ಉಚ್ಚಿಲದಲ್ಲಿ ನಾಳೆ ಕುಣಿಯಲಿವೆ ಹೆಣ್ಣು ಹುಲಿಗಳು !

| Published : Sep 26 2025, 01:02 AM IST

ಸಾರಾಂಶ

2 ವರ್ಷಗಳ ಹಿಂದೆ ಆರಂಭವಾಗಿರುವ ಈ ಸ್ಪರ್ಧೆಯಲ್ಲಿ ಕಳೆದ ವರ್ಷ 6 ಬಾಲೆಯಿರಿಂದ ಹಿಡಿದು 60 ವಯಸ್ಸಿನ ಮಹಿಳೆಯರು ವೇದಿಕೆ ಹುಡಿಯಾಗುವಂತೆ ತಾಸೆಯ ತಾಳಕ್ಕೆ ಕುಣಿದು ಕುಪ್ಪಳಿಸಿದ್ದರು. ಮೊದಲ ವರ್ಷವೇ ನೂರಕ್ಕೂ ಹೆಚ್ಚು ಹೆಣ್ಣುಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅದರ ಕ್ರೇಜ್ ಎಷ್ಟಿದೆ ಎಂಬುದನ್ನು ತೋರಿಸಿದ್ದರು.

ಉಚ್ಚಿಲ ದಸರಾ ಮಹೋತ್ಸವದ ಸಂಭ್ರಮಕ್ಕೆ ಹೊಸ ಮೆರುಗು ನೀಡಲಿದೆ ಪೊಣ್ಣು ಪಿಲಿ ನಲಿಕೆ

ಕನ್ನಡಪ್ರಭ ವಾರ್ತೆ ಉಚ್ಚಿಲ

ಇಲ್ಲಿನ ಮಹಾಲಕ್ಷ್ಮೀ ದೇವಾಲಯದಲ್ಲಿ ನಡೆಯುತ್ತಿರುವ ವೈಭವದ ನವರಾತ್ರೋತ್ಸವ ಉಡುಪಿ - ಉಚ್ಚಿಲ ದಸರಾವು ನಿತ್ಯವು ವೈವಿಧ್ಯಗಳಿಗೆ ಸಾಕ್ಷಿಯಾಗುತ್ತಿದೆ. ಅದರಂತೆ ನಾಳೆ (ಸೆ.27) ದೇವಿಯ ಸಾನ್ನಿಧ್ಯದಲ್ಲಿ ಹೆಣ್ಣುಮಕ್ಕಳಿಗೆ ಹುಲಿವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ.2 ವರ್ಷಗಳ ಹಿಂದೆ ಆರಂಭವಾಗಿರುವ ಈ ಸ್ಪರ್ಧೆಯಲ್ಲಿ ಕಳೆದ ವರ್ಷ 6 ಬಾಲೆಯಿರಿಂದ ಹಿಡಿದು 60 ವಯಸ್ಸಿನ ಮಹಿಳೆಯರು ವೇದಿಕೆ ಹುಡಿಯಾಗುವಂತೆ ತಾಸೆಯ ತಾಳಕ್ಕೆ ಕುಣಿದು ಕುಪ್ಪಳಿಸಿದ್ದರು. ಮೊದಲ ವರ್ಷವೇ ನೂರಕ್ಕೂ ಹೆಚ್ಚು ಹೆಣ್ಣುಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅದರ ಕ್ರೇಜ್ ಎಷ್ಟಿದೆ ಎಂಬುದನ್ನು ತೋರಿಸಿದ್ದರು.ಈ ವರ್ಷವೂ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಈ ಸ್ಪರ್ಧೆಯನ್ನು ಪ್ರಾಯೋಜಿಸುತ್ತಿದ್ದು, ಈ ಬಾರಿ ಇನ್ನಷ್ಚು ಹೆಣ್ಣುಹುಲಿಗಳು ರೋಮಾಂಚನಕಾರಿಯಾದ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ, ಉಚ್ಚಿಲ ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್ ಮಾರ್ಗದರ್ಶನದಲ್ಲಿ ಮಧ್ಯಾಹ್ನ 1 ಗಂಟೆ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ತೆರೆದ ಸಭಾಂಗಣ ಈ ಸ್ಪರ್ಧೆ ನಡೆಯಲಿದೆ.ಉಚ್ಚಿಲಕ್ಕೆ ಶಾಸಕರೈವರ ಭೇಟಿ

ಉಚ್ಚಿಲದಲ್ಲಿ ನಡೆಯುತ್ತಿರುವ ಉಡುಪಿ ದಸರಾ ಬಹಳ ಪ್ರಸಿದ್ಧಿ ಪಡೆಯುತ್ತಿದ್ದು, ರಾಜ್ಯದ ವಿಧಾನ ಪರಿಷತ್ ಸದಸ್ಯರಾದ ಹಕ್ಕುಬಾದ್ಯತಾ ಸಮಿತಿ ಅಧ್ಯಕ್ಷ ಟಿ. ಎ. ಸರವಣ, ಮಂಗಳೂರಿನ ಪ್ರತಾಪ್ ಸಿಂಹ ನಾಯಕ್, ಗುಲ್ಬರ್ಗಾದ ತಿಪ್ಪಣ್ಣಪ್ಪ ಕಮ್ಮಕ್ಕನೂರು, ಶಿವಮೊಗ್ಗದ ಡಿ.ಎಸ್. ಅರುಣ್ ಮತ್ತು ಚಿತ್ರದುರ್ಗಾದ ಕೆ.ಎಸ್. ನವೀನ್ ಭೇಟಿ ಕೊಟ್ಟು ದಸರಾ ಆಯೋಜನೆಯ ಅಚ್ಚುಕಟ್ಟುತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.