ನಾಳೆ ಡಾ.ಅಂಬೇಡ್ಕರ್ ಜಯಂತ್ಯುತ್ಸವ: ಕಣಿವೆ ರಾಮಯ್ಯ

| Published : Apr 13 2024, 01:00 AM IST

ನಾಳೆ ಡಾ.ಅಂಬೇಡ್ಕರ್ ಜಯಂತ್ಯುತ್ಸವ: ಕಣಿವೆ ರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವನಾಯಕರ ಜಯಂತಿಯನ್ನು ದೇಶದಲ್ಲಿಯೇ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಪಟ್ಟಣದಲ್ಲೂ ನಡೆಯುವ ಜಯಂತಿಗೆ ಸಹ ಎಲ್ಲಾ ಸಮುದಾಯಗಳ ನಾಯಕರು, ಮುಖಂಡರು ಪಕ್ಷಾತೀತವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಂವಿಧಾನಶಿಲ್ಪಿ, ಬಾಬಾ ಸಾಹೇಬ್, ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವವನ್ನು ಏ.14 ರಂದು ಪಕ್ಷಾತೀತವಾಗಿ ಪಟ್ಟಣದಲ್ಲಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ವಿಭಾಗದ ತಾಲೂಕು ಅಧ್ಯಕ್ಷ ಕಣಿವೆ ರಾಮಯ್ಯ ಹೇಳಿದರು.

ಪಟ್ಟಣದ ಅನ್ನಪೂಣೇಶ್ವರಿ ಹೊಟೇಲ್ ಸಭಾಂಗಣದಲ್ಲಿ ದಲಿತ ಸಮುದಾಯಗಳ ಮುಖಂಡರ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಾದ ನಾಯಕರಲ್ಲ. ಅವರು ವಿಶ್ವನಾಯಕರು. ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ ಎಲ್ಲಾ ಜಾತಿ, ಧರ್ಮ, ಸಮುದಾಯದ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದರು.

ವಿಶ್ವನಾಯಕರ ಜಯಂತಿಯನ್ನು ದೇಶದಲ್ಲಿಯೇ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಪಟ್ಟಣದಲ್ಲೂ ನಡೆಯುವ ಜಯಂತಿಗೆ ಸಹ ಎಲ್ಲಾ ಸಮುದಾಯಗಳ ನಾಯಕರು, ಮುಖಂಡರು ಪಕ್ಷಾತೀತವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಅಂಬೇಡ್ಕರ್ ಜಯಂತಿಯನ್ನು ಯಾವುದೇ ರಾಜಕೀಯ ಪ್ರೇರಿತವಾಗಿ ಆಚರಣೆ ಮಾಡುತ್ತಿಲ್ಲ. ಅಥವಾ ಯಾವುದೇ ಪಕ್ಷಕ್ಕೆ ಸೀಮಿತವಾಗಿಯೋ ಮಾಡುತ್ತಿಲ್ಲ. ಕಾರ್‍ಯಕ್ರಮಕ್ಕೆ ಯಾವುದೇ ರಾಜಕೀಯ ವ್ಯಕ್ತಿಗಳಿಂದ ಹಣ ಸಂಗ್ರಹಿಸಿಲ್ಲ. ಅಂಬೇಡ್ಕರ್ ಅಭಿಮಾನಿಗಳು ಎಲ್ಲರೂ ಸೇರಿ ಹಣ ಸಂಗ್ರಹಿಸಿ ಕಾರ್‍ಯಕ್ರಮ ನಡೆಸುತ್ತಿದ್ದೇವೆ. ಕಾರ್‍ಯಕ್ರಮಕ್ಕೆ ಎಲ್ಲಾ ಪಕ್ಷದ ಕಾರ್‍ಯಕರ್ತರು ಮುಖಂಡರನ್ನು ಸಹ ಆಹ್ವಾನಿಸಲಾಗಿದೆ. ಆದರೆ ಕೆಲವರು ಸಭೆಗೆ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಮ್ಮನಾಳುವ ಸರಕಾರಗಳು ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂಬ ಹುನ್ನಾರ ನಡೆಸುತ್ತಿವೆ. ಸಂವಿಧಾನ ರಕ್ಷಣೆ, ಉಳಿವಿಗಾಗಿ ನಾವೆಲ್ಲರೂ ಒಗ್ಗಟ್ಟಾಗಬೇಕಿದೆ. ನಮ್ಮ ಜನರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ದಲಿತ ಮುಖಂಡ ಹಾಳಯ್ಯ ಮಾತನಾಡಿ, ಏ.14ರಂದು ಸಂಜೆ 4 ಗಂಟೆಗೆ ಅಂಬೇಡ್ಕರ್ ಜಯಂತಿ ಅಂಗವಾಗಿ ಪಟ್ಟಣದ ಮಹಾಂಕಾಳೇಶ್ವರಿ ದೇವಸ್ಥಾನದಿಂದ ಸುಮಾರು 2 ಸಾವಿರಕ್ಕೂ ಅಧಿಕ ಜನರೊಂದಿಗೆ ಮೇರವಣಿಗೆ ಮೂಲಕ ಪಟ್ಟಣದ ಪೊಲೀಸ್ ಸ್ಟೇಷನ್, ಹಿರೇಮರಳಿ ವೃತ್ತ, ಚರ್ಚ್ ರಸ್ತೆ ಮಾರ್ಗವಾಗಿ ಪಟ್ಟಣದ ಐದುದೀಪದ ವೃತ್ತಕ್ಕೆ ಆಗಮಿಸಲಾಗುವುದು. ಐದು ದೀಪದ ವೃತ್ತದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಆಚರಿಸಲಾಗುವುದು ಎಂದರು.

ಬಿಜೆಪಿಯ ಬಸವನಗೌಡಪಾಟೀಲ್ ಯತ್ನಾಳ್, ಅನಂತಕುಮಾರ್ ಹೆಗ್ಗಡೆ ಹಾಗೂ ಪ್ರತಾಪ್‌ಸಿಂಹ್ ಸಂವಿಧಾನ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಾರೆ. ಇಂತಹವರ ವಿರುದ್ಧ ನಾವೆಲ್ಲರೂ ಜಾಗೃತರಾಗಬೇಕಿದೆ ಎಂದು ತಿಳಿಸಿದರು.

ಸಭೆಯಲ್ಲಿ ಎಸ್ಸಿ/ಎಸ್‌ಟಿ ಮೇಲುಕೋಟೆ ಬ್ಲಾಕ್ ಅಧ್ಯಕ್ಷ ಅರಸಯ್ಯ, ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ವಿಜಯ್‌ಕುಮಾರ್, ಸಂಘಟನಾ ಸಂಚಾಲಕ ದೇವರಾಜು, ಸಂಘಟಿತ ವಿಭಾಗದ ಅಧ್ಯಕ್ಷ ರಾಜೇಶ್, ದಸಂಸ ಮುಖಂಡ ಅಂಕಯ್ಯ, ನಟರಾಜು, ಎ.ಜಿ.ಬಸವರಾಜು, ಸಿದ್ದಲಿಂಗಯ್ಯ ಸೇರಿ ಹಲವರು ಹಾಜರಿದ್ದರು.