ಸಾರಾಂಶ
ಕಳೆದ 21 ವರ್ಷಗಳಿಂದ ನಡೆಯುತ್ತಿರುವ ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಈ ಬಾರಿ ಅ. 1ರಂದು ನಡೆಯಲಿದ್ದು ವಿವಿಧ ಹರಗುರಚರಮೂರ್ತಿಗಳು ಸೇರಿದಂತೆ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.
ಧಾರವಾಡ:
ಕಳೆದ 21 ವರ್ಷಗಳಿಂದ ನಡೆಯುತ್ತಿರುವ ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಈ ಬಾರಿ ಅ. 1ರಂದು ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಮಧ್ಯಾಹ್ನ 12.45ಕ್ಕೆ ಗಾಂಧಿನಗರದ ಈಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಹಾರನಹಳ್ಳಿಯ ಕೋಡಿಮಠದ ರಾಜಯೋಗೀಂದ್ರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಉತ್ಸವಕ್ಕೆ ಚಾಲನೆ ಸಿಗಲಿದೆ ಎಂದರು.
ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ, ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ, ಉಪ್ಪಿನಬೆಟಗೇರಿಯ ವಿರುಪಾಕ್ಷ ಸ್ವಾಮೀಜಿ ಹಾಗೂ ಹುನಗುಂದಮಠದ ವೀರೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉದ್ಘಾಟಿಸಲಿದ್ದು ಜಂಬೂ ಸವಾರಿಗೆ ಸಚಿವ ಸಂತೋಷ ಲಾಡ್ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮೇಯರ್ ಜ್ಯೋತಿ ಪಾಟೀಲ ಹಾಗೂ ಸ್ಥಳೀಯ ಶಾಸಕರು ಭಾಗವಹಿಸಲಿದ್ದಾರೆಂದು ಹೇಳಿದರು.ಈ ಬಾರಿಯ ಜಂಬೂ ಸವಾರಿಯು ಈಶ್ವರ ದೇವಸ್ಥಾನದಿಂದ ನಗರದ ವಿವಿಧೆಡೆ ಸಂಚರಿಸಿ ಕಡಪಾ ಮೈದಾನಕ್ಕೆ ಮುಕ್ತಾಯವಾಗಲಿದೆ. ಐರಾಣಿ ಹಾಗೂ ಶ್ರೀಶೈಲ ಮಠದ ಎರಡು ಆನೆಗಳಿದ್ದು, 30ಕ್ಕೂ ಹೆಚ್ಚು ಕಲಾ ತಂಡಗಳಿಂದ ಮೆರವಣಿಗೆ ನಡೆಯಲಿದೆ. ಜಂಬೂ ಸವಾರಿಗೆ ಧಾರವಾಡದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹುಣಸಿಮರದ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ನಾರಾಯಣ ಕೋಪರ್ಡೆ, ಪಾಂಡುರಂಗ ಕಿರೇಸೂರ, ವಿಲಾಸ ತಿಬೇಲಿ, ಹನುಮೇಶ ಸರಾಫ್ ಇದ್ದರು.