ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ, ರೈತರ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಡಿ.9ರಂದು ಬಿಜೆಪಿ ಹಾಗೂ ರೈತ ಸಂಘಟನೆಗಳಿಂದ ಹಮ್ಮಿಕೊಂಡಿರುವ ಬೆಳಗಾವಿ ಚಲೋ ಹೋರಾಟದಲ್ಲಿ ಜಿಲ್ಲೆಯ ರೈತ ಸಂಘಟನೆಗಳು, ರೈತರು, ಮುಖಂಡರು ಭಾಗವಹಿಸುವಂತೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು ಮನವಿ ಮಾಡಿದ್ದಾರೆ.
- ಜಿಲ್ಲೆ ರೈತರು, ಮುಖಂಡರು ಭಾಗವಹಿಸಬೇಕು: ಧನಂಜಯ ಕಡ್ಲೇಬಾಳು ಮನವಿ- - -
ಕನ್ನಡಪ್ರಭ ವಾರ್ತೆ ದಾವಣಗೆರೆಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ, ರೈತರ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಡಿ.9ರಂದು ಬಿಜೆಪಿ ಹಾಗೂ ರೈತ ಸಂಘಟನೆಗಳಿಂದ ಹಮ್ಮಿಕೊಂಡಿರುವ ಬೆಳಗಾವಿ ಚಲೋ ಹೋರಾಟದಲ್ಲಿ ಜಿಲ್ಲೆಯ ರೈತ ಸಂಘಟನೆಗಳು, ರೈತರು, ಮುಖಂಡರು ಭಾಗವಹಿಸುವಂತೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು ಮನವಿ ಮಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ 5 ಸಾವಿರಕ್ಕೂ ಅಧಿಕ ರೈತರು, ಮುಖಂಡರು, ಕಾರ್ಯಕರ್ತರು ಬೆಳಗಾವಿ ಚಲೋ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಿಲ್ಲೆಯ ರೈತ ಸಂಘಟನೆಗಳು ನೇರವಾಗಿ ಬೆಳಗಾವಿ ಸುವರ್ಣ ಸೌಧಕ್ಕೆ ಡಿ.9ರ ಬೆಳಗ್ಗೆ 10 ಗಂಟೆಗೆ ಹಾಜರಿರಬೇಕು ಎಂದರು.ಬಿಜೆಪಿ, ರೈತರ ಒಕ್ಕೂಟ ಭತ್ತ, ಮೆಕ್ಕೆಜೋಳ ಖರೀದಿ ಸ್ಥಾಪಿಸುವಂತೆ ಒಂದು ತಿಂಗಳಿನಿಂದ ಹೋರಾಟ ನಡೆಸಿವೆ. ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಹೊನ್ನಾಳಿ- ನ್ಯಾಮತಿ ಬಂದ್ ಮಾಡಿದ್ದ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರತಿಭಟನಾನಿರತರ ಮೇಲೆ ದೌರ್ಜನ್ಯ ಮಾಡಿ, ಅವಾಚ್ಯವಾಗಿ ನಿಂದಿಸಿ, ನಮ್ಮ ಹಿರಿಯ ಮುಖಂಡರೊಬ್ಬರಿಗೆ ಕಪಾಳಮೋಕ್ಷ ಮಾಡಿ, ಗೂಂಡಾವರ್ತನೆ ತೋರಿದ್ದಾರೆ ಎಂದು ಕಿಡಿಕಾರಿದರು.
ದಾವಣಗೆರೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯಮಟ್ಟದ ಹೋರಾಟಕ್ಕೆ ಇಲ್ಲಿಂದಲೇ ಚಾಲನೆ ನೀಡಿದ್ದರು. ಕಣ್ಣು, ಕಿವಿ, ಮೂಗು ಇಲ್ಲದ ಕಾಂಗ್ರೆಸ್ ಸರ್ಕಾರ ರೈತರ ಹಿತವನ್ನೇ ಮರೆತಿದೆ. ಜಿಲ್ಲಾ ಸಚಿವರು ವಿದೇಶ ಪ್ರವಾಸಕ್ಕೆ ಸೀಮಿತವಾಗಿದ್ದು, ನಿಮ್ಮಿಂದ ಆಗದಿದ್ದರೆ ಬೇರೆ ಶಾಸಕರಿಗೆ ಸಚಿವ ಸ್ಥಾನ ಬಿಟ್ಟು ಕೊಡಿ ಎಂದು ಆಗ್ರಹಿಸಿದರು.ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಕಂದಾಯ ಇಲಾಖೆಗಳು ಸಚಿವರ ಏಜೆಂಟ್ ರೀತಿ ವರ್ತಿಸುತ್ತಿವೆ. ತಹಸೀಲ್ದಾರ್ ಕಚೇರಿಯಲ್ಲಿ ಇರುವುದೇ ಇಲ್ಲ. ಬ್ರೋಕರ್‌ಗಳ ಹಾವಳಿ ಬೇರೆ. ಸಚಿವರು, ಸಂಸದರು ಸೋಷಿಯಲ್ ಮೀಡಿಯಾಗಷ್ಟೇ ಸೀಮಿತವಾಗಿದ್ದಾರೆ. ತಾಪಂ, ಜಿಪಂ, ಪಾಲಿಕೆ ಸೇರಿದಂತೆ ಯಾವುದೇ ಸಭೆ ಮಾಡುತ್ತಿಲ್ಲ ಎಂದು ಟೀಕಿಸಿದರು.
ಪಕ್ಷದ ವಕ್ತಾರ ಬಿ.ಎಂ. ಸತೀಶ ಕೊಳೇನಹಳ್ಳಿ ಮಾತನಾಡಿ, 15 ದಿನಗಳ ಹಿಂದೆ ರಾಜ್ಯಮಟ್ಟದ ಅಧಿಕಾರಿಗಳ ಸಭೆ ನಡೆಸಿ, 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ನಿಗದಿಪಡಿಸಿದ ₹2400 ಜೊತೆಗೆ ರಾಜ್ಯ ಸರ್ಕಾರದಿಂದ ₹600 ಸೇರಿಸಿ, ಮೆಕ್ಕೆಜೋಳವನ್ನು ₹3 ಸಾವಿರದಂತೆ ಖರೀದಿಸಲು ಒತ್ತಾಯಿಸಲಾಗಿತ್ತು. ಆದರೆ, ಇದುವರೆಗೆ ಯಾವುದೇ ಜಿಲ್ಲೆಯಲ್ಲೂ ಒಂದು ಚೀಲ ಮೆಕ್ಕೆಜೋಳವೂ ಖರೀದಿಸಿಲ್ಲ. ದರ ಕುಸಿತದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರೊಂದಿಗೆ ಹುಡುಗಾಟ ಬೇಡ ಎಂದರು.ಮಾಜಿ ಮೇಯರ್ ಎಸ್.ಟಿ.ವೀರೇಶ, ಪಾಲಿಕೆ ಮಾಜಿ ಸದಸ್ಯ ಆರ್.ಶಿವಾನಂದ, ಎಚ್.ಪಿ.ವಿಶ್ವಾಸ, ಕೆ.ಜಿ.ಕಲ್ಲಪ್ಪ, ಮಂಜುನಾಥ ಗುತ್ತೂರು, ಡಿ.ವಿ.ಜಯರುದ್ರಪ್ಪ ಇತರರು ಇದ್ದರು.
- - -(ಬಾಕ್ಸ್) * ಏಜೆನ್ಸಿ ಬಗ್ಗೆ ಚಕಾರವೆತ್ತಿಲ್ಲ
ಡಿಸ್ಟಿಲರಿಗಾಗಿ ಮೆಕ್ಕೆಜೋಳ ಖರೀದಿಸುವುದಾಗಿ ಹೇಳಿ ಸರ್ಕಾರ ಹೊರಡಿಸಿದ ಆದೇಶದಲ್ಲಿ ಖರೀದಿ ಏಜೆನ್ಸಿ ಬಗ್ಗೆ ಚಕಾರವೆತ್ತಿಲ್ಲ ಎಂದು ಜಿಲ್ಲಾ ಬಿಜೆಪಿ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಟೀಕಿಸಿದರು.ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕರನ್ನು ವಿಚಾರಿಸಿದರೆ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಖರೀದಿಸುವುದಾಗಿ ಹೇಳುತ್ತಾರೆ. ಈಚೆಗೆ ಸಹಕಾರ ಇಲಾಖೆ ಸಹಾಯಕ ರಿಜಿಸ್ಟರ್ ಜಿಲ್ಲೆಯ ಸಂಘಗಳ ಕಾರ್ಯದರ್ಶಿಗಳ ಸಭೆ ನಡೆಸಿ, ಮೆಕ್ಕೆಜೋಳ ಖರೀದಿಗೆ ಸೂಚಿಸಿದರೆ ಕಾರ್ಯದರ್ಶಿಗಳು ಖರೀದಿಗೆ ಅಗತ್ಯ ಮೂಲಸೌಕರ್ಯವಿಲ್ಲ. ಇದರಿಂದ ತಮ್ಮ ಸಂಘಕ್ಕೇನು ಲಾಭವೆಂದು ಪ್ರಶ್ನಿಸಿದ್ದಾರೆ. ಹಾಗಾಗಿ ಖರೀದಿ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಕೇವಲ ನೆಪಮಾತ್ರಕ್ಕೆ ಮೆಕ್ಕೆಜೋಳ ಖರೀದಿಸುವುದಾಗಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.
- - --8ಕೆಡಿವಿಜಿ1: ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ವಕ್ತಾರ ಬಿ.ಎಂ.ಸತೀಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.