ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾಗಿರುವ ತಿರುಪತಿ ಮತ್ತು ಶ್ರೀಶೈಲ ಮಾದರಿಯಲ್ಲಿ ಸುಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಿ ಮಂದಿರವನ್ನೂ ಅಭಿವೃದ್ಧಿಪಡಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಸಂಸದ ಜಗದೀಶ ಶೆಟ್ಟರ್ ಭರವಸೆ ನೀಡಿದರು.ಸಂಸದರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಕುಟುಂಬ ಸಮೇತ ಆಗಮಿಸಿ ದೇವಿ ದರ್ಶನ ಪಡೆದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದು ದೊಡ್ಡ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕೇಂದ್ರವಾಗಿದ್ದು, ದೇವಿ ದರ್ಶನಕ್ಕೆ ಕೋಟ್ಯಂತರ ಜನರು ಬರುತ್ತಾರೆ. ಈ ಕ್ಷೇತ್ರದ ಅಭಿವೃದ್ಧಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಮಂಗಲ ಅಂಗಡಿ ಅವರು ಸಂಸದರಾಗಿದ್ದಾಗ ₹ 11 ಕೋಟಿ ಹಣ ಮಂಜೂರು ಆಗಿತ್ತು. ಆ ಅನುದಾನದಡಿ ಒಂದಿಷ್ಟು ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಅಲ್ಲದೇ, ಅಗತ್ಯವಿರುವ ಕಾಮಗಾರಿಗಳ ಪಟ್ಟಿ ಕೊಡುವಂತೆ ದೇವಸ್ಥಾನ ಆಡಳಿತ ಮಂಡಳಿಗೆ ತಿಳಿಸಿದ್ದಾಗಿ ತಿಳಿಸಿದರು.
ಇಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲು ನನ್ನದೇ ಯೋಜನೆಗಳಿವೆ. ಭಕ್ತರು ಉಳಿದುಕೊಳ್ಳಲು ವಸತಿ ವ್ಯವಸ್ಥೆ, ಕುಡಿಯುವ ನೀರು, ಮೂಲಭೂತ ಸೌಕರ್ಯ ಸೇರಿ ಸಮಗ್ರ ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೇ ಬೆಳಗಾವಿ ಲೋಕಸಭೆ ಕ್ಷೇತ್ರದ ಎಲ್ಲ ಧಾರ್ಮಿಕ ಮತ್ತು ಪ್ರವಾಸೋಧ್ಯಮ ಸ್ಥಳಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಜಗದೀಶ ಶೆಟ್ಟರ್ ಹೇಳಿದರು.ಯಲ್ಲಮ್ಮನಗುಡ್ಡಕ್ಕೆ ರೈಲು ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಈಗಾಗಲೇ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇನೆ. ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು. ದೇವಸ್ಥಾನ ವತಿಯಿಂದ ಸಂಸದ ಜಗದೀಶ ಶೆಟ್ಟರ್ ಹಾಗೂ ಅವರ ಕುಟುಂಬವನ್ನು ಸತ್ಕರಿಸಲಾಯಿತು. ಶಿಲ್ಪಾ ಜಗದೀಶ ಶೆಟ್ಟರ್, ಸಿ.ಸಿ.ಪಾಟೀಲ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ, ಸ್ನೇಹಾ ಪ್ರದೀಪ ಶೆಟ್ಟರ್, ವಿರುಪಾಕ್ಷ ಮಾಮನಿ, ರತ್ನಾ ಆನಂದ ಮಾಮನಿ, ಸೌರಭ ಚೋಪ್ರಾ, ಜಗದೀಶ ಕೌಜಗೇರಿ, ಸಂಜು ನವಲಗುಂದ, ಜಗದೀಶ ಶಿಂತ್ರಿ, ಈರಣ್ಣಾ ಚಂದರಗಿ, ಕೊಳ್ಳಪ್ಪಗೌಡ ಗಂದಿಗವಾಡ, ವೈ.ವೈ.ಕಾಳಪ್ಪನವರ, ಲಕ್ಷ್ಮೀ ಹೂಲಿ, ಪುಂಡಲೀಕ ಮೇಟಿ, ರಮೇಶ ಗೋಮಾಡಿ, ಈಶ್ವರ ಮೇಲಗಿರಿ, ವಿರುಪಾಕ್ಷ ಹನಶಿ, ಬಾಳಪ್ಪ ಮಡಿವಾಳರ, ಜಗದೀಶ ಹನಶಿ, ಬಸಪ್ಪ ಶಿದ್ದಕ್ಕನವರ, ಕೃಷ್ಣ ಲಮಾಣಿ ಹಾಗೂ ಇತರರಿದ್ದರು.