ಸಾರಾಂಶ
ಧಾರವಾಡ: ಕಿಡಿಗೇಡಿಗಳು ರಾಷ್ಟ್ರಧ್ವಜಕ್ಕಿಂತಲೂ ಎತ್ತರವಾಗಿ ಟಿಪ್ಪುಸುಲ್ತಾನ್ ಭಾವಚಿತ್ರದ ಧ್ವಜ ಹಾರಿಸಿದ ಘಟನೆ ಬುಧವಾರ ಧಾರವಾಡದ ರೀಗಲ್ ವೃತ್ತದಲ್ಲಿ ನಡೆದಿದೆ.
ಮಹಾತ್ಮ ಗಾಂಧೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ದಿನವೇ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಕಿಡಗೇಡಿಗಳ ಕೃತ್ಯವನ್ನು ಹಿಂದೂ ಸಂಘಟನೆಗಳು ಖಂಡಿಸಿವೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು. ಟಿಪ್ಪು ಸುಲ್ತಾನ್ ಧ್ವಜ ಹಾರಿಸಿದ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ, ಅಲ್ಲಿನ ವ್ಯಾಪಾರಸ್ಥರ ನೆರವಿನೊಂದಿಗೆ ಟಿಪ್ಪು ಧ್ವಜ ತೆರವು ಮಾಡಿದರು.
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರೀ ಜಯಂತಿ ಅಂಗವಾಗಿ ಬುಧವಾರ ಬೆಳಗ್ಗೆ ಅಬ್ದುಲ್ ಕಲಾಂ ಸಾಂಸ್ಕೃತಿಕ ವೇದಿಕೆಯಿಂದ ಗಾಂಧೀಜಿ ಭಾವಚಿತ್ರವಿಟ್ಟು ಪೂಜೆಗೈದು ಅದರ ಸುತ್ತಲು ರಾಷ್ಟ್ರಧ್ವಜ ಅಳವಡಿಸಿದ್ದರು. ಇದಾದ ಬಳಿಕ ಯಾರೋ ಟಿಪ್ಪುಸುಲ್ತಾನ್ ಭಾವಚಿತ್ರದ ಧ್ವಜ ಹಾರಿಸಿ ಹೋಗಿದ್ದಾರೆ.
ಈ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಭಜರಂಗ ದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.