ಸಾರಾಂಶ
ಶಿರಸಿಯ ಗಣೇಶ ನಗರದ ಅಂಗನವಾಡಿಯಲ್ಲಿ ಬಾವಿ ತೋಡಲು ಅಧಿಕಾರಿಗಳು ಅಡ್ಡಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದೀಗ ಗೌರಿ ನಾಯ್ಕ ಅವರು ಸ್ವ-ಇಚ್ಛೆಯಿಂದ ಬಾವಿ ಮುಚ್ಚುವ ನಿರ್ಧಾರಕ್ಕೆ ಬಂದಿದ್ದಾರೆ.
ಕನ್ನಡಪ್ರಭ ವಾರ್ತೆ ಶಿರಸಿ
ಇಲ್ಲಿನ ಗಣೇಶ ನಗರದ ಅಂಗನವಾಡಿಯಲ್ಲಿ ಬಾವಿ ತೋಡಲು ಅಧಿಕಾರಿಗಳು ಅಡ್ಡಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದೀಗ ಗೌರಿ ನಾಯ್ಕ ಅವರು ಸ್ವ-ಇಚ್ಛೆಯಿಂದ ಬಾವಿ ಮುಚ್ಚುವ ನಿರ್ಧಾರಕ್ಕೆ ಬಂದಿದ್ದಾರೆ. ಅಧಿಕಾರಿಗಳ ನಡೆಯೇ ಇವರ ಈ ನಿರ್ಧಾರಕ್ಕೆ ಕಾರಣ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗನವಾಡಿಯಲ್ಲಿ ಮಕ್ಕಳ ಕುಡಿಯುವ ನೀರಿನ ಅನುಕೂಲಕ್ಕಾಗಿ ಗೌರಿ ಅವರು ತಾವೇ ಏಕಾಂಗಿಯಾಗಿ ೩೫ ಅಡಿ ಬಾವಿ ತೋಡಿದ್ದರು.ನಂತರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಅಧಿಕಾರಿಗಳು ಭೇಟಿ ನೀಡಿ ಗೌರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿದ್ದರು. ಇದರ ಬೆನ್ನಲ್ಲೇ ಸೋಮವಾರ ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಬಾವಿಗೆ ಹಲಗೆ ಮುಚ್ಚಿ, ಆ ಜಾಗಕ್ಕೆ ಯಾರೂ ತೆರಳದಂತೆ ವ್ಯವಸ್ಥೆ ಮಾಡಿದ್ದರು. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಗೌರಿ, ನಾನು ಮನೆಗೆ ಹೋದ ಬಳಿಕ ಅಧಿಕಾರಿಗಳು ಬಂದು ಹಲಗೆ ಹಾಕಿ ಮುಚ್ಚಿದ್ದಾರೆ ಎಂದು ತಿಳಿದು ಬಂತು. ನಾನು ಸ್ವ-ಇಚ್ಛೆಯಿಂದ ಬಾವಿ ತೋಡುವುದಕ್ಕೆ ಅಧಿಕಾರಿಗಳು ಅಡ್ಡಿಪಡಿಸಿರುವುದು ಬಹಳ ಬೇಸರ ತಂದಿದೆ ಎಂದು ಅವರು ಹೇಳಿದರು.