ಕನ್ನಡಪ್ರಭ ವಾರ್ತೆ ಕುಮಟಾ
ಶಿಕ್ಷಣ ಮತ್ತು ಸಂಸ್ಕಾರ ಅಮೃತತುಲ್ಯವಾಗಿದ್ದು ಅದರಿಂದ ಅದಮ್ಯ ಶಕ್ತಿ ಸಂಪನ್ನತೆಯಾಗುತ್ತದೆ. ಎಲ್ಲರೂ ಅಹಂಕಾರ ತೊಡೆದು ಸೃಜನಾತ್ಮಕ ಗುಣಗಳಿಂದ ದೇಶಕಟ್ಟುವವರಾಗಬೇಕು ಎಂದು ವೇದಮೂರ್ತಿ ಸುಬ್ರಹ್ಮಣ್ಯ ಭಟ್ಟ ಹೇಳಿದರು.ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.
ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಜಿ.ಕೆ. ಭಟ್ಟ ಮಾತನಾಡಿ, ಆಧುನಿಕ ಬದುಕಿಗೆ ತಕ್ಕಂತೆ ಜನರ ಆಸೆ- ಆಕಾಂಕ್ಷೆಗಳು ಬದಲಾಗಿದ್ದು ಮಕ್ಕಳಲ್ಲಿ ಮೌಲ್ಯಗಳು, ಜನರಲ್ಲಿ ಮಾನವೀಯತೆಗಳು ಮರೆಯಾಗಿವೆ. ಮೊಬೈಲ್ ಅತಿಬಳಕೆಯಿಂದ ಕೆಲಸದಲ್ಲಿ ಶ್ರದ್ಧೆ, ಜೀವನದಲ್ಲಿ ನೆಮ್ಮದಿ ಇಲ್ಲವಾಗಿದೆ. ಇದನ್ನೆಲ್ಲಾ ನಿಯಂತ್ರಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ಸಂಸ್ಥೆಯ ಕಾರ್ಯಾಧ್ಯಕ್ಷ ಆರ್.ಜಿ. ಭಟ್ಟ ಮಾತನಾಡಿ, ಗ್ರಾಮೀಣ ಭಾಗದ ನಮ್ಮ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಬೇಕಾದ ಅಗತ್ಯ ವಾತಾವರಣವನ್ನು ಅನೂಕೂಲತೆ ಕಲ್ಪಿಸಿದ್ದೇವೆ. ಜೊತೆಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದ್ದೇವೆ. ಇನ್ನೂ ಹೆಚ್ಚಿನ ಮಕ್ಕಳು ಈ ಅವಕಾಶವನ್ನು ಪಡೆದುಕೊಳ್ಳುವಂತಾಗಲಿ ಎಂದರು.
ವಿದ್ಯಾರ್ಥಿಗಳಿಗೆ ಹೂ ಗುಚ್ಛ ನೀಡಿ ತರಗತಿಗೆ ಬರಮಾಡಿಕೊಳ್ಳಲಾಯಿತು. ಸರಸ್ವತಿ ಪೂಜೆ, ಗಣಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಪ್ರಸಾದ ವಿತರಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಪ್ರಾಚಾರ್ಯ ಎಂ.ಜಿ. ಭಟ್ಟ ಹಾಗೂ ಎಲ್ಲಾ ವಿಭಾಗದ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.
ಪೂರ್ವ ವಿದ್ಯಾರ್ಥಿ ಸಂಘದ ಕೊಡುಗೆಯಾಗಿ ಸ್ಮಾರ್ಟ್ ಟಿವಿಯನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಬೆಂಗಳೂರಿನ ಭಾರತ ಸಂಸ್ಕೃತಿ ಪ್ರಕಾಶನದ ವತಿಯಿಂದ ಸನಾತನ ಸಂಸ್ಕೃತಿಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು. ಶಿಕ್ಷಣ ವಿಭಾಗದ ಸಂಚಾಲಕ ಟಿ.ಆರ್. ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಗಣೇಶ ಭಟ್ಟ ವಂದಿಸಿದರು. ಶಿಕ್ಷಕ ರಾಘವೇಂದ್ರ ಭಟ್ಟ ನಿರೂಪಿಸಿದರು.