ಸಾರಾಂಶ
ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ ನರಗುಂದಭವರೋಗದ ಜಾಡು ತೊರೆದು, ಯೋಗ ನಿಷ್ಠೆಯಿಂದ ಸಮಾಜದಲ್ಲಿ ಸ್ವಾಸ್ಥ್ಯ ನಿರ್ಮಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾಪುರುಷರಲ್ಲಿ ಗದಗ ಜಿಲ್ಲೆ ನರಗುಂದ ತಾಲೂಕಿನ ಸುಕ್ಷೇತ್ರ ಭೈರನಹಟ್ಟಿ ಗ್ರಾಮದ ಶ್ರೀ ಗುರು ಬ್ರಹ್ಮಾನಂದ ಪರಮಹಂಸರು ಒಬ್ಬರು.
ಮೂಲತಃ ಗುಜರಾತ ಪ್ರಾಂತದ ಶಿವಬಡೋಚಾ ಗ್ರಾಮದ ಗುರುರಾಮ ಪ್ರಸಾದ್ ಹಾಗೂ ದೇವಜಾನಕಿ ದಂಪತಿಯ ಪುತ್ರ ಬ್ರಹ್ಮಾನಂದ ಪರಮಹಂಸರು, ಬಾಲ್ಯದಲ್ಲಿಯೆ ಅನೇಕ ಲೀಲೆಗಳನ್ನ ತೋರಿ ಸ್ವಗ್ರಾಮದಲ್ಲಿಯೇ ಗುರುತ್ವ ಸಾಧಿಸಿದವರು. ಬಾಲ್ಯದಿಂದಲೆ ಅವರಿಗೆ ಅಧ್ಯಾತ್ಮದತ್ತ ಒಲವಿತ್ತು, ಹಾಗಾಗಿ ಲೌಕಿಕ ಬದುಕಿನ ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಬಯಸಿದ ಶ್ರೀಗಳು ಸಂಸಾರ ತ್ಯಜಿಸಿ ದೇಶ ಸಂಚಾರ ಕೈಗೊಂಡು ಢಾಕೋರ ಪಟ್ಟಣಕ್ಕೆ ಬಂದರು. ಅಲ್ಲಿ ಶ್ರೀಕೃಷ್ಣ ದರ್ಶನ ಪಡೆದು ಗುಮಟಿಯ ಗಂಗಾನದಿಯಲ್ಲಿ ಸ್ನಾನಗೈದು ಬಂದಾಗ ಶ್ರೀಗಳು ಅಲ್ಲಿರುವ ಜನರಿಗೆ ದೈವಿ ಸ್ವರೂಪಿಗಳಾಗಿ ಕಂಡುಬಂದರು.ಮನೆ ಬಿಟ್ಟ ಬಾಲಯೋಗಿ ಬ್ರಹ್ಮಾನಂದರು ಉತ್ತರದ ಕಾಶಿ, ದ್ವಾರಕೆಗಳ ದೇವಸನ್ನಿಧಿಯಲ್ಲಿ ಸೇವೆಗೈದು ಹಿಮಾಲಯದಲ್ಲಿ ತಪೋಗೈದರೆಂದು ಪ್ರತೀತಿ ಇದೆ. ತಪಸ್ವಿಗಳಾದ ಯುವ ಬ್ರಹ್ಮಾನಂದ ಶ್ರೀಗಳು ದಕ್ಷಿಣ ಭಾರತದ ಪವಿತ್ರ ಸ್ಥಳಗಳನ್ನೆಲ್ಲ ಸಂದರ್ಶಿಸಿ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಸೇವೆ ಮಾಡಿ ಯೋಗ ಸಾಧನೆಗೈದವರು.
ನಂತರ ಬಾಗಲಕೋಟಿ ಜಿಲ್ಲೆ ಬದಾಮಿ ತಾಲೂಕಿನ ಬನಶಂಕರಿಗೆ ಬಂದ ಶಾಖಾಂಬರಿ ದೇವಿಯನ್ನು ಸಾಕ್ಷಾತ್ಕರಿಸಿಕೊಂಡು ದೇವಿಯ ಕೈಯಿಂದ ಮೃಷ್ಟಾನ್ನ ಭೋಜನ ಮಾಡಿ ಅಲ್ಲಿರುವ ಪೂಜಾರಿಗಳಿಗೆ ಅಚ್ಚರಿ ಪಡಿಸಿದರು.ಅಲ್ಲಿಂದ ಮುಂದೆ ಸಂಚರಿಸುತ್ತ ನರಗುಂದ ತಾಲೂಕು ಭೈರನಹಟ್ಟಿ ಗ್ರಾಮಕ್ಕೆ ಆಗಮಿಸಿ ಅಲ್ಲಿ ಭಕ್ತರಿಗೆ ಧರ್ಮಬೋಧನೆ ಮಾಡಿದರು. ಅಲ್ಲಿಂದ ಮುಂದೆ ರಡ್ಡೇರ್ ನಾಗನೂರ ನಂತರ ಬದಾಮಿ ತಾಲೂಕು ಗೋವನಕೊಪ್ಪದಲ್ಲಿಯೂ ಅಧ್ಯಾತ್ಮದತ್ತ ಭಕ್ತರನ್ನ ಒಲಿಸುತ್ತ ತಮ್ಮ ಸೇವೆ ಮುಂದುವರಿಸಿದವರು.ಪವಾಡ. ಗುರು ಬ್ರಹ್ಮಾನಂದ ಸ್ವಾಮಿಗಳು ಭೈರನಹಟ್ಟಿಗೆ ಬಂದಾಗ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರವಿತ್ತು. ಆ ಸಮಯದಲ್ಲಿ ಗ್ರಾಮಸ್ಥರನ್ನು ಸೇರಿಸಿ ಅವರಿಗೆ ಕೆರೆ ನಿರ್ಮಾಣ ಮಾಡಲು ತಿಳಿಸಿದಾಗ ಶ್ರೀಗಳ ಅಪ್ಪಣೆಯಂತೆ ಜನತೆ ಸೇರಿಕೊಂಡು ಗ್ರಾಮದ 25 ಎಕರೆ ಜಮೀನದಲ್ಲಿ ಬೃಹತ ಕೆರೆ ನಿರ್ಮಾಣ ಮಾಡಿದರು. ಮುಂದೆ ಬರಗಾಲದಿಂದ ಕೆರೆ ತುಂಬದಿದ್ದಾಗ ಬ್ರಹ್ಮಾನಂದ ಶ್ರೀಗಳು ತಮ್ಮ ತಪಸ್ಸಿನಿಂದ ಮಳೆ ತರಸಿದರು. ಇದೇ ರೀತಿ ಗ್ರಾಮದಲ್ಲಿ ಹಲವಾರು ಪವಾಡ ಮಾಡಿದ ಮಹಾನ ಸ್ವಾಮಿಗಳಾಗಿದ್ದರು.
ಮಹಾಪುರುಷರ ಗುರು ಬ್ರಹ್ಮಾನಂದ ಮಹಾಸ್ವಾಮಿಗಳವರ ೧೦೯ನೇ ಜಾತ್ರಾ ಮಹೋತ್ಸವ ಜೂ.17ರ ಸೋಮವಾರ ನಡೆಯಲಿದ್ದು, ಸಂಜೆ 5ಕ್ಕೆ ಭೈರನಹಟ್ಟಿ ಹಾಗೂ ಶಿರೋಳ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ನೇತೃತ್ವದಲ್ಲಿ ರಥೋತ್ಸವ ನಡೆಯಲಿದೆ.ಕನ್ನಡದ ಧ್ವಜ
ರಥೋತ್ಸವದಲ್ಲಿ ಕನ್ನಡ ಬಾವುಟದ ಜೊತೆಗೆ ಭಾವೈಕ್ಯತೆಯನ್ನು ಸಾರುವ ಧ್ವಜವನ್ನು ಕಟ್ಟಿ ನಾಡಿಗೆ ಭಾವೈಕ್ಯತೆಯ ಸಂದೇಶವನ್ನು ಸಾರುವುದು ವಿಶೇಷ ರಥವಾಗಿದೆ.ಭೈರನಹಟ್ಟಿ ಸುಮಾರು 100 ವರ್ಷಗಳ ಹಿಂದೆ ಕುಗ್ರಾಮವಾಗಿತ್ತು, ಬ್ರಹ್ಮಾನಂದ ಮಹಸ್ವಾಮಿಗಳ ಪಾದಸ್ವರ್ಶದಿಂದ ಇಂದು ಈ ಗ್ರಾಮ ನಾಡಿನಲ್ಲಿ ಹಲವಾರು ರೀತಿ ಸಾಧನೆ ಮಾಡಿದೆ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳುತ್ತಾರೆ.
ನಾಡಿನಲ್ಲಿ ಹಲವಾರು ರೀತಿ ಜಾತ್ರಾ ಮಹೋತ್ಸವ ಜರಗುತ್ತವೆ. ಆದರೆ ಕನ್ನಡದ ಧ್ವಜ ಕಟ್ಟಿ ಜಾತ್ರೆ ಮಾಡುವುದು ಬ್ರಹ್ಮಾನಂದ ಶ್ರೀಗಳ ರಥೋತ್ಸವದಲ್ಲಿ ಮಾತ್ರ. ಇದು ಶಾಂತಲಿಂಗ ಶ್ರೀಗಳಿಂದ ಸಾಧ್ಯವಾಗಿದೆ ಎಂದು ನವಲಗುಂದ ತಾಲೂಕಿನ ತಿರ್ಲಾಪೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಎ.ಎಸ್. ತೆಗ್ಗಿನಮನಿ ಹೇಳುತ್ತಾರೆ.ನಮ್ಮ ಪೂರ್ವಜರು ಹೇಳುವ ಪ್ರಕಾರ ನಾಡಿನಲ್ಲಿ ಭೈರನಹಟ್ಟಿ ಗ್ರಾಮ ಬಹಳ ಹಿಂದುಳಿದಿತ್ತು. ಬ್ರಹ್ಮಾನಂದ ಪೂಜ್ಯರು ಮತ್ತು ಸದ್ಯದ ಶಾಂತಲಿಂಗ ಶ್ರೀಗಳಿಂದ ಇಂದು ನಾಡಿನಲ್ಲಿ ಭೈರನಹಟ್ಟಿ ದೊರೆಸ್ವಾಮಿ ಮಠ, ಕನ್ನಡ ಮಠ ಎಂದು ಖ್ಯಾತಿಯಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಆರ್.ವೈ. ಐನಾಪೂರ.