ಸೋಮವಾರ ಬೆಳಗ್ಗೆ ಬಸವಣ್ಣ ದೇವರು ಹಾಗೂ ಗುರು ಬ್ರಹ್ಮಾನಂದ ಸ್ವಾಮಿಗಳ ಮೂರ್ತಿಗೆ ರುದ್ರಾಭಿಷೇಕ ನಡೆಯಲಿದೆ. ಸಂಜೆ 5.30ಕ್ಕೆ ಭೈರನಹಟ್ಟಿ ಹಾಗೂ ಶಿರೋಳ ಮಠದ ಶಾಂತಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ರಥೋತ್ಸವಕ್ಕೆ ಚಾಲನೆ ಸಿಗಲಿದೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಬ್ರಹ್ಮಾನಂದ ಶ್ರೀಗಳ ರಥೋತ್ಸವ ಸಂಭ್ರಮದಿಂದ ಜೂ. 22ರಂದು ನೆರವೇರಲಿದೆ.

ಸೋಮವಾರ ಬೆಳಗ್ಗೆ ಬಸವಣ್ಣ ದೇವರು ಹಾಗೂ ಗುರು ಬ್ರಹ್ಮಾನಂದ ಸ್ವಾಮಿಗಳ ಮೂರ್ತಿಗೆ ರುದ್ರಾಭಿಷೇಕ ನಡೆಯಲಿದೆ. ಸಂಜೆ 5.30ಕ್ಕೆ ಭೈರನಹಟ್ಟಿ ಹಾಗೂ ಶಿರೋಳ ಮಠದ ಶಾಂತಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ರಥೋತ್ಸವಕ್ಕೆ ಚಾಲನೆ ಸಿಗಲಿದೆ. ರಾತ್ರಿ 9 ಗಂಟೆಗೆ ಶ್ರೀಗುರು ಬ್ರಹ್ಮಾನಂದ ಸ್ವಾಮಿಗಳು ಮೂರ್ತಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ರಾತ್ರಿ 10.30ಕ್ಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದಿಲ್ಲಿ ಹೊಕ್ಕ ಪುಂಡರ ಹುಲಿ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ರಥೋತ್ಸವದ ಅಲಂಕಾರದಲ್ಲಿ ವಿಶೇಷವಾಗಿ ಕನ್ನಡದ ಧ್ವಜಗಳನ್ನು ಕಟ್ಟಲಾಗುತ್ತದೆ. ಇಂಥ ರಥೋತ್ಸವ ಮಾಡುವುದು ರಾಜ್ಯದಲ್ಲಿ ವಿಶೇಷ.

ಹಿನ್ನೆಲೆ: ತಾಲೂಕಿನ ಭೈರನಹಟ್ಟಿ ಗ್ರಾಮವು ಗಂಡುಮೆಟ್ಟಿನ ಬಯಲು ಪ್ರದೇಶವಾಗಿದೆ. ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಗ್ರಾಮವಿದು. ವಿವಿಧತೆಯಲ್ಲಿ ಏಕತೆಯನ್ನು ಕಂಡ ಗ್ರಾಮ. ಧರ್ಮ, ಅಧ್ಯಾತ್ಮ, ಶಿಕ್ಷಣ, ಸಂಸ್ಕೃತಿಯ ಸಾಮಾಜಿಕ ಕಾರ್ಯಗಳಂತಹ ಸಮಾಜಪರ ಚಿಂತನ- ಮಂಥನದೊಂದಿಗೆ ಸತ್ಯ- ಶುದ್ಧ ಕಾಯಕದ ಶುದ್ಧ ಸುಸಂಸ್ಕೃತ ಗ್ರಾಮವಾಗಿದೆ. ಈ ಗ್ರಾಮವನ್ನು ಪುಣ್ಯದಪುರ ಮಾಡಿದವರು ಗುರು ಬ್ರಹ್ಮಾನಂದ ಸ್ವಾಮಿಗಳು.

ಇವರು ಗುಜರಾತನ ಶಿವಬಡೊಚ ಗ್ರಾಮದ ರಾಮಪ್ರಸಾದ, ದೇವಜಾನಕಿಯವರ ಪುಣ್ಯ ಗರ್ಭದಲ್ಲಿ ಜನಿಸಿದರು. ಬಾಲ್ಯದಲ್ಲೇ ವೈರಾಗ್ಯ ತಾಳಿ ಸಮಾಜ ಸುಧಾರಣೆಗೆ ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ದೇಶಸಂಚಾರ ಮಾಡುತ್ತಾ ಇಲ್ಲಿಗೆ ದಯಮಾಡಿಸಿ ಭಕ್ತರ ಲೌಕಿಕ ಬದುಕಿನ ಕಷ್ಟ- ನಷ್ಟಗಳನ್ನು ಸ್ವಾರ್ಥ ಭಾವನೆಗಳನ್ನು, ರಾಗ- ದ್ವೇಷಗಳನ್ನು ಮೌಢ್ಯತೆಗಳನ್ನು ಅನಾಚಾರಗಳನ್ನು ದೂರ ಮಾಡಿದರು. ಶರಣರು ಮೆಟ್ಟಿದ ಧರೆ ಪಾವನ ಎಂಬ ಉಕ್ತಿಯಂತೆ ಭೈರನಹಟ್ಟಿ ಪುರವನ್ನು ಪಾವನ ಮಾಡಿ ಪುಣ್ಯಾತ್ಯರಾದರು. ಹಲವಾರು ಲೀಲೆಗಳನ್ನು ಮಾಡುತ್ತ ಬಸವಣ್ಣ ದೇವರ ದೇವಸ್ಥಾನ ನಿರ್ಮಿಸಿ, 5 ದಿನಗಳ ಜಾತ್ರೆಯನ್ನು ಪ್ರಾರಂಭಿಸಿ ಆತ್ಮಕಲ್ಯಾಣದೊಂದಿಗೆ ಸಮಾಜಕಲ್ಯಾಣ ಮಾಡಿದ ಕರುಣಾಮೂರ್ತಿ ಬ್ರಹ್ಮಾನಂದರು.

ಶ್ರೀಗಳ ಸಾನ್ನಿಧ್ಯದಲ್ಲಿ ನೂರಾರು ವರ್ಷಗಳ ಹಿಂದೆ ಪ್ರಾರಂಭಗೊಂಡ ಜಾತ್ರೆಯನ್ನು ಭಕ್ತರು ತ್ರಿಕರ್ಣಪೂರ್ವಕವಾಗಿ ಮಾಡುತ್ತಾ ಬಂದಿರುವುದು ಇಲ್ಲಿಯ ಭಕ್ತರ ಭಕ್ತಿಗೆ ಭಕ್ತಿಗೆ ಹಿಡಿದು ಕೈಗನ್ನಡಿಯಾಗಿದೆ. ಬ್ರಹ್ಮಾನಂದರು ರಡ್ಡೇರನಾಗನೂರ, ಗೋವನಕೊಪ್ಪದಲ್ಲಿ ನೆಲೆ ನಿಂತು ಭಕ್ತ ಉದ್ಧಾರ ಮಾಡಿ, ಮಲಪ್ರಭಾ ನದಿ ದಂಡೆಯ ಹೊಂದಿಕೊಂಡಿರುವ ಗೋವನಕೊಪ್ಪ ಗ್ರಾಮದಲ್ಲಿ ಸಮಾಧಿ ಸ್ಥಿತಿ ಹೊಂದಿದರು.

ಇವರ ನಂತರ ದೊರೆಸ್ವಾಮಿಗಳು ಗ್ರಾಮಕ್ಕೆ ಆಗಮಿಸಿ, ಜನರ ಮೌಢ್ಯವನ್ನು ಕಳೆದು ಭಕ್ತಿಯ ಬೀಜವನ್ನು ಬಿತ್ತಿ ಜಾಗೃತಿಯನ್ನು ಮೂಡಿಸಿದರು. ಶರಣರ ವಾಣಿಯಂತೆ ನಿಮ್ಮ ನೆನೆದಾಗಲೇ ಉದಯ ಎಂಬಂತೆ ಅವರ ಸ್ಮರಣೆಗೆ ಪ್ರತಿ ಜೇಷ್ಠ ಶುದ್ದ ಕಾರ ಹುಣ್ಣಿಮೆಯ ಹಿಂದೆ ಬರುವ ಸೋಮವಾರ ದಿವಸದಂದು ಜಾತ್ರೆ ಮಾಡುತ್ತಾ ತಮ್ಮ ಭಕ್ತಿ ಪರಾಕಾಷ್ಠೆ ಮೆರೆಯುತ್ತಿದ್ದಾರೆ.

ಪುಣ್ಯದ ಪುರ: ನರಗುಂದ ತಾಲೂಕಿನ ಪುಟ್ಟ ಗ್ರಾಮ ಭೈರನಹಟ್ಟಿಗೆ ಗುರು ಬ್ರಹ್ಮಾನಂದ ಸ್ವಾಮಿಗಳು ಆಗಮಿಸಿ ಈ ಕುಗ್ರಾಮವನ್ನು ತಮ್ಮ ಆಧ್ಯಾತ್ಮಿಕ ಸಾಧನೆಯಿಂದ ಪುಣ್ಯದ ಪುರ ಗ್ರಾಮವನ್ನು ಮಾಡಿದ ಕೀರ್ತಿ ಬ್ರಹ್ಮಾನಂದ ಶ್ರೀಗಳಿಗೆ ಸಲ್ಲುತ್ತದೆ ಎಂದು ಶಾಂತಲಿಂಗ ಶ್ರೀಗಳು ತಿಳಿಸಿದರು.ಗ್ರಾಮ ಪರಿವರ್ತನೆ: ಈ ಹಿಂದೆ ಬ್ರಹ್ಮಾನಂದ ಶ್ರೀಗಳು ಗ್ರಾಮಕ್ಕೆ ಆಗಮಿಸಿ ಭಕ್ತರಲ್ಲಿರುವ ಅಂಧಕಾರ ಅಳಿಸಿ, ಆಧ್ಯಾತ್ಮಿಕ ಜ್ಞಾನವನ್ನು ನೀಡಿ, ತಮ್ಮ ತಪಸ್ಸಿನ ಶಕ್ತಿಯಿಂದ ಶ್ರೀಗಳು ಸಮಾಜ ಪರಿವರ್ತನೆ ಮಾಡಿದ್ದರಿಂದ ಆಧ್ಯಾತ್ಮಿಕವಾಗಿ ಭೈರನಹಟ್ಟಿ ಗ್ರಾಮ ಪರಿವರ್ತನೆ ಆಗುತ್ತಿದೆ ಎಂದು ಟಿಎಪಿಸಿಎಂಎಸ್ ವ್ಯವಸ್ಥಾಪಕ ಯಲ್ಲಪ್ಪಗೌಡ ಹನುಮಂತಗೌಡ ಪಾಟೀಲ ತಿಳಿಸಿದರು.