ಯುವಜನತೆ ಜಾಗೃತರಾಗುವ ಜತೆಗೆ ಬೇರೆಯವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು
ಕುಷ್ಟಗಿ: ಏಡ್ಸ್ ಕುರಿತು ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿದಾಗ ಮಾತ್ರ ಸಂಪೂರ್ಣ ನಿರ್ಮೂಲನೆ ಸಾಧ್ಯ ಎಂದು ತಾಲೂಕಾಸ್ಪತ್ರೆಯ ವೈದ್ಯ ಡಾ. ಚಂದ್ರಶೇಖರ ದಂಡಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಮ್ಮ ಕ್ಲಿನಿಕ್ ಸಹಯೋಗದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಜನತೆ ಜಾಗೃತರಾಗುವ ಜತೆಗೆ ಬೇರೆಯವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.ಎಚ್ಐವಿ ಪೀಡಿತರನ್ನು ನಿರ್ಲಕ್ಷ್ಯ ಮಾಡಿ ತುಚ್ಛವಾಗಿ ನೋಡುವ ಬದಲು ಅವರೂ ಸಮಾಜದಲ್ಲಿ ಒಬ್ಬರು ಎಂದು ಭಾವಿಸಿ,ಧೈರ್ಯ ತುಂಬಬೇಕು. ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಬೇಕು. ಪ್ರತಿಯೊಬ್ಬರೂ ಎಚ್ಐವಿ ಸೋಂಕಿನ ಬಗ್ಗೆ ತಿಳಿದಿರಬೇಕು. ಸಮುದಾಯದಲ್ಲೂ ಜಾಗೃತಿ ಮೂಡಿಸಬೇಕು. ಎಚ್ಐವಿ ಸೋಂಕಿತ ವ್ಯಕ್ತಿಗಳಿಗೆ ತೋರುವ ತಾರತಮ್ಯ ಹೋಗಲಾಡಿಸಬೇಕು ಎಂದು ತಿಳಿಸಿದರು.
ಎಚ್ಐವಿ ಮನುಷ್ಯನ ರೋಗ ನಿರೋಧಕ ಶಕ್ತಿ ಕಡಿಮೆ ಮಾಡುವ ವೈರಾಣು. ಅಸುರಕ್ಷಿತ ಲೈಂಗಿಕ ಸಂಬಂಧ, ಎಚ್ಐವಿ ಸೋಂಕಿತರ ರಕ್ತ ಪರೀಕ್ಷೆ ಮಾಡದೇ ಪಡೆಯುವುದು, ಸೋಂಕಿತ ತಾಯಿಯಿಂದ ಗರ್ಭಾವಸ್ಥೆಯಲ್ಲಿರುವ ಮಗುವಿಗೆ ಸೋಂಕು ಹರಡುತ್ತದೆ. ಹಾಗಾಗಿ ಬಹಳ ಎಚ್ಚರಿಕೆಯಿಂದ ಇರಬೇಕು ಎಂದರು.ಎಚ್ಐವಿ ಸೋಂಕು ತಡೆಗೆ ಮುಂಜಾಗ್ರತೆಯೆ ಔಷಧ. ಆದ್ದರಿಂದ ಶಿಕ್ಷಣದ ಮೂಲಕ ಸಮುದಾಯದ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ಡಾ. ಎಸ್.ವಿ.ಡಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಸಿಟಿಸಿ ಅಧಿಕಾರಿ ವಿಜಯಲಕ್ಷ್ಮಿ, ಚನ್ನಬಸಪ್ಪ ಎಚ್ಐವಿ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಶ್ರೀಶೈಲ ವಾದಿ, ಎ.ಎಸ್.ಅಂತರಗಂಗಿ, ಕೆ.ಎಸ್.ಮಾಗಿ, ವಿಶ್ವನಾಥ್ ಎಚ್ ಕೋಳೂರು, ಅನಿತಾ ಎಂ.ಪಾಟೀಲ್, ದುರುಗೇಶ್, ಸಕ್ಕುಬಾಯಿ, ಶಿವರಾಜ್ ಕೋಳೂರು, ಈರಪ್ಪ ದ್ಯಾಮವ್ವನ ಗುಡಿ ಸೇರಿದಂತೆ ಅನೇಕರು ಇದ್ದರು.