ಇಂದು ಕುಷ್ಟಗಿಯ ಬುತ್ತಿ ಬಸವೇಶ್ವರ ಜಾತ್ರೆ

| Published : Feb 12 2025, 12:30 AM IST

ಸಾರಾಂಶ

ಅನ್ನದಾನೇಶ್ವರ ಶಾಖಾಮಠ ಪಟ್ಟಣದ ಆರಾಧ್ಯ ದೇವ ಶ್ರೀ ಬುತ್ತಿ ಬಸವೇಶ್ವರ ಜಾತ್ರಾ ಮಹೋತ್ಸವವು ಫೆ.12ರಂದು (ಭರತ ಹುಣ್ಣಿಮೆ ದಿನ) ಹಾಲಕೇರಿಯ ಅನ್ನದಾನೇಶ್ವರ ಶಾಖಾಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಅನ್ನದಾನೇಶ್ವರ ಶಾಖಾಮಠ ಪಟ್ಟಣದ ಆರಾಧ್ಯ ದೇವ ಶ್ರೀ ಬುತ್ತಿ ಬಸವೇಶ್ವರ ಜಾತ್ರಾ ಮಹೋತ್ಸವವು ಫೆ.12ರಂದು (ಭರತ ಹುಣ್ಣಿಮೆ ದಿನ) ಹಾಲಕೇರಿಯ ಅನ್ನದಾನೇಶ್ವರ ಶಾಖಾಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆ ಬುತ್ತಿ ಬಸವೇಶ್ವರ ಮೂರ್ತಿಗೆ ಪೂಜೆ ಪುನಸ್ಕಾರಗಳು ಅಭಿಷೇಕ, ರುದ್ರಾಭಿಷೇಕ ಅನೇಕ ಧಾರ್ಮಿಕ ಕಾರ್ಯ ನಡೆಯುತ್ತವೆ. ನಂತರ ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಿಂದ ನಂದೀಶ್ವರ ಮೂರ್ತಿಯನ್ನು ತೇರಿನ ಕಳಸದೊಂದಿಗೆ ಸಕಲ ವಾದ್ಯಮೇಳದೊಂದಿಗೆ ಬುತ್ತಿ ಬಸವೇಶ್ವರ ದೇವಸ್ಥಾನಕ್ಕೆ ಮೂರ್ತಿ ತರಲಾಗುತ್ತದೆ. ನಂತರ ಮಧ್ಯಾಹ್ನ ಅನ್ನದಾಸೋಹ ಮಹಾಪ್ರಸಾದ ನಡೆಯಲಿದೆ.

ಸಂಜೆ ಹಾಲುಮತ ಸಮುದಾಯದ ಗುರುಗಳಾದ ಶಿವಾನಂದಯ್ಯ ಗುರುವಿನ, ಬಸಯ್ಯ ಗುರುವಿನ್, ತೇಜಯ್ಯ ಗುರುವಿನ್ ಹಾಗೂ ಹಾಲುಮತ ಸಮುದಾಯದ ಸದ್ಭಕ್ತರು ತೇರಿಗೆ ಹಗ್ಗವನ್ನು ಮೆರವಣಿಗೆ ಮೂಲಕ ತಂದು ಸಮರ್ಪಣೆ ಮಾಡುತ್ತಾರೆ. ನಂತರ ಶ್ರೀಗಳು ಹಾಗೂ ಜನಪ್ರತಿನಿಧಿಗಳ ಚಾಲನೆಯೊಂದಿಗೆ ಸಂಜೆ 5.30ಕ್ಕೆ ಮಹಾರಥೋತ್ಸವ ಅದ್ಧೂರಿಯಾಗಿ ಜರುಗುತ್ತದೆ.

ಝಗಮಗಿಸುವ ದೀಪಗಳು:

ಪಟ್ಟಣದ ಬುತ್ತಿ ಬಸವೇಶ್ವರ ಜಾತ್ರಾ ಅಂಗವಾಗಿ ರಥೋತ್ಸವದ ಮಾರ್ಗದಲ್ಲಿ ಝಗಮಗಿಸುವ ವಿದ್ಯುತ್ ದೀಪ ಅಳವಡಿಸಲಾಗಿದೆ. ಈಗಾಗಲೇ ಪುರಸಭೆಯಿಂದ ದೇವಸ್ಥಾನದ ಆವರಣ ಹಾಗೂ ರಥದ ಬೀದಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗಿದೆ.

ಇತಿಹಾಸ:

ಈ ಬುತ್ತಿ ಬಸವೇಶ್ವರ ದೇವಸ್ಥಾನವೂ ಹಾಲಕೇರೆ ಅನ್ನದಾನೇಶ್ವರ ಮಠದ ಶಾಖಾ ಮಠವಾಗಿದ್ದು, ಈ ಭಾಗದ ಆರಾಧ್ಯ ದೇವರಾಗಿ ಸಹಸ್ರಾರು ಕುಟುಂಬದವರ ಮನೆ ದೇವರಾಗುವ ಮೂಲಕ ಒಂದು ಧಾರ್ಮಿಕ ಕ್ಷೇತ್ರವಾಗಿದೆ. ಈ ದೇವಸ್ಥಾನ ತನ್ನದೆಯಾದ ಇತಿಹಾಸ ಹೊಂದಿದ್ದು, 12ನೇ ಶತಮಾನದಲ್ಲಿ ಬಸವಣ್ಣನವರು ಉಳುವಿಗೆ ಹೋಗುವಾಗ ಮಾರ್ಗಮಧ್ಯೆ ಇರುವ ಈ ಸ್ಥಳದಲ್ಲಿ ತಾವು ತಂದಿರುವ ಬುತ್ತಿಯನ್ನು ಬಿಚ್ಚಿ ಊಟ ಮಾಡಿ, ವಿಶ್ರಾಂತಿ ಪಡೆದು ಹೋಗಿರುವ ಹಿನ್ನೆಲೆ ಈ ತಾಣ ಬುತ್ತಿ ಬಸವೇಶ್ವರ ದೇವಸ್ಥಾನವಾಯಿತು ಎಂಬ ಪ್ರತೀತಿಯಿದೆ. ದೇವಸ್ಥಾನ ಸ್ಥಾಪನೆಯಿಂದ ಇಂದಿನವರೆಗೂ ಕುಷ್ಟಗಿ ಭಾಗದ ಭಕ್ತರ ಪಾಲಿನ ಧಾರ್ಮಿಕ ಕೇಂದ್ರವಾಗಿದೆ. ಪ್ರತಿ ವರ್ಷ ಭರತ ಹುಣ್ಣಿಮೆಯ ದಿನದಂದು ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾಗುತ್ತಾರೆ.