ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಮೈಗೂಡಿಸಿಕೊಳ್ಳಲು ಸಿ.ಟಿ. ರವಿ ಕರೆ

| Published : Sep 18 2024, 01:55 AM IST

ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಮೈಗೂಡಿಸಿಕೊಳ್ಳಲು ಸಿ.ಟಿ. ರವಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಠಿ ಮತ್ತು ಪ್ರಾಮಾಣಿಕತೆಯನ್ನು ಎಲ್ಲರೂ ತಮ್ಮ ಜೀವನದಲ್ಲಿ ಮೈಗೂಡಿಸಿ ಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಠಿ ಮತ್ತು ಪ್ರಾಮಾಣಿಕತೆಯನ್ನು ಎಲ್ಲರೂ ತಮ್ಮ ಜೀವನದಲ್ಲಿ ಮೈಗೂಡಿಸಿ ಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ. ಚಿಕ್ಕಮಗಳೂರು ಸಿವಿಲ್ ಇಂಜಿನಿಯರ್ಸ್‌ ಅಸೋಸಿಯೇಷನ್‌, ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ ನಗರದ ಲೋಕೋಪಯೋಗಿ ಕಚೇರಿ ಮುಂಭಾಗದ ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಅವರು ಮಾತನಾಡಿದರು. ಹೊಸ ತಾಂತ್ರಿಕತೆಯಲ್ಲಿ ಇಡೀ ಜಗತ್ತೇ ಪ್ರಗತಿ ಸಾಧಿಸಿದರೂ ಇಂದಿನ ಸಮಾಜದಲ್ಲಿ ಪ್ರಾಮಾಣಿಕತೆ ಕೊರತೆಯಿಂದಉದ್ಘಾಟನೆಗೊಳ್ಳುವ ಮೊದಲೇ ಕಟ್ಟಡ ಮತ್ತು ಸೇತುವೆಗಳು ಮುರಿದು ಬೀಳುತ್ತಿವೆ. ವಿಶ್ವೇಶ್ವರಯ್ಯ ಅವರ ದೂರದೃಷ್ಠಿ ಮತ್ತು ಪ್ರತಿಭೆಗೆ ಮೈಸೂರಿನ ಕನ್ನಂಬಾಡಿ ಅಣೆಕಟ್ಟು ಸಾಕ್ಷಿಯಾಗಿ ನಿಂತಿದೆ ಎಂದ ಅವರು, ವಿಶ್ವೇಶ್ವರಯ್ಯ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಅವರ ಜನ್ಮ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ತಿಳಿಸಿದರು. ಭಾರತೀಯ ತಂತ್ರಜ್ಞಾನದ ಜೊತೆಗೆ ವಿಜ್ಞಾನವೂ ಆಗಬೇಕಿದೆ, ವಿಜ್ಞಾನದ ಸಂಗಮದೊಂದಿಗೆ ನವ ಭಾರತದ ನಿರ್ಮಾಣವಾಗಬೇಕಿದ್ದು, ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಮಾಣಿಕತೆ ಕೊರತೆ ಎದ್ದು ಕಾಣುತ್ತಿದೆ. ವಿಶ್ವೇಶ್ವರಯ್ಯ ಅವರು ಕೇವಲ ಮೇಧಾವಿಯಾಗಿರಲಿಲ್ಲ, ಮೇಧಾವಿ ಜೊತೆಗೆ ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದರು.ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಜಯದೇವ್ ಮಾತನಾಡಿ, ಹಳ್ಳಿಗಾಡಿನ ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದ ಸರ್. ಎಂ. ವಿಶ್ವೇಶ್ವರಯ್ಯನವರ ಜ್ಞಾನಶಕ್ತಿ, ಇಚ್ಚಾಶಕ್ತಿಯಿಂದ ಓರ್ವ ಪ್ರಾಮಾಣಿಕ ಮತ್ತು ಕ್ರಿಯಾಶೀಲ ವ್ಯಕ್ತಿಯಾಗಿ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಭಾರತ ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದ್ದು, ಇವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಗವಿರಂಗಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ದೇಶದ ಅಭಿವೃದ್ಧಿ ಯಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ಪಾತ್ರ ಅತಿ ಪ್ರಾಮುಖ್ಯತೆ ಪಡೆದಿದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗುವ ಜೊತೆಗೆ ಅವರ ಆದರ್ಶ ಗಳನ್ನು ಮೈಗೂಡಿಸಿಕೊಂಡು ನಾವೆಲ್ಲಾ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಸಿವಿಲ್ ಇಂಜಿನಿಯರ್ ಸಂಘದ ಅಧ್ಯಕ್ಷ ಜಿ. ರಮೇಶ್ ಮಾತನಾಡಿ, ಲೋಕೋಪಯೋಗಿ ಇಲಾಖೆ ಮುಂಭಾಗದ ಸರ್.ಎಂ. ವಿಶ್ವೇಶ್ವರಯ್ಯ ನವರ ಪುತ್ಥಳಿಯನ್ನು ಹೊಸ ಕಟ್ಟಡದ ಮುಂದೆ ಸ್ಥಳಾಂತರಿಸದೇ ಹಳೇ ಕಟ್ಟಡದ ಮುಂದಿರುವ ವಿಶ್ವೇಶ್ವರಯ್ಯ ಪುತ್ಥಳಿ ನಿರ್ವಹಣೆ ಜವಾಬ್ದಾರಿಯನ್ನು ಸಿವಿಲ್ ಇಂಜಿನಿಯರ್ ಸಂಘಕ್ಕೆ ನೀಡುವಂತೆ ಹಾಗೂ ಲೋಕೋಪಯೋಗಿ ಇಲಾಖೆ ಹೊಸ ಕಟ್ಟಡದ ಮುಂದೆ ಬೇರೊಂದು ಪುತ್ಥಳಿ ಸ್ಥಾಪಿಸಲು ಮನವಿ ಮಾಡಿದರು. ನಗರಸಭೆ ಆಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ನಗರದ ಬೇಲೂರು ರಸ್ತೆಗೆ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಹೆಸರು ನಾಮಕರಣ ಮಾಡುವಂತೆ ಸಿವಿಲ್ ಇಂಜಿನಿಯರ್ಸ್‌ ಸಂಘದಿಂದ ಪ್ರಸ್ತಾವನೆ ಬಂದಿದ್ದು, ಈ ಪ್ರಸ್ತಾವನೆಗೆ ನಗರಸಭೆ ಅಂಕಿತ ಹಾಕಿದೆ. ಸೆ.20 ರಂದು ಬೇಲೂರು ರಸ್ತೆಗೆ ಸರ್.ಎಂ. ವಿಶ್ವೇಶ್ವರಯ್ಯ ರಸ್ತೆ ಎಂದು ಅಧಿಕೃತವಾಗಿ ನಾಮಕರಣ ಮಾಡಲಾಗುವುದು ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ಸುಜಾತ ಕೃಷ್ಣಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ನಾಗರತ್ನ, ನಗರಸಭೆ ಇಂಜಿನಿಯರ್ ಎಂ.ಡಿ. ಲೋಕೇಶ್ ಮಾತನಾಡಿದರು. ಇಂಜಿನಿಯರ್ ಸಂಘದ ಉಪಾಧ್ಯಕ್ಷ ಕೆ.ಪಿ. ನಾಗೇಂದ್ರ, ಸಂಘದ ಖಜಾಂಚಿ ಅಬ್ದುಲ್ ಕಬೀರ್, ಉಪಾಧ್ಯಕ್ಷ ಟಿ. ನಾರಾಯಣಸ್ವಾಮಿ, ಇಂಜಿನಿಯರ್ ಸಂಘದ ಕೋ-ಆರ್ಡಿನೇಟರ್ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುಗುಳುವಳ್ಳಿ ನಿರಂಜನ್ ಉಪಸ್ಥಿತರಿದ್ದರು.

17 ಕೆಸಿಕೆಎಂ 1ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರಿನ ಲೋಕೋಪಯೋಗಿ ಕಚೇರಿ ಮುಂಭಾಗದ ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಲಾಯಿತು. ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ, ಸಂಘದ ಅಧ್ಯಕ್ಷ ಜಿ. ರಮೇಶ್‌, ಅಬ್ದುಲ್‌ ಕಬೀರ್‌, ಗವಿರಂಗಪ್ಪ, ನಾರಾಯಣಸ್ವಾಮಿ ಇದ್ದರು.