ಇಂದು ವರಮಹಾಲಕ್ಷ್ಮೀ ಹಬ್ಬ: ಮನೆಗಳಲ್ಲಿ ಸಂಭ್ರಮ

| Published : Aug 08 2025, 01:01 AM IST

ಸಾರಾಂಶ

ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಮಹಿಳೆಯರು, ಯುವತಿಯರು ಸಂಭ್ರಮ, ಸಡಗರದಿಂದ ಆಚರಿಸುವ ಶ್ರೀ ವರಮಹಾಲಕ್ಷ್ಮೀ ಹಬ್ಬಕ್ಕೆ ನಗರ ಸೇರಿದಂತೆ ಜಿಲ್ಲಾದ್ಯಂತ ಗುರುವಾರದಿಂದಲೇ ಮನೆ ಮನೆಗಳಲ್ಲಿ ಸಿದ್ಧತೆ ನಡೆಯಿತು.

- ಬೆಲೆ ಏರಿಕೆ ನಡುವೆಯೂ ಬಟ್ಟೆ, ಹಣ್ಣು-ಹೂವು, ಪೂಜಾ ಸಾಮಗ್ರಿ ಭರ್ಜರಿ ಖರೀದಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಮಹಿಳೆಯರು, ಯುವತಿಯರು ಸಂಭ್ರಮ, ಸಡಗರದಿಂದ ಆಚರಿಸುವ ಶ್ರೀ ವರಮಹಾಲಕ್ಷ್ಮೀ ಹಬ್ಬಕ್ಕೆ ನಗರ ಸೇರಿದಂತೆ ಜಿಲ್ಲಾದ್ಯಂತ ಗುರುವಾರದಿಂದಲೇ ಮನೆ ಮನೆಗಳಲ್ಲಿ ಸಿದ್ಧತೆ ನಡೆಯಿತು.

ಇಂದು ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ. ಇದರ ಮುನ್ನಾದಿನವಾದ ನಿನ್ನೆ (ಗುರುವಾರ) ಜನರು ಪೂಜೆಗೆ ಬೇಕಾದ ಹೂವುಗಳು, ಹಣ್ಣುಗಳು ಇತರೆ ಅಗತ್ಯ ಸಾಮಾನುಗಳ ಖರೀದಿಯಲ್ಲಿ ತೊಡಗಿದ್ದರು. ಗುರುವಾರ ನಗರದಲ್ಲಿ ಮಳೆಯಿರದ ಕಾರಣ ಮಾರುಕಟ್ಟೆ ವ್ಯಾಪಾರಿಗಳು, ವರ್ತಕರು, ಗ್ರಾಹಕರಿಂದ ತುಂಬಿಹೋಗಿತ್ತು.

ಪ್ರತಿ ವರ್ಷದಂತೆ ಈ ವರ್ಷವೂ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟಿದೆ. ಮಾದರೂ, ದರ ಏರಿಕೆ ನಡುವೆಯೂ ಜನರು ಹೊಸ ಬಟ್ಟೆ, ವಿವಿಧ ಬಗೆಯ ಹಣ್ಣು, ಹೂವು, ಪೂಜಾ ಸಾಮಗ್ರಿಗಳ ಖರೀದಿಯನ್ನು ಸಂಭ್ರಮದಿಂದಲೇ ನಡೆಸಿದರು.

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿಯೇ ಮಾರುಕಟ್ಟೆಯಂಥ ವಾತಾವರಣ ನಿರ್ಮಾಣವಾಗಿತ್ತು. ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಗಡಿಯಾರ ಕಂಬ ಸರ್ಕಲ್, ಪ್ರವಾಸಿ ಮಂದಿರ ರಸ್ತೆ, ಗುಂಡಿ ವೃತ್ತ, ಚಾಮರಾಜಪೇಟೆ, ರಾಜನಹಳ್ಳಿ ಹನುಮಂತಪ್ಪ ಛತ್ರ, ಅರುಣ ಟಾಕೀಸ್, ಗಡಿಯಾರ ಕಂಬ, ಕಾಯಿಪೇಟೆ, ದುಗ್ಗಮ್ಮ ದೇವಸ್ಥಾನ ಸರ್ಕಲ್, ನಿಟುವಳ್ಳಿ, ಕೆ.ಆರ್. ಮಾರುಕಟ್ಟೆ, ಮಂಡಿಪೇಟೆ, ಚಾಮರಾಜ ಪೇಟೆ ಸರ್ಕಲ್, ವಿನೋಬನಗರ, ಎಂ.ಜಿ.ರಸ್ತೆ, ಹೊಂಡದ ಸರ್ಕಲ್ ಇತರೆಡೆಗಳ ರಸ್ತೆ ಬದಿಯಲ್ಲಿ ವಸ್ತುಗಳ ಮಾರಾಟ ಜೋರಾಗಿತ್ತು. ವ್ಯಾಪಾರಿಗಳು ಬಾಳೆಕಂಬ, ಮಾವಿನ ತೋರಣ, ಹೂವು-ಹಣ್ಣುಗಳ ಮಾರಾಟದಲ್ಲಿ ತೊಡಗಿದ್ದರು. ಅಗತ್ಯ ಸಾಮಾನುಗಳ ಖರೀದಿಗೆ ಮಳೆ ಬಿಡುವು ನೀಡಿದ್ದ ಪರಿಣಾಮ ಹಬ್ಬ ಆಚರಿಸುವವರು ಖುಷಿಯಿಂದಲೇ ಬೇಳೆ-ಕಾಳು, ಮತ್ತಿತರ ದಿನಸಿ-ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡಿದರು.

ಹಬ್ಬದ ಹಿನ್ನೆಲೆ ನಗರದ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳ ಸಿದ್ಧತೆ ನಡೆದಿತ್ತು. ನಗರ ದೇವತೆ ದುಗ್ಗಮ್ಮ, ಗಣಪತಿ, ಲಿಂಗೇಶ್ವರ, ಚೌಡೇಶ್ವರಿ ಅಮ್ಮನವರು ಸೇರಿದಂತೆ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

- - -

(ಬಾಕ್ಸ್‌) - ಸೇವಂತಿ-ಚಂಡು ಹೂವು: 1 ಮಾರಿಗೆ ₹50

- ಕನಕಾಂಬರ, ಕಾಕಡ ಹೂವು: ₹50-₹60

- ಬಾಳೆಹಣ್ಣು 1 ಕೆ.ಜಿ.ಗೆ ₹100-₹120

- ತೆಂಗಿನಕಾಯಿ: ₹50

- - -

-7ಕೆಡಿವಿಜಿ46, 47, 48, 49.ಜೆಪಿಜಿ:

ದಾವಣಗೆರೆಯಲ್ಲಿ ಶ್ರೀ ವರಮಹಾಲಕ್ಷ್ಮೀ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಹೂ, ಹಣ್ಣುಗಳ ವ್ಯಾಪಾರ ಜೋರಾಗಿ ನಡೆಯಿತು.