25 ಟಿಎಂಸಿ ನೀರು ಲಿಫ್ಟ್ ಮಾಡಲು 218 ಕೋಟಿ ವೆಚ್ಚ

| Published : Mar 12 2025, 12:53 AM IST

ಸಾರಾಂಶ

ನೀರು ಬಳಕೆ ಸ್ವೇಚ್ಚಾಚಾರದಲ್ಲಿ ಹಿರಿಯೂರಿಗರು ನಂಬರ ಒನ್ । ಸಾಲದೆಂಬಂತೆ ಹೆಚ್ಚುವರಿ ನೀರಿಗೆ ಬೇಡಿಕೆ ಮಂಡನೆ

ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಚ್ಚುಕಟ್ಟು ಪ್ರದೇಶದ ರೈತರಿಗೆ ವಿವಿ ಸಾಗರದ ಜಲಾಶಯದಿಂದ ಬೇಸಗೆಯಲ್ಲಿ ಪ್ರತಿ ಸಲಕ್ಕೆ ಒಂದು ತಿಂಗಳಂತೆ ಎರಡು ಬಾರಿ ನೀರು ಬಿಡಲಾಗುತ್ತದೆ. ಪರಿಸ್ಥಿತಿ ನೋಡಿಕೊಂಡು ಕೆಲವೊಮ್ಮೆ ಮೂರು ಬಾರಿ ಹರಿಸಲಾಗುತ್ತಿದೆ. ಹಾಲಿ ಕಾಲುವೆಗಳಲ್ಲಿ ವೇದಾವತಿ ಹರಿದು ಹೋಗುತ್ತಿದ್ದಾಳೆ. ಆದರೆ ನೀರು ಬಳಕೆ ವಿಚಾರದಲ್ಲಿ ಎಲ್ಲಿಯೂ ಕಾಳಜಿಗಳು ಕಾಣಿಸುತ್ತಿಲ್ಲ.

ಫಸಲು ಒಣಗುತ್ತಿವೆ, ನೀರು ಬಿಡಿ ಎಂದು ಇಲಾಖೆ ಮೇಲೆ ಒತ್ತಡ ಹೇರುವ ರೈತರು ಕಾಲುವೆಯಲ್ಲಿ ನೀರು ಕಾಣಿಸಿಕೊಂಡ ನಂತರ ಉದಾಸೀನಕ್ಕೆ ಮರಳುತ್ತಾರೆ. ನೀರು ಬಳಕೆ ವಿಚಾರದಲ್ಲಿ ಸ್ವೇಚ್ಚಾಚಾರದಿಂದ ನಡೆದುಕೊಳ್ಳಲಾಗುತ್ತಿದೆ ಎಂಬ ದೂರುಗಳಿವೆ. ಖಾಲಿ ಜಮೀನುಗಳಿಗೆ ನೀರು ಹಾಯಿಸಿಕೊಂಡು ಮೊಣಕಾಲು ಮಟ್ಟ ನಿಲ್ಲಿಸಿಕೊಳ್ಳಲಾಗುತ್ತಿದೆ ಎಂದು ಸ್ವತಃ ರೈತರೇ ಆಪಾದಿಸುತ್ತಿದ್ದಾರೆ. ವಾಣಿವಿಲಾಸ ಸಾಗರ ಜಲಾಶಯಕ್ಕೆ 12 ಸಾವಿರ ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದ್ದು ನೀರು ವ್ಯರ್ಥವಾಗುತ್ತಿರುವ ಪರಿ ಇದು. ವಾಟರ್ ಮ್ಯಾನೇಜ್ ಮೆಂಟ್ ಗೊತ್ತಿಲ್ಲದೇ ಇದ್ದರೂ ಹೆಚ್ಚುವರಿ ನೀರಿಗಾಗಿ ಉಪವಾಸ ಸೇರಿದಂತೆ ತರಾವರಿ ಹೋರಾಟಗಳಿಗೆ ಕೆಲ ರೈತರು ಮುಂದಾಗ ಬಲ್ಲರು.

ಬೇರೆ ಜಲಾಶಯದಲ್ಲಿ ಸಂಗ್ರಹವಾಗುವ ನೀರು ಹಾಗೂ ಅದನ್ನು ಅಚ್ಚುಕಟ್ಟು ಪ್ರದೇಶಗಳಿಗೆ ಹಾಯಿಸುವ ಮಾದರಿಯ ಭದ್ರಾ ಮೇಲ್ದಂಡೆಯಡಿ ತಾಳೆ ಮಾಡುವಂತಿಲ್ಲ. ಯೋಜನೆಯಡಿ ಲಭ್ಯವಿರುವ 29 ಟಿಎಂಸಿ ನೀರು ಹೆಚ್ಚು ಕಡಿಮೆ ದುಡ್ಡು ಕೊಟ್ಟು ಖರೀದಿಸಿದಂತೆ. ಕಳೆದ 2019-20ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರ ಜಲಾಶಯಕ್ಕೆ24.55 ಅಂದ್ರೆ ಹೆಚ್ಚು ಕಡಿಮೆ 25 ಟಿಎಂಸಿ ನೀರನ್ನು ಲಿಫ್ಟ್ ಮಾಡಿ ಹರಿಸಲಾಗಿದೆ. ಇದಕ್ಕಾಗಿ ವಿಶ್ವೇಶ್ವರಯ್ಯ ನೀರಾವರಿ ನಿಗಮ 28.829 ಕೋಟಿ ರು. ಖರ್ಚು ಮಾಡಿದೆ. ಅಂದರೆ ಪ್ರತಿ ಟಿಎಂಸಿ ನೀರಿಗೆ 8.75 ಕೋಟಿ (ಎಂಟು ಮುಕ್ಕಾಲು ಕೋಟಿ ರುಪಾಯಿ) ವ್ಯಯ ಮಾಡಲಾಗಿದೆ. ಮೋಟರು ಪಂಪುಗಳು ಓಡಲಿ, ಓಡದಿರಲಿ ಬೆಸ್ಕಾಂಗೆ ವಾರ್ಷಿಕ 25 ಕೋಟಿ ರು. ಮಿನಿಮಮ್ ಚಾರ್ಜ್ ಕಟ್ಟಲೇಬೇಕಾಗಿದೆ.

ಭದ್ರಾ ಮೇಲ್ದಂಡೆಯ 2ನೇ ಹಂತದಲ್ಲಿ ಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹಾಯಿಸಿ ಶಾಂತಿಪುರದ ಬಳಿ 100 ಮೀಟರ್ ಎತ್ತರಕ್ಕೆ ಲಿಪ್ಟ ಮಾಡಲಾಗುತ್ತದೆ. ನಂತರ ಬೆಟ್ಟದಾವರೆಕೆರೆ ಬಳಿ ಮತ್ತೆ 100 ಮೀಟರ್ ಎತ್ತರಕ್ಕೆ ನೀರು ಲಿಫ್ಟ್ ಮಾಡಿ ಕಾಲುವೆಗೆ ಬಿಡಲಾಗುತ್ತದೆ. ಇದಕ್ಕಾಗಿ ಎರಡು ಕಡೆ ಪಂಪ್ ಹೌಸ್ ನಿರ್ಮಾಣ ಮಾಡಲಾಗಿದೆ. ಏಕ ಕಾಲದಲ್ಲಿ ಎರಡೂ ಕಡೆ ಮೋಟರ್ ಪಂಪ್‌ಗಳು ರನ್ ಆದರೆ ಮಾತ್ರ ಸಮಾನಾಂತರದಲ್ಲಿ ಕಾಲುವೆಗೆ ನೀರು ಹಾಯಿಸಬಹುದಾಗಿದೆ. ಕಳೆದ 6 ವರ್ಷದಲ್ಲಿ ಲಿಫ್ಟ್ ಮಾಡಲಾದ 25 ಟಿಎಂಸಿ ನೀರು ನೇರವಾಗಿ ವಿವಿ ಸಾಗರ ಜಲಾಶಯಕ್ಕೆ ಹರಿದಿದೆ. ಬೇರೆ ಯಾವುದೇ ತಾಲೂಕಿಗೆ ಹೋಗಿಲ್ಲ. ಎರಡು ಬಾರಿ ಚಳ್ಳಕೆರೆಗೆ ಕುಡಿವ ನೀರಿಗಾಗಿ 0.50 ಟಿಎಂಸಿ ಹರಿಸಲಾಗಿದೆ. ಉಳಿದಂತೆ ತರಿಕೆರೆ ಬಳಿ ಈ ವರ್ಷ ಡ್ರಿಪ್ ಫೈಲಟ್ ಪ್ರಾಜೆಕ್ಟ್ ಗಾಗಿ ಒಂದಿಷ್ಟು ನೀರನ್ನು ಕಾಲುವೆಯಿಂದ ಡ್ರಾ ಮಾಡಲಾಗಿದೆ.

ಕಳೆದ 6 ವರ್ಷದಲ್ಲಿ ವಿವಿ ಸಾಗರಕ್ಕೆ ನೀರು ಲಿಫ್ಟ್ ಮಾಡಲು 218 ಕೋಟಿ ರು. ವೆಚ್ಚ ಮಾಡಲಾಗಿದೆ.

ನೀರು ಬಳಸಿಕೊಂಡು ರೈತರು 218 ಕೋಟಿ ರು. ಮೊತ್ತದ ಕೃಷಿ, ತೋಟಗಾರಿಕೆ ಉತ್ಪನ್ನ ಸೃಷ್ಠಿಸಿದ್ದಾರೆಯೇ ಎಂಬುದಕ್ಕೆ ಯಾವುದೇ ಖಚಿತ ಮಾಹಿತಿಗಳಿಲ್ಲ. ಭದ್ರಾ ಮೇಲ್ದಂಡೆ ಕಾಮಗಾರಿ ಮುಗಿಯುವುದರ ಒಳಗೆ ಅದರ ಒಟ್ಟಾರೆ ವೆಚ್ಚ 30 ಸಾವಿರ ಕೋಟಿ ತಲುಪುವ ಸಾಧ್ಯತೆಗಳಿವೆ. 29 ಟಿಎಂಸಿ ನೀರು ಪಡೆಯಲು 30 ಸಾವಿರ ಕೋಟಿ ರು. ವೆಚ್ಚವಾಗಲಿದೆ. ಅಂದರೆ ಒಂದು ಟಿಎಂಸಿ ನೀರಿಗೆ ಬರೋಬ್ಬರಿ 1 ಸಾವಿರ ಕೋಟಿ ರು. ಮೊತ್ತವನ್ನು ರಾಜ್ಯ ಸರ್ಕಾರ ವ್ಯಯ ಮಾಡಲಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ ಕಡೆ ಬೇಸಗೆಯಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾದಾಗ ರಾಜ್ಯ ಸರ್ಕಾರ 1 ಕೋಟಿ ರು.ಗೆ ಒಂದು ಟಿಎಂಸಿ ಯಂತೆ ಮಹಾರಾಷ್ಟ್ರದಿಂದ ಖರೀದಿ ಮಾಡಿ ಕೃಷ್ಣಾನದಿಗೆ ನೀರು ಬಿಡಿಸಿಕೊಂಡು ಬರುತ್ತದೆ. ಆದರೆ ಭದ್ರಾ ಮೇಲ್ದಂಡೆ ಪರಿಸ್ಥಿತಿ ಭಿನ್ನವಾಗಿದೆ. ದುಬಾರಿ ವೆಚ್ಚ ಮಾಡಿ ವಿವಿ ಸಾಗರಕ್ಕೆ ನೀರು ಹಾಯಿಸಿದರೂ ಬಳಕೆ ಮಾಡುವಲ್ಲಿ ಹಿರಿಯೂರು ರೈತರಿಂದ ಕಾಳಜಿಗಳು ವ್ಯಕ್ತವಾಗುತ್ತಿಲ್ಲ. ವಿವಿ ಸಾಗರದ ಕಾಲುವೆಗಳ ಆಧುನೀಕರಣಗೊಳಿಸಿ ಡ್ರಿಪ್ ಮೂಲಕ ಬೇಸಗೆ ಹಾಗೂ ಮುಂಗಾರಿಗೆ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿದರೂ ಅದಕ್ಕೂ ವಿರೋಧ ಮಾಡಲಾಗುತ್ತಿದೆ. ಎಲ್ಲದಕ್ಕೂ ವಿರೋಧ ಮಾಡಿಕೊಂಡು ಹೋದರೆ ಭವಿಷ್ಯದಲ್ಲಿ ಮಾರಿಕಣಿವೆ ಡ್ಯಾಂ ಉಳಿಸಿಕೊಳ್ಳುವುದು ಕಷ್ಟ.