ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಇಂದಿನ ಶಿಕ್ಷಣ ಪದ್ಧತಿ ಬದಲಾವಣೆಯಾಗಬೇಕಾಗಿದೆ. ಯಾವ ಮಕ್ಕಳು ದಡ್ಡರಲ್ಲ. ಅವರಿಗೆ ಸರಿಯಾದ ಮಾರ್ಗದರ್ಶನದ ಕೊರತೆಯಿಂದಾಗಿ ಕಲಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ಗದಗ-ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿನಿರ್ಭಯಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.ನಗರದ ಬಿವಿವಿ ಸಂಘದ ಮೈದಾನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಬಿವಿವಿಎಸ್ ಸಂಭ್ರಮ- ಮುಧೋಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಮಕ್ಕಳು ಜಾಣರಾಗಬೇಕಾದರೆ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಪ್ರತಿಯೊಬ್ಬ ಮಕ್ಕಳಲ್ಲಿ ತಮ್ಮದೆಯಾದ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಶಿಕ್ಷಕರು ಮತ್ತು ಪಾಲಕರು ಗುರುತಿಸಿ ಅವರ ಆಸಕ್ತಿಗೆ ತಕ್ಕಂತೆ ಪ್ರೊತ್ಸಾಹ ನೀಡಿ ಅವರಲ್ಲಿರುವ ಅಗಾಧ ವ್ಯಕ್ತಿತ್ವವ ಹೊರಹಾಕಲು ಸಾಧ್ಯವಿದೆ ಎಂದರು.
ಮಗು ತಾಯಿಯ ಗರ್ಭದಲ್ಲಿರುವಾಗಲೇ ಎಲ್ಲವನ್ನು ಕಲಿಯುತ್ತಾನೆ. ಆದ್ದರಿಂದ ಹುಟ್ಟುವ ಮಗು ಉತ್ತಮ ಸಂಸ್ಕಾರ ವಂತನಾಗಬೇಕಾದರೆ ತಾಯಿ ಆಗುವವಳು ಒಳ್ಳೆಯ ವಿಚಾರಧಾರೆಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾವ ಶಿಕ್ಷಕ ನಿರಂತರ ಅಧ್ಯಯನ ಮಾಡುತ್ತಾರೆ ಅವರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ನಿರಂತರ ಓದಬೇಕೆಂದರು.ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಸಂಘವು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಅವರ ಶಿಸ್ತು, ಇಚ್ಚಾಶಕ್ತಿ, ಬದ್ಧತೆ, ಕಾರ್ಯಪ್ರವೃತ್ತಿ, ಕಾಯಕ ನಿಷ್ಠೆ, ವಿಚಾರಧಾರೆ, ಮುಂದಾಲೋಚನೆಗಳು ಕಾರಣವಾಗಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿ, ಮುಂದೊಂದು ದಿನ ಡಾ.ವೀರಣ್ಣ ಚರಂತಿಮಠ ಅವರು ಶಿಕ್ಷಣ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಡದಿಯಲ್ಲಿ ಬಿವಿವಿಎಸ್ ಸಂಭ್ರಮಾಚರಣೆಯ ಪ್ರೇರಣೆಯಿಂದಾಗಿ ನಾವಿಂದು ಮುಧೋಳ, ರಾಮದುರ್ಗ ಮತ್ತು ಬಾಗಲಕೋಟೆಯಲ್ಲಿ ಬಿವಿವಿಎಸ್ ಸಂಭ್ರಮಾಚರಣೆ ಮಾಡಲು ಸಾಧ್ಯವಾಯಿತು. ಇನ್ನೂ ಮುಂದೆ ಪ್ರತಿವರ್ಷ ಬಿವಿವಿಎಸ್ ಸಂಭ್ರಮಾಚರಣೆ ಮಾಡುತ್ತೇವೆ. ನಮ್ಮ ಸಂಘ ಶಿಕ್ಷಣದ ಜೊತೆ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಾಂಸ್ಕೃತಿಕ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗೆ ಪ್ರೊತ್ಸಾಹ ನೀಡುತ್ತಾ ಬಂದಿದ್ದೇವೆ ಇನ್ನೂ ನೀಡುತ್ತೇವೆ. ಇದಕ್ಕೆಲ್ಲ ವಿದ್ಯಾರ್ಥಿಗಳ ಪಾಲಕರ ಮತ್ತು ನಾಗರಿಕರ ಪ್ರೊತ್ಸಾಹ ಮತ್ತು ಬೆಂಬಲದ ಅವಶ್ಯಕತೆ ಇದೆ ಎಂದರು.ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರಶಸ್ತಿ ಪತ್ರ ನೀಡಲಾಯಿತು. ಸ್ಮರಣ ಸಂಚಿಕೆ ಮತ್ತು ಬರಹಗಾರರ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಸ್ವಾಗತಿಸಿ, ಸಂಘದ ಕಟ್ಟಡ ವಿಭಾಗದ ಕಾರ್ಯಾಧ್ಯಕ್ಷ ಮಹೇಶ ಕಕರಡ್ಡಿ ಅತಿಥಿ ಪರಿಚಯಿಸಿದರು. ಸಂಘದ ಹೈಸ್ಕೂಲ್ ಮತ್ತು ಮುಧೋಳ ಎಂಜನಿಯರಿಂಗ್ ಸಮಿತಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಕುಮಾರ ಹಿರೇಮಠ ವೇದಿಕೆ ಮೇಲಿದ್ದರು. ಬಿಪ್ಸ್ ವಿದ್ಯಾರ್ಥಿಗಳು ನಾಡಗೀತೆ ಹೇಳಿದರು. ಪ್ರೊ.ಎಂ.ಎಂ.ಹಿರೇಮಠ ವಂದಿಸಿದರು. ಸಂಘದ ಸದಸ್ಯರು, ಸಂಘದ ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು, ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹಾಗೂ ನಗರದ ಗಣ್ಯರು, ಶಿಕ್ಷಣ ಪ್ರೇಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವೇದಿಕೆ ಕಾರ್ಯಕ್ರಮದ ಮುಂಚೆ ಮುಧೋಳ ನಗರದ ಪ್ರಮುಖ ಬೀದಿಯಲ್ಲಿ ಸಂಘದ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ವಿವಿಧ ಕಲಾತಂಡಗಳು, ಬೋಧ-ಬೋಧಕೇತರ ಸಿಬ್ಬಂದಿ ಇದ್ದರು.ಬಿಡದಿಯಲ್ಲಿ ಬಿವಿವಿಎಸ್ ಸಂಭ್ರಮಾಚರಣೆಯ ಪ್ರೇರಣೆಯಿಂದಾಗಿ ನಾವಿಂದು ಮುಧೋಳ, ರಾಮದುರ್ಗ ಮತ್ತು ಬಾಗಲಕೋಟೆಯಲ್ಲಿ ಬಿವಿವಿಎಸ್ ಸಂಭ್ರಮಾಚರಣೆ ಮಾಡಲು ಸಾಧ್ಯವಾಯಿತು. ಇನ್ನೂ ಮುಂದೆ ಪ್ರತಿವರ್ಷ ಬಿವಿವಿಎಸ್ ಸಂಭ್ರಮಾಚರಣೆ ಮಾಡುತ್ತೇವೆ.
ಡಾ.ವೀರಣ್ಣ ಚರಂತಿಮಠ, ಬಿವಿವಿ ಸಂಘದ ಕಾರ್ಯಾಧ್ಯಕ್ಷ