ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಪಾರ ಮತ್ತು ಭದ್ರ ಬುನಾದಿ ಎಂದು ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಹೇಳಿದರು.ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತ, ನ್ಯಾಯವಾದಿ, ಆರ್ಥಿಕ ತಜ್ಞ, ರಾಜಕೀಯ ಹಾಗೂ ಸಾಮಾಜಿಕ ಸುಧಾರಕರಾಗಿದ್ದ ಡಾ. ಅಂಬೇಡ್ಕರ್ ಅವರ ಆದರ್ಶ ಗುಣಗಳನ್ನು, ಧ್ಯೇಯವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಉತ್ತಮ ನವ ಸಮಾಜ ನಿರ್ಮಾಣಕ್ಕಾಗಿ ಪಣತೊಟ್ಟು ಶ್ರಮಿಸಬೇಕು. ಸಂವಿಧಾನವು ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದದ್ದು, ಸಮಾನತೆ ಸೌಹಾರ್ದತೆ ಎತ್ತಿ ಹಿಡಿಯುವ ಸಂವಿಧಾನದ ಕೊಡುಗೆಯು ಭಾರತೀಯರ ಕಣ್ಮಣಿ, ನವ ಭಾರತದ ಸೂರ್ಯ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲಬೇಕು ಎಂದರು.
ಇದೀಗ ಲೋಕಸಭಾ ಚುನಾವಣೆ ಇರುವುದರಿಂದ ಚುನಾವಣೆ ಹಬ್ಬದಲ್ಲಿ ಭಾಗವಹಿಸಿ ನಮ್ಮ ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಚಲಾಯಿಸೋಣ ಎಂದು ಜಿಲ್ಲಾಧಿಕಾರಿ ನುಡಿದರು.ಜಿಲ್ಲಾ ಪಂಚಾಯ್ತಿ ಸಿಇಒ ಗರೀಮಾ ಪನ್ವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ . ಸಂಗೀತಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಪ್ರಕಾಶ ಕುದರಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಕು. ಸರೋಜಾ, ಸಮಾಜದ ಜಿಲ್ಲಾಧ್ಯಕ್ಷ ಸುರೇಶ ಬೀರನೂರ, ಸಹಾಯಕ ನಿರ್ದೇಶಕ ಸಂಗಮೇಶ ಪೂಜಾರಿ, ಸಮಾಜದ ಮುಖಂಡರಾದ ಮರೆಪ್ಪ ಚಟ್ಟೆರಕರ್, ಮಲ್ಲಿನಾಥ ಸುಂಗಲಕರ್, ಗೋಪಾಲ ತಳಿಗೇರಿ ಸೇರಿದಂತೆ ಮ್ಯಾನೇಜರ್ ಎಂ ವೆಂಕಟೇಶ, ಎಂ ಜಾಕೀರ್ ಹುಸೇನ್, ವಾರ್ಡನಗಳಾದ ದೇವಿಂದ್ರಪ್ಪ, ಶ್ರೀಹರಿ ಘಂಟಿ, ಯಲ್ಲಾಲಿಂಗ ಚಿಮ್ನಳ್ಳಿ ಇನ್ನಿತರ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.