ಟಿಪ್ಪು ತ್ಯಾಗ, ಬಲಿದಾನ ಗೌಣ: ಡಾ. ಚಿನ್ನಸ್ವಾಮಿ

| Published : Nov 28 2024, 12:30 AM IST

ಸಾರಾಂಶ

ರಾಮನಗರ: ಧಾರ್ಮಿಕ ಹಿನ್ನೆಲೆಯಲ್ಲಿ ರಚನೆಯಾದ ಚರಿತ್ರೆಯಲ್ಲಿ ಟಿಪ್ಪು ಸುಲ್ತಾನ್ ಸೇರಿದಂತೆ ಅನೇಕ ಕನ್ನಡಿಗರ ತ್ಯಾಗ ಬಲಿದಾನಗಳು ಗೌಣವಾಗಿವೆ ಎಂದು ಹಂಪಿ ಕನ್ನಡ ವಿಶ್ವವಿದಾಲಯದ ದೂರ ಶಿಕ್ಷಣ ನಿರ್ದೇಶನಾಲಯ ಚರಿತ್ರೆ ವಿಭಾಗದ ನಿರ್ದೇಶಕ ಡಾ.ಎನ್.ಚಿನ್ನಸ್ವಾಮಿ ಸೋಸಲೆ ಬೇಸರ ವ್ಯಕ್ತಪಡಿಸಿದರು.

ರಾಮನಗರ: ಧಾರ್ಮಿಕ ಹಿನ್ನೆಲೆಯಲ್ಲಿ ರಚನೆಯಾದ ಚರಿತ್ರೆಯಲ್ಲಿ ಟಿಪ್ಪು ಸುಲ್ತಾನ್ ಸೇರಿದಂತೆ ಅನೇಕ ಕನ್ನಡಿಗರ ತ್ಯಾಗ ಬಲಿದಾನಗಳು ಗೌಣವಾಗಿವೆ ಎಂದು ಹಂಪಿ ಕನ್ನಡ ವಿಶ್ವವಿದಾಲಯದ ದೂರ ಶಿಕ್ಷಣ ನಿರ್ದೇಶನಾಲಯ ಚರಿತ್ರೆ ವಿಭಾಗದ ನಿರ್ದೇಶಕ ಡಾ.ಎನ್.ಚಿನ್ನಸ್ವಾಮಿ ಸೋಸಲೆ ಬೇಸರ ವ್ಯಕ್ತಪಡಿಸಿದರು.

ನಗರದ ಗೌಸಿಯಾ ತಾಂತ್ರಿಕ ಮಹಾ ವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಇತಿಹಾಸದಲ್ಲಿ ಮೈಸೂರು ಒಡೆಯರಿಗೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಟಿಪ್ಪು ಸುಲ್ತಾನ್ ಅವರಿಗೆ ನೀಡಿಲ್ಲ. ಟಿಪ್ಪು ಸುಲ್ತಾನ್ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಪ್ರದೇಶಗಳನ್ನು ಒಳಗೊಂಡಂತೆ ಸಮಗ್ರ ಕರ್ನಾಟಕವನ್ನು ಒಳಗೊಂಡಂತೆ ಆಳ್ವಿಕೆ ಮಾಡಿದ ಏಕೈಕ ದೊರೆ. ಕೃಷ್ಣದೇವರಾಯ ಅವರಿಂದಲೂ ಅದು ಸಾಧ್ಯವಾಗಲಿಲ್ಲ. ಕೃಷ್ಣದೇವರಾಯರ ಆಳ್ವಿಕೆ ಕಾಲದಲ್ಲಿ ವಿಜಯಪುರ, ಕಲ್ಬುರ್ಗಿ, ಬೀದರ್‌ನಲ್ಲಿ ಸುಲ್ತಾನರು, ನವಾಬರು, ನಡು ಕನ್ನಡದಲ್ಲಿ ಪಾಳೇಗಾರರು, ದಕ್ಷಿಣದಲ್ಲಿ ಅವರ ಪಾತ್ರವೇ ಇರಲಿಲ್ಲ. ಇಮ್ಮಡಿ ಪುಲಿಕೇಶಿ ಕಾಲದಲ್ಲಿ ದಕ್ಷಿಣ ಭಾರತ ಚೋಳರು, ಪಲ್ಲವರ ಆಳ್ವಿಕೆಗೆ ಒಳಪಟ್ಟಿತ್ತು ಎಂದು ತಿಳಿಸಿದರು.

ಇಷ್ಟೆಲ್ಲ ಸಾಮ್ರಾಜ್ಯವನ್ನು ಒಗ್ಗೂಡಿಸಿಕೊಂಡು ಟಿಪ್ಪು ಸುಲ್ತಾನ್ ಆಳ್ವಿಕೆ ಮಾಡಿದವರು. ಬಹುದೊಡ್ಡ ಸಾಮ್ರಾಜ್ಯ ಕಟ್ಟಿದರು ಟಿಪ್ಪು ಸುಲ್ತಾನ್ ಸಾಮ್ರಾಟ ಎನಿಸಿಕೊಳ್ಳದೆ ಪಾಳೇಗಾರನಾಗಿಯೇ ಉಳಿದನು. ಅದೇ ಪಾಳೇಗಾರರಾಗಿದ್ದ ಮೈಸೂರು ಒಡೆಯರು ಟಿಪ್ಪುವಿನ ಪತನದ ನಂತರ ಮಹಾರಾಜರಾದರು. ಇಷ್ಟಕ್ಕೂ ಮೈಸೂರು ಒಡೆಯರಿಗೆ ಮಹಾರಾಜರ ಪಟ್ಟ ನೀಡಿದ್ದೆ ಟಿಪ್ಪು ಸುಲ್ತಾನ್. ಆದರಿಲ್ಲಿ ಟಿಪ್ಪು ಗೌಣನಾದರೆ, ಮಹಾರಾಜರು ಶೇಷ್ಠರಾಗುತ್ತಾರೆ. ಇದಕ್ಕೆ ಧಾರ್ಮಿಕ ಹಿನ್ನೆಲೆಯಲ್ಲಿ ರಚನೆಯಾದ ಚರಿತ್ರೆ ಕಾರಣ ಎಂದು ಹೇಳಿದರು.

ನಾವಿಂದು ಸ್ವಾತಂತ್ರ್ಯ ಭಾರತದಲ್ಲಿ ಇದ್ದೇವೆ ಅಂದರೆ ಅದಕ್ಕೆ ನಿನ್ನೆ ಮೊನ್ನೆಯ ಘಟನೆಗಳು ಕಾರಣವಲ್ಲ. 1857ರ ಘಟನೆ ಮಾತ್ರವಲ್ಲದೆ 1768ರಲ್ಲಿ ಟಿಪ್ಪುಸುಲ್ತಾನ್ ಆರಂಭಿಸಿದ ಸ್ವಾತಂತ್ರ್ಯ ಭಾರತದ ಪರಿಕಲ್ಪನೆಗೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಈ ವಾಸ್ತವ ಚರಿತ್ರೆಯನ್ನು ಅಧ್ಯಯನ ಮಾಡಬೇಕಿದೆ ಎಂದು ತಿಳಿಸಿದರು.

ಕಿತ್ತೂರು ರಾಣಿ ಚೆನ್ನಮ್ಮನಿಗೆ ಸಿಕ್ಕ ಪ್ರಾಮುಖ್ಯತೆ ಅಬ್ಬಕ್ಕರಾಣಿ, ಒನಕೆ ಓಬವ್ವ ಅವರಿಗೂ ಸಿಗಲಿಲ್ಲ. ಯಾರು ಪ್ರಬಲವಾಗಿ ಕೇಳಿದರೊ ಅವರ ಚರಿತ್ರೆ ಮಾತನಾಡಿತು. ಪ್ರಬಲ ಚರಿತ್ರೆ ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡತೊಡಗಿತು. ಯಾರು ಹಾರಾಡಬೇಕಾಗಿತ್ತೊ ಅವರ ರೆಕ್ಕೆಗಳನ್ನು ಕತ್ತರಿಸಿ ಮೂಲೆ ಗುಂಪು ಮಾಡಲಾಯಿತು. ಮಾತನಾಡುವ ಚರಿತ್ರೆಯನ್ನು ಮೌನ ಮಾಡಲಾಯಿತು ಎಂದರು.

ಮೈಸೂರು ಸಂಸ್ಥಾನದಲ್ಲಿ 1881ರಿಂದ 1947ರವರೆಗೆ ಆಳ್ವಿಕೆ ಮಾಡಿದ ಮೈಸೂರು ಅರಸರ ಕಾಲದಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ರವರು ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದರು. ನಾಲ್ವಡಿ ಅವರಿಗೆ ಮಿರ್ಜಾರವರು ಆತ್ಮೀಯರಾಗಿದ್ದರು. ತನ್ನ ಜನಪರ ಕೆಲಸ, ಜನ ಸೇವೆ ಮಾಡಲು ಅಡ್ಡಿಯಾಗುತ್ತಿದ್ದ ದಿವಾನರ ಜೊತೆ ಕೆಲಸ ಮಾಡಲು ನಾಲ್ವಡಿಗೆ ಇಷ್ಟವಾಗುತ್ತಿರಲಿಲ್ಲ. ಅಸ್ಪೃಶ್ಯತೆ ಹೋಗಲಾಡಿಸಿ ಮೀಸಲಾತಿ, ಸಮಾನತೆ ಜಾರಿ ಮಾಡುವ ಕಾರ್ಯವನ್ನು ಬೆಂಬಲಿಸುವ ದಿವಾನ ಬೇಕಾಗಿತ್ತು. 1902ರಿಂದ 1947ರವರೆಗೆ ರಾಜರಾಗಿದ್ದರು ಸಹ ನಾಲ್ವಡಿ ಅವರಿಗೆ ಮಿರ್ಜಾರವರು ದಿವಾನರಾದ ಮೇಲೆಯೇ ರಾಜತ್ವದ ಪ್ರಭುತ್ವವನ್ನು ಪ್ರತಿಪಾದನೆ ಮಾಡಿದರು. ತನ್ನ ಭಾವನೆಗಳು ಕಾನೂನಾತ್ಮಕವಾಗಿ ಜಾರಿಯಾಗುತ್ತಿವೆ ಎಂದು ನಾಲ್ವಡಿಯವರು ಖುಷಿ ಪಟ್ಟರು ಎಂದು ಹೇಳಿದರು.

ವಿಶ್ವೇಶ್ವರಯ್ಯ ಬಗ್ಗೆ ತಿಳಿದಷ್ಟು ಮಾಹಿತಿಯನ್ನು ಮಿರ್ಜಾ ಇಸ್ಮಾಯಿಲ್ ಬಗ್ಗೆ ಯಾರು ತಿಳಿದುಕೊಂಡಿಲ್ಲ. ಮಿರ್ಜಾ ಇಸ್ಮಾಯಿಲ್ ಕುರಿತು ಬರೆಯಲು ಅವರ ಸಮುದಾಯದ ಜನರಿಗೆ ಅಕ್ಷರದ ಪರಿಜ್ಞಾನ ಇರಲಿಲ್ಲ. ಸಂವಿಧಾನ ಬಂದ ಮೇಲೆ ಶಿಕ್ಷಣದ ಪರಿಜ್ಞಾನ ಬಂದಿತು. ಈಗ ಹಂಬಲಿಸುವಾಗ ಶೈಕ್ಷಣಿಕ, ಧಾರ್ಮಿಕ, ಆರ್ಥಿಕ ಸಂಕೋಲೆಯಲ್ಲಿ ಸಿಲುಕಿದ್ದಾರೆ. ಸಾಕ್ಷಿಯಿದ್ದರೂ ಬರೆಯಲು ಭಯ ಪಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಏಕೀಕೃತ ಕರ್ನಾಟಕದಲ್ಲಿ ಅನೇಕರಿಗೆ ಜಾತಿಯ ಆಧಾರದ ಮೇಲೆ ಬಿರುದು ಕೊಡುತ್ತಾ ಬಂದಿದ್ದೇವೆ. ಆಲೂರು ವೆಂಕಟರಾಯರಿಗೆ ಕುಲಪುರೋಹಿತ ಬಿರುದು ನೀಡಿದೆವು. ಕನ್ನಡ ಕುಲ ಅಂದರೇನು, ಯಾವ ಕುಲಕ್ಕೆ ಪುರೋಹಿತರು ಎಂಬೆಲ್ಲ ಪ್ರಶ್ನೆಗಳು ಮೂಡುತ್ತವೆ. ಧಾರ್ಮಿಕ ಹಿನ್ನೆಲೆಯುಳ್ಳವರಿಗೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಸಮಾಜದ ಹಿನ್ನೆಲೆಯಿಂದ ಕೆಲಸ ಮಾಡಿದವರಿಗೆ ನೀಡಲೇ ಇಲ್ಲ. ಈ ರೀತಿಯಾದರೆ ಚರಿತ್ರೆ ಗೌಣ ಆಗುತ್ತದೆ ಎಂದು ಎಚ್ಚರಿಸಿದರು.

ಭಾರತ ಬಹುಜನರ ನಾಡೇ ಹೊರತು ಏಕಮುಖ ಜನರ ನಾಡಲ್ಲ. ಜಾತ್ಯತೀತ , ಧರ್ಮ ನಿರಪೇಕ್ಷಿತ ನಾಡು,

ಚರಿತ್ರೆ ಮತ್ತು ಚರಿತ್ರೆಯನ್ನು ಓದುಗರನ್ನು ಕೋಮು ಭಾವನೆ ದಳ್ಳುರಿಗೆ ತಳ್ಳುತ್ತಿದ್ದೇವೆ. ಇದು ಎಲ್ಲಿವರೆಗೆ ಮುಂದುವರಿಯುತ್ತದೆಯೊ ಅಲ್ಲಿಯವರೆಗೆ ಪ್ರಜಾಪ್ರಭುತ್ವಕ್ಕೆ ಆಪತ್ತು, ಸಂವಿಧಾನದ ಸ್ವಾತಂತ್ರ್ಯ, ಸಮಾನತೆ, ಭಾತೃತ್ವಕ್ಕೆ ಬಹುದೊಡ್ಡ ಹೊಡೆತ ಬೀಳುತ್ತದೆ ಎಂದು ಚಿನ್ನಸ್ವಾಮಿ ಸೋಸಲೆ ಆತಂಕ ವ್ಯಕ್ತಪಡಿಸಿದರು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆಲ್ ಅಮೀನ್ ಸಮೂಹ ವಿದ್ಯಾಸಂಸ್ಥೆ ಅಧ್ಯಕ್ಷ ಉಮರ್ ಇಸ್ಮಾಯಿಲ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಡಾ.ಎನ್ .ಎಸ್.ಕುಮಾರ್, ಸಂಚಾಲಕ ಡಾ.ಸೈುಲ್ಲಾ ಖಾನ್ , ಆಡಳಿತಾಕಾರಿ ಪ್ರೊ.ಕೆ.ಆರ್.ಏಜಾಜ್ ಅಹಮದ್, ಅಮಾನುಲ್ಲಾ ಖಾನ್ ಮತ್ತಿತರರು ಉಪಸ್ಥಿತರಿದ್ದರು.

ಕೋಟ್‌..........

ಕನ್ನಡ, ಕನ್ನಡತನ, ಕನ್ನಡಿಗರ ಚರಿತ್ರೆ ಧಾರ್ಮಿಕ ಹಿನ್ನೆಲೆಯಲ್ಲಿ ರಚನೆಯಾದ ಇತಿಹಾಸದಲ್ಲಿ ಗೌಣವಾಗಿದೆ. ನಾವು ಧರ್ಮದ ಹಿನ್ನೆಲೆ ಬಿಟ್ಟು ವಾಸ್ತವ ಚರಿತ್ರೆ ನೋಡುವ ಪ್ರಯತ್ನ ಮಾಡಬೇಕು. ಇಂದಿನ ವಿದ್ಯಾರ್ಥಿಗಳಿಗೆ ಯಾವ ತಿಂಗಳಲ್ಲಿ ಯಾವ ಹಬ್ಬ ಬರುತ್ತದೆ, ಹನುಮ ಮಾಲೆ, ಅಯ್ಯಪ್ಪನ ಮಾಲೆ ಯಾವಾಗ ಹಾಕಿಕೊಳ್ಳಬೇಕು ಎಂಬುದು ಗೊತ್ತಿದೆ. ಆದರೆ, ಸಂವಿಧಾನದ ಒಂದು ಕಲಂ ಹೇಳಲು ಬರುವುದಿಲ್ಲ. ನಾವು ಬದುಕುತ್ತಿರುವುದು ಸಂವಿಧಾನದ ಭಾರತದಲ್ಲಿ, ದೇವತೆಗಳ ಭಾರತದಲ್ಲಿ ಅಲ್ಲ. ಈ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಓದಬೇಕು. ಆ ಮೂಲಕ ಪ್ರಬುದ್ಧ ಪ್ರಜೆಗಳಾಗಬೇಕು. ಪದವಿಗೆ ಕನ್ನಡತನ ಇರಲಿ, ಸಂವಿಧಾನದ ಆಳ ಇರಲಿ, ಕುಟುಂಬ, ಊರು, ಭಾಷೆ, ನಾಡನ್ನು ಸಮೃದ್ಧಿ ಮಾಡುವಂತಾಗಲಿ.

- ಡಾ.ಎನ್ .ಚಿನ್ನಸ್ವಾಮಿ ಸೋಸಲೆ, ನಿರ್ದೇಶಕರು,

ದೂರ ಶಿಕ್ಷಣ ನಿರ್ದೇಶನಾಲಯ,

ಚರಿತ್ರೆ ವಿಭಾಗ, ಕನ್ನಡ ವಿವಿ, ಹಂಪಿ.

27ಕೆಆರ್ ಎಂಎನ್ 1.ಜೆಪಿಜಿ