆ. ಮಕ್ಕಳು ಬರುವ ರಸ್ತೆ ಲಕ್ಕವಳ್ಳಿ ಭದ್ರಾ ಅಭಯಾರಣ್ಯ ಜಾಗವಾಗಿರು ವುದರಿಂದ ಅಲ್ಲಿನ ಅರಣ್ಯ ಅಧಿಕಾರಿಗಳಿಗೂ ಪತ್ರ ಬರೆಯುತ್ತೇನೆ ಎಂದರು.
-- ಬಾಕ್ಸ್ ---ಚಿರತೆ ಸೆರೆಗೆ ತುರ್ತು ಕ್ರಮ ವಹಿಸಲು ಒತ್ತಾಯ
ಕಳೆದ ಕೆಲವು ದಿನಗಳ ಹಿಂದೆ ಮರಾಠಿ ಕ್ಯಾಂಪ್, ಬೈರಾಪುರ ಗ್ರಾಮದಲ್ಲಿ ಚಿರತೆ ದನ, ಕುರಿಯನ್ನು ತಿಂದು ಹಾಕಿದೆ ಎನ್ನುತ್ತಾರೆ ಮುತ್ತಿನಕೊಪ್ಪ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ದೇವಂತಗೌಡ.ರಾತ್ರಿ ಬೈರಾಪುರ ಗ್ರಾಮದ ಗವಿಯಪ್ಪ ಅವರ ಮನೆ ಒಳಗೆ ನುಗ್ಗಿದ ಚಿರತೆ ಕಟ್ಟಿಹಾಕಿದ್ದ ಕುರಿಯನ್ನು ತಿಂದು ಹಾಕಿದೆ. ಮರಾಠಿ ಕ್ಯಾಂಪಿನ ರಮೇಶ ಅವರ ದನ, ಬೈರಾಪುರ ಗ್ರಾಮದ ದುಗ್ಗಪ್ಪಗೌಡರ ಮನೆ ದನ, ಕರುವನ್ನು ಚಿರತೆ ತಿಂದಿದೆ. ಇದರಿಂದ ಮರಾಠಿ ಕ್ಯಾಂಪ್, ಬೈರಾಪುರ ಗ್ರಾಮದ ಜನರು ಭಯಭೀತ ರಾಗಿದ್ದು ಸಂಬಂಧಪಟ್ಟ ಅರಣ್ಯ ಇಲಾಖೆ ತುರ್ತು ಕ್ರಮ ತೆಗೆದುಕೊಂಡು ಚಿರತೆ ಸೆರೆ ಹಿಡಿಯಲು ಒತ್ತಾಯಿಸಿದ್ದಾರೆ.
-- ಬಾಕ್ಸ್--ಅರಣ್ಯ ಇಲಾಖೆಯಿಂದ ನಿಗಾವಹಿಸಲು ಸೂಚನೆ
ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಕನ್ನಡಪ್ರಭ ದೊಂದಿಗೆ ಮಾತನಾಡಿ, ಮಕ್ಕಳು ಶಾಲೆಗೆ ಬರುವ ಕಾಡಿನ ದಾರಿ ಲಕ್ಕವಳ್ಳಿ ಭದ್ರಾ ಅಭಯಾರಣ್ಯಕ್ಕೆ ಸೇರಿದೆ. ಅಲ್ಲಿ ಚಿರತೆ, ಹುಲಿ ಹಿಂದಿ ನಿಂದಲೂ ಇದೆ. ಮೊನ್ನೆ ಚಿರತೆ ಕಾಣಿಸಿದ್ದರಿಂದ ಅರಣ್ಯ ಇಲಾಖೆಯವರಿಗೆ ನಿಗಾ ವಹಿಸುವಂತೆ ಸೂಚಿಸಿದ್ದೇನೆ. ಚಿರತೆಗಾಗಿ ಬೋನು ಇಡಲಾಗಿದೆ. ನರಸಿಂಹರಾಜಪುರ ವಲಯ ಅರಣ್ಯ ಇಲಾಖೆ ಯಿಂದಲೂ ಸಿಬ್ಬಂದಿಯನ್ನು ಕಳಿಸಿದ್ದೇವೆ.-- ಬಾಕ್ಸ್--
ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕರು ಭಕ್ಷಿಸಿದ ಚಿರತೆಕಾನೂರು ಗ್ರಾಮದಲ್ಲೂ ಚಿರತೆ ಕಾಟವಿದ್ದು ಗುರುವಾರ ರಾತ್ರಿ ಗದ್ದೇಮನೆ ಗೋವಿಂದೇಗೌಡ ಎಂಬ ರೈತರ ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ 9 ತಿಂಗಳ ಕರುವನ್ನು ಕಚ್ಚಿ ಅರ್ಧ ತಿಂದು ಹಾಕಿದೆ.
ಕಳೆದ 15 ದಿನಗಳ ಹಿಂದೆ ಪಕ್ಕದ ಹಳ್ಳಿ ರಾಮನಹಡ್ಲು ಎಂಬಲ್ಲಿ ಮೇಯಲು ಬಿಟ್ಟಿದ್ದ ಎರಡು ಎಮ್ಮೆಗಳ ಮೇಲೆ ಚಿರತೆ ದಾಳಿ ಮಾಡಿದೆ. ಒಂದು ಎಮ್ಮೆ ಸತ್ತಿದ್ದು, ಇನ್ನೊಂದು ಎಮ್ಮೆ ತಪ್ಪಿಸಿಕೊಂಡು ಮನೆಗೆ ಬಂದಿದೆ. ಮೈಯಲ್ಲಿ ತರಚಿದ ಗಾಯಗಳಾಗಿ ಸಾಯುವ ಸ್ಥಿತಿಗೆ ಬಂದಿದೆ. ಅಲ್ಲದೆ ಮೇಯಲು ಬಿಟ್ಟಿದ್ದ ಸಮೀಪದ ಹೊಳೆಕೊಪ್ಪದ ಸುಬ್ರಮಣ್ಯ ಎಂಬ ರೈತರಿಗೆ ಸೇರಿದ 2 ದನಗಳನ್ನು ಚಿರತೆ ಕೊಂದು ಹಾಕಿದೆ ಎನ್ನುತ್ತಾರೆ ಆ ಭಾಗದ ಗ್ರಾಮಸ್ಥರು.