ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಅಷಾಡ ಮಾಸದಲ್ಲಿ ವಿಶೇಷವಾದ ಚಾಮರಾಜೇಶ್ವರ ರಥೋತ್ಸವ ಚಾಮರಾಜನಗರದಲ್ಲಿ ಜು.20ರಂದು ಶನಿವಾರ ನಡೆಯಲಿದೆ.ಆಷಾಡ ಮಾಸದ ಬ್ರಹ್ಮ ರಥೋತ್ಸವಕ್ಕೆ ತಾಲೂಕು ಆಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ಚಾಮರಾಜೇಶ್ವರ ದೇವಸ್ಥಾನ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದು, ಚಾಮರಾಜೇಶ್ವರ ರಥೋತ್ಸವ ಬಣ್ಣ ಬಣ್ಣದ ಬಾವುಟಗಳೊಂದಿಗೆ ಅಲಂಕೃತಗೊಂಡಿದೆ. ಚಾಮರಾಜೇಶ್ವರ ದೇವಸ್ಥಾನದ ಒಳಗೆ ಹೂವುಗಳಿಂದ ಅಲಂಕಾರಗೊಳಿಸಿದ್ದು, ಚಾಮರಾಜೇಶ್ವರಿನಿಗೆ ವಿವಿಧ ಅಭಿಷೇಕ ಮತ್ತು ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇವಸ್ಥಾನದ ಮುಂಭಾಗ ಹಾಗೂ ರಥ ಸಾಗುವ ಹಾದಿಯಲ್ಲಿ ಡಾಂಬಾರು ರಸ್ತೆಯ ಮೇಲೆ ಮರಳು ಹಾಕಿ ರಥ ಸರಾಗವಾಗಿ ಸಾಗುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಾಮರಾಜೇಶ್ವರ ಬ್ರಹ್ಮ ರಥೋತ್ಸವ ಜು.19ರಂದು ಶನಿವಾರ ಮಧ್ಯಾಹ್ನ 12 ಗಂಟೆಯಿಂದ 12.30 ರೊಳಗೆ ಶುಭ ಲಗ್ನದಲ್ಲಿ ಅಭಿಜಿನ್ ಮೂಹೂರ್ತದಲ್ಲಿ ಜರುಗಲಿದೆ. ಆಷಾಡ ಮಾಸದಲ್ಲಿ ದೂರವಿದ್ದ ನವ ವಧು-ವರರು ರಥೋತ್ಸವಕ್ಕೆ ಆಗಮಿಸಿ ಸಂತೋಷದಿಂದ ಚಾಮರಾಜೇಶ್ವರನಿಗೆ ಪೂಜೆ ಸಲ್ಲಿಸಲಿದ್ದಾರೆ.ನವ ವಧು-ವರರು ರಥೋತ್ಸವಕ್ಕೆ ಆಗಮಿಸಿ ಇಬ್ಬರು ಒಟ್ಟಿಗೆ ರಥಕ್ಕೆ ಹಣ್ಣು ಜವನ ಎಸೆದರೆ ಮುಂದಿನ ವರ್ಷಕ್ಕೆ ಮಕ್ಕಳಾಗುತ್ತದೆ. ಅವಿವಾಹಿತರು ಹುಡುಗ-ಹುಡುಗಿ ಇಬ್ಬರು ರಥಕ್ಕೆ ಹಣ್ಣು ಜವನ ಎಸೆದರೆ ಮುಂದಿನ ವರ್ಷಕ್ಕೆ ವಿವಾಹವಾಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದ್ದು, ಈಗಲು ಅದೇ ನಂಬಿಕೆಯಿಂದ ರಥಕ್ಕೆ ಹಣ್ಣು ಜವನ ಎಸೆಯಲಾಗುತ್ತಿದೆ.ದೇವಸ್ಥಾನದ ಇತಿಹಾಸ: ಚಾಮರಾಜನಗರ ಯದು ಕುಲದ ರಾಜ ಮಹಾರಾಜರು ಆಳ್ವಿಕೆ ನಡೆಸಿದ ಕ್ಷೇತ್ರವಾಗಿದ್ದು, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ತಂದೆ 9ನೇ ಚಾಮರಾಜ ಒಡೆಯರ್ 1774 ರಲ್ಲಿ ಇಲ್ಲಿನ ಜನನ ಮಂಟಪದಲ್ಲಿ ಜನಿಸಿದ್ದರಿಂದ ತಮ್ಮ ಮಾತಾ ಪಿತೃಗಳ ಸ್ಮರಣಾರ್ಥ 18ನೇ ಶಿಲ್ಪಿಗಳು ಹಾಗೂ ಆಗಿನ ಶೃಂಗೇರಿ ಜಗದ್ಗುರು ಸಲಹೆಯಂತೆ ಹರಿಕುಠಾರ ಎಂಬ ಸ್ಥಳಕ್ಕೆ ಚಾಮರಾಜನಗರ ಎಂಬ ಹೆಸರಿನಿಂದ ಮರು ನಿರ್ಮಾಣ ಮಾಡಿದರು. ರಾಜತ್ವ ಮತ್ತು ಈಶ್ವರತ್ನಗಳ ಸಮ್ಮಿಲನವಾಗಿ ಶ್ರೀಕೆಂಪನಂಜಾಂಬ ಸಮೇತ ಚಾಮರಾಜೇಶ್ವರ ದೇವಾಲಯವನ್ನು 1826ರಲ್ಲಿ ನಿರ್ಮಿಸಿದರು.ಆರೆಪುರದ ಬಸವರಾಜೇ ಅರಸು ಸಮರ್ಪಿಸಿದ್ದ ರಥವು 180 ವರ್ಷಗಳ ಸುದೀರ್ಘ ಸೇವೆ ನೀಡಿತ್ತು. ಭವ್ಯ ಇತಹಾಸ ಹೊಂದಿದ್ದ ಈ ರಥಕ್ಕೆ ಕಿಡಿಗೇಡಿಯೊಬ್ಬ 2017ರಲ್ಲಿ ಬೆಂಕಿಯಿಟ್ಟ ಪ್ರಕರಣ ಹಾಗೂ ದೇವಾಲಯ ಜೀರ್ಣೋದ್ದಾರ ಕಾಮಗಾರಿಗಳಿಂದಾಗಿ ಕಳೆದ 5 ವರ್ಷಗಳಿಂದ ಈ ಕ್ಷೇತ್ರದಲ್ಲಿ ಆಷಾಡದ ರಥೋತ್ಸವ ನಡೆಯದೆ, ಭಕ್ತಾಧಿಗಳ ಮನಸ್ಸಿನಲ್ಲಿ ಬೇಸರ ಮೂಡಿತ್ತು. ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ವಿಶೇಷ ಆಸಕ್ತಿ ವಹಿಸಿ ಜಿಲ್ಲಾ ಧಾರ್ಮಿಕ ಪರಿಷತ್ತು ಹಾಗೂ ದೇವಾಲಯದ ಅಭಿವೃದ್ಧಿ ಸಮಿತಿ ಹಾಗೂ ಭಕ್ತಾಧಿಗಳ ಸಹಯೋಗದಲ್ಲಿ ಇತ್ತೀಚೆಗೆ ವಿಜೃಂಭಣೆಯಿಂದ ಕಲಾ ಪೂರ್ಣ ಕುಂಭಾಭಿಷೇಕ ನಡೆಸಲಾಗಿದ್ದು, ನೂತನ ವಿನ್ಯಾಸದೊಂದಿಗೆ ಸುಮಾರು 60 ಅಡಿಗಳಷ್ಟು ಎತ್ತರವಿರುವ ಬ್ರಹ್ಮರಥವು ಸಜ್ಜಾಗಿದ್ದು ಶನಿವಾರ ರಥೋತ್ಸವ ನಡೆಯಲಿದೆ. ರಥೋತ್ಸವಕ್ಕೆ ನವ ವಧು-ವರರು ಅಷ್ಟೇ ಅಲ್ಲದೇ ಅವರ ಕುಟುಂಬಸ್ಥರು ಹಾಗೂ ಚಾಮರಾಜೇಶ್ವರನ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವುದರಿಂದ ಅಹಿತಕರ ಘಟನೆಗಳು ನಡೆಯಬಾರದೆಂದು ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ.
ಹೆಚ್ಚು ಧ್ವನಿಯ ತುತ್ತೂರಿ ನಿಷೇಧ: ರಥೋತ್ಸವ ಜಾತ್ರಾ ವೇಳೆ ಹೆಚ್ಚು ಧ್ವನಿ ಹೊರಡಿಸುವ ತುತ್ತೂರಿ (ಪೀಪಿ) ಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರ ಆರೋಗ್ಯ ಕಾಳಜಿಯಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.ಡೆಂಘೀ ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಜಾತ್ರೆ, ಹಬ್ಬ-ಹರಿದಿನಗಳ ಈ ಸಂದರ್ಭದಲ್ಲಿ ಕುಡಿಯುವ ನೀರು, ಆಹಾರ ಹಾಗೂ ಪರಿಸರ ಮಾಲಿನ್ಯವಾಗುವ ಸಂಭವ ಇರುವುದರಿಂದ ಸೊಳ್ಳೆ, ನೊಣಗಳು ಉತ್ಪತ್ತಿಯಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಸಾರ್ವಜನಿಕರು, ಭಕ್ತಾಧಿಗಳು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗಿದೆ.
ಧೂಳು ಹತ್ತಿದ ಆಹಾರ ಪದಾರ್ಥಗಳನ್ನು ತಿನ್ನಬಾರದು. ಬೀದಿಗಳಲ್ಲಿ ಮಾರಾಟ ಮಾಡುವ ತೆರೆದಿಟ್ಟ ತಿಂಡಿ ತಿನಿಸುಗಳು ಮತ್ತು ಕತ್ತರಿಸಿದ ಹಣ್ಣು ಹಂಪಲುಗಳನ್ನು ಸೇವಿಸಬಾರದು. ಬಯಲಲ್ಲಿ ಮಲ,ಮೂತ್ರ ವಿಸರ್ಜನೆ ಮಾಡಬಾರದು. ನಿರ್ಮಿಸಿರುವ ತಾತ್ಕಾಲಿಕ ಶೌಚಾಲಯಗಳನ್ನೇ ಬಳಸಿಕೊಳ್ಳಬೇಕು. ಊಟಕ್ಕೆ ಮೊದಲು ಹಾಗೂ ಮಲ ಮೂತ್ರ ವಿಸರ್ಜನೆಯ ನಂತರ ಕೈಗಳನ್ನು ಸೋಪು ಬಳಸಿ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮುವಾಗ ಹಾಗೂ ಸೀನುವಾಗ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಕಂಡಕಂಡಲ್ಲಿ ಉಗುಳಬಾರದು. ಜಾತ್ರೆ ಸ್ಥಳಗಳಲ್ಲಿ ತೆರೆದಿರುವ ತಾತ್ಕಾಲಿಕ ಆಸ್ಪತ್ರೆಗಳ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.