ಕರ್ನಾಟಕ ಚಿತ್ರಕಲಾ ಪರಿಷತ್‌ ಆವರಣದ ಸುತ್ತಮುತ್ತ ಭಾನುವಾರ 23ನೇ ಚಿತ್ರಸಂತೆ ನಡೆಯಲಿದೆ. ಪರಿಸರ ವಿಷಯ ಆಧರಿಸಿದ ಚಿತ್ರಸಂತೆಯಲ್ಲಿ ಈ ಬಾರಿ ಹಲವು ಆಕರ್ಷಣೆಗಳು ಇರಲಿವೆ. ಒಂದು ದಿನದ ಈ ಚಿತ್ರಸಂತೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ರಾತ್ರಿ 8ರ ವರೆಗೆ ನಡೆಯಲಿದೆ.

 ಬೆಂಗಳೂರು : ಕರ್ನಾಟಕ ಚಿತ್ರಕಲಾ ಪರಿಷತ್‌ ಆವರಣದ ಸುತ್ತಮುತ್ತ ಭಾನುವಾರ 23ನೇ ಚಿತ್ರಸಂತೆ ನಡೆಯಲಿದೆ. ಪರಿಸರ ವಿಷಯ ಆಧರಿಸಿದ ಚಿತ್ರಸಂತೆಯಲ್ಲಿ ಈ ಬಾರಿ ಹಲವು ಆಕರ್ಷಣೆಗಳು ಇರಲಿವೆ. ಒಂದು ದಿನದ ಈ ಚಿತ್ರಸಂತೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ರಾತ್ರಿ 8ರ ವರೆಗೆ ನಡೆಯಲಿದೆ.

ಸಿದ್ದರಾಮಯ್ಯ ಉದ್ಘಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ 10.30ಕ್ಕೆ ಚಿತ್ರಸಂತೆ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಂಸದ ಪಿ.ಸಿ. ಮೋಹನ್‌, ಶಾಸಕರಾದ ರಿಜ್ವಾನ್‌ ಅರ್ಷದ್‌, ಎಸ್‌.ಟಿ.ಸೋಮಶೇಖರ್‌ ಪಾಲ್ಗೊಳ್ಳುವರು.

ವಿಶ್ವದೆಲ್ಲೆಡೆ ಪರಿಸರ ಜಾಗೃತಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ, ಪ್ರಕೃತಿ, ಪರಿಸರ ಕುರಿತ ವಿಷಯವನ್ನಾಧರಿಸಿ ಚಿತ್ರಸಂತೆ ಆಯೋಜಿಸಲಾಗುತ್ತಿದೆ. ಈ ವರ್ಷ 22 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಿಂದ 1500ಕ್ಕೂ ಹೆಚ್ಚು ಕಲಾವಿದರು ಚಿತ್ರಗಳನ್ನು ಪ್ರದರ್ಶಿಸುವರು. ‘ಚಿತ್ರಸಂತೆಗೆ ಆಗಮಿಸುವವರಿಗೆ ಅನುಕೂಲವಾಗುವಂತೆ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣ, ಮಂತ್ರಿ ಮಾಲ್ ಮೆಟ್ರೊ ನಿಲ್ದಾಣ, ವಿಧಾನಸೌದ ಮೆಟ್ರೊ ನಿಲ್ದಾಣಗಳಿಂದ ಶಿವಾನಂದ ವೃತ್ತದವರೆಗೆ ಫೀಡರ್ ಬಸ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ 10 ನಿಮಿಷಕ್ಕೊಂದರಂತೆ ಬಿಎಂಟಿಸಿ ಬಸ್‌ಗಳು ಲಭ್ಯ ಇರಲಿವೆ. ಸಾರ್ವಜನಿಕರಿಗೆ ಆಯ್ದ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆಹಾರ ಮಳಿಗೆಗಳ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಮತ್ತು ಆಂಬ್ಯುಲೆನ್ಸ್ ಸೌಲಭ್ಯ, ಭದ್ರತಾ ಉದ್ದೇಶಕ್ಕಾಗಿ ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಮಾಡಲಾಗಿದೆ, ಸಂಚಾರಿ ಎಟಿಎಂ ಸೌಲಭ್ಯ, ಇಡೀ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ವಿವಿಧ ವ್ಯವಸ್ಥೆ

‘ವಿಶೇಷವಾಗಿ ಈ ಬಾರಿ ಶಿವಾನಂದ ವೃತ್ತದಿಂದ ವಿಂಡ್ಸರ್ ಮ್ಯಾನರ್ ಬ್ರಿಡ್ಜ್‌ವರೆಗೆ ಆಯ್ದ ಭಾಗಗಳಲ್ಲಿ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಗಣ್ಯರು, ವಿಶೇಷಚೇತನರು, ಹಿರಿಯ ನಾಗರಿಕರನ್ನು ಕರೆದೊಯ್ಯಲು ಎಲೆಕ್ಟ್ರಿಕ್ ವಾಹನ (ಬಗ್ಗಿ) ಗಳ ವ್ಯವಸ್ಥೆ ಮಾಡಲಾಗಿದೆ.

ಕ್ರೆಸೆಂಟ್ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆ ಹಾಗೂ ಬಿಡಿಎ ಆವರಣ, ರೈಲ್ವೆ ಪ್ಯಾರಲಲ್ ರಸ್ತೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುತ್ತದೆ. ಆಯ್ದ ಸ್ಥಳಗಳಲ್ಲಿ ಮೊಬೈಲ್ ಶೌಚಾಲಯ ಹಾಗೂ ಕಸದ ಡ್ರಂಗಳನ್ನು ವ್ಯವಸ್ಥೆ ಮಾಡಲಾಗಿದೆ.

* ಚಿತ್ರಸಂತೆಗೆ ಪ್ರವೇಶ ಉಚಿತ

* ನೂರು ರು.ನಿಂದ ಲಕ್ಷಾಂತರ ಮೌಲ್ಯದ ಕಲಾಕೃತಿ ಲಭ್ಯ.

* ಶಿವಾನಂದ ವೃತ್ತದಿಂದ ವಿಂಡ್ಸರ್ ಮ್ಯಾನರ್‌ವರೆಗೆ ವಾಹನಗಳ ಸಂಚಾರ ಸಂಪೂರ್ಣ ನಿಷೇಧ

* ಮಲ್ಲೇಶ್ವರಂ, ಮೆಜೆಸ್ಟಿಕ್‌, ವಿಧಾನಸೌಧ ಮೆಟ್ರೋ ನಿಲ್ದಾಣಗಳಿಂದ ಫೀಡರ್ ಬಸ್‌ ವ್ಯವಸ್ಥೆ

* ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಚಿತ್ರಸಂತೆ

* 5 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ