ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಶಿಸಿ ಹೋಗುತ್ತಿರುವ ನಂದಿ (ಎತ್ತುಗಳ) ಸಂತತಿ ಉಳಿಯಬೇಕು ಎಂದು ರೈತರಲ್ಲಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ನ.15ರಂದು ನಗರದಿಂದ ಹಳ್ಳಿಯೆಡೆಗೆ ನಂದಿ ಯಾತ್ರೆಯೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ನಂದಿಕೃಷಿ ತಜ್ಞ ಬಸವರಾಜ ಬಿರಾದಾರ ಹೇಳಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.15ರಂದು ಬೆಳಗ್ಗೆ 6 ಗಂಟೆಗೆ ನಗರದ ಶ್ರೀ ಸಿದ್ಧೆಶ್ವರ ದೇವಸ್ಥಾನದ ಎದುರಿಗಿರುವ ಹಳ್ಳಿಮನೆ ಭೋಜನಾಲಯದಿಂದ ಪಾದಯಾತ್ರೆ ಆರಂಭವಾಗಿ, ಇಟ್ಟಂಗಿಹಾಳ, ಲೋಗಾವಿ, ದಂದರಗಿ, ಸೋಮದೇವರಹಟ್ಟಿ ಮಾರ್ಗವಾಗಿ 40 ಕಿಮೀ ಅಂತರದಲ್ಲಿರುವ ಬಿಜ್ಜರಗಿಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪೂರ್ವಾಶ್ರಮದ ಮನೆಗೆ ಸಂಜೆ 6 ಗಂಟೆಗೆ ನಂದಿ ಪಾದಯಾತ್ರೆ ತಲುಪಲಿದೆ. ಈ ವೇಳೆ ಎರಡು ಎತ್ತಿನ ಬಂಡಿಗಳು ನಂದಿಯಾತ್ರೆಯಲ್ಲಿ ಭಾಗವಹಿಸಲಿದ್ದು, ಒಂದು ಬಂಡಿಯಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳ ಭಾವಚಿತ್ರ, ಇನ್ನೊಂದರಲ್ಲಿ ನಂದಿಯ ಭಾವಚಿತ್ರ ಇಟ್ಟು ಯಾತ್ರೆ ನಡೆಸಲಾಗುತ್ತದೆ. ಗೌರಿ ಹುಣ್ಣಿಮೆಯ ದಿನಾವದ ಅಂದು ಪಾದಯಾತ್ರೆ ಹಮ್ಮಿಕೊಂಡಿದ್ದು, ಅಂದು ಸಂಜೆ ಸತ್ಸಂಗ ಆಯೋಜನೆ ಇರಲಿದೆ. ಸಾವಯವ ದ್ರಾಕ್ಷಿ ಬೆಳೆದು ಹೆಸರು ಮಾಡಿರುವ ಕರಭಂಟನಾಳದ ಶಿವಕುಮಾರ ಸ್ವಾಮೀಜಿಗಳು ಅಂದು, ದ್ರಾಕ್ಷಿ ಬೆಳೆಯ ಬಗ್ಗೆ ರೈತರಿಗೆ ತಿಳುವಳಿಕೆ ನೀಡಲಿದ್ದಾರೆ. ಜತೆಗೆ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ಮಾರ್ಗದರ್ಶನ ಇರಲಿದೆ ಎಂದರು.ನಡೆದಾಡುವ ದೇವರು ಎನಿಸಿಕೊಂಡ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಪ್ರೇರಣೆಯಿಂದ ಆರಂಭವಾಗಿರುವ ಹಳ್ಳಿಮನೆಯಿಂದ ಪ್ರಥಮ ಬಾರಿಗೆ ಯಾತ್ರೆ ಮಾಡಲಾಗುತ್ತಿದೆ. ಪಾದಯಾತ್ರೆಯಲ್ಲಿ ನೂರಾರು ರೈತರು ಹಾಗೂ ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ ತೆರಳುವ ಪಾದಯಾತ್ರಿಕರು ಭಾಗವಹಿಸಲಿದ್ದಾರೆ. ಕಳೆದ 20 ವರ್ಷಗಳಲ್ಲಿ ಶೇ.80ರಷ್ಟು ನಂದಿ ಸಂಪತ್ತು ನಾಶವಾಗಿದ್ದು, ನಂದಿ ಸಂಪತ್ತು ಉಳಿಸಲು ಈ ಜನಜಾಗೃತಿ ನಂದಿ ಯಾತ್ರೆಯೊಂದಿಗೆ ಪಾದಯಾತ್ರೆ ಮಾಡಲಾಗುತ್ತಿದೆ. ನಂದಿ ಸಂಪತ್ತು ಉಳಿದರೆ ಸಿರಿಧಾನ್ಯ ಮಾತ್ರ ಉಳಿಯಲಿದೆ. ಶೇ.50ರಷ್ಟು ಮಣ್ಣಿನಲ್ಲಿ ಜೀವಸತ್ವ ಹಾಳಾಗಿದ್ದು, ಈಗಾಗಲೇ ನಂದಿ ಯಾತ್ರೆಯ ಮೂಲಕ ಜಿಲ್ಲಾದ್ಯಂತ 40 ಸಂಘಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.ಪಾದಯಾತ್ರೆ ಆಯೋಜಕ ಉಮೇಶ ವಂದಾಲ ಮಾತನಾಡಿ, ಮಲ್ಲಯ್ಯನ ಭಕ್ತಾದಿಗಳು ಹಾಗೂ ನಂದಿ ಯಾತ್ರಿಕರು ಸೇರಿ ಈ ಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ಈ ಮಹತ್ತರವಾದ ಕಾರ್ಯಕ್ಕೆ ನಾವು ಕೈ ಜೋಡಿಸಿದ್ದೇವೆ. ಭೂಮಿ (ಮಣ್ಣು) ಉಳಿವಿಗಾಗಿ ಎಲ್ಲರೂ ಬೆಂಬಲಿಸಬೇಕು. ಮಣ್ಣಿನ ಸ್ವಾಯತ್ತತೆ ಉಳಿಸಲು ಎಲ್ಲರೂ ಸಹಕರಿಸೋಣ. ಗೋ ಸಂಪತ್ತು, ನಂದಿ ಸಂಪತ್ತು ಉಳಿಯಬೇಕು. ಮಣ್ಣು ಉಳಿಸಿ ಅಭಿಯಾನ ಮಾಡಿ ರೈತರಲ್ಲಿ ಜನಜಾಗೃತಿ ಮಾಡುತ್ತಿದೆ ಎಂದರು.ಹಳ್ಳಿಮನೆ ಭೋಜನಾಲ ಮಾಲೀಕ ಮಲ್ಲಿಕಾರ್ಜುನ ಹಟ್ಟಿ ಮಾತನಾಡಿ, ನಂದಿ ಉಳಿಸಿ, ಮಣ್ಣು ಉಳಿಸಿ, ಸಿರಿಧಾನ್ಯ ಉಳಿಸಿ ಎಂದು ಹಲವು ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ಸರ್ಕಾರ ಪ್ರೋತ್ಸಾಹ ಧನ ಕೊಡಬೇಕು. ಈ ಮೂಲಕ ನಂದಿ ಉಳಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕಿದೆ. 2023ರ ಜನವರಿಯಲ್ಲಿ ಜಿಲ್ಲಾದ್ಯಂತ ಮಣ್ಣು ಉಳಿಸಿ ಅಭಿಯಾನ ನಡೆಸಲಾಗಿದ್ದು, ಪ್ರತಿ ತಾಲೂಕಿನಲ್ಲಿ ಸಂಚರಿಸಿ ಸುಮಾರು 1ಸಾವಿರ ಕಿಮೀ ಸಂಚರಿಸಲಾಗಿದೆ.
-ಬಸವರಾಜ ಬಿರಾದಾರ, ನಂದಿಕೃಷಿ ತಜ್ಞ.ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ನಂದಿ ಉಳಿಸುವ ಕೆಲಸ ಮಾಡೋಣ. ಬೆಳಗ್ಗೆಯಿಂದ ಸಂಜೆಯ ವರೆಗೂ ಸಂಚರಿಸುವ ಜನಜಾಗೃತಿ ಪಾದಯಾತ್ರೆಯಲ್ಲಿ ಮಾರ್ಗ ಮದ್ಯದಲ್ಲಿನ ಅನೇಕ ಹಳ್ಳಿಗಳಲ್ಲಿ ನಂದಿ ಉಳಿಸಿ ಕುರಿತು ಜಾಗೃತಿ ಮೂಡಿಸಲಾಗುವುದು.
-ಉಮೇಶ ವಂದಾಲ, ಪಾದಯಾತ್ರೆ ಆಯೋಜಕರು.ನಿಸರ್ಗಕ್ಕೆ ಹತ್ತಿರವಾದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಪ್ರಕೃತಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ನಾವೆಲ್ಲ ಮರ ಕಡಿಯುವುದು, ಭೂಮಿಯನ್ನು ರಾಸಾಯನಿಕ ಗೊಳಿಸುವುದು ಸೇರಿದಂತೆ ಅನೇಕ ಪ್ರಕೃತಿಗೆ ವಿರುದ್ಧವಾಗಿ ಕೆಲಸಗಳನ್ನು ಮಾಡುತ್ತಿದ್ದೇವೆ. ಹೀಗಾಗಿ ದಿನೆ ದಿನೆ ತಾಪಮಾನ ಹೆಚ್ಚಾಗುತ್ತಿದೆ. ಆದ್ದರಿಂದ ಕಲುಷಿತಗೊಂಡಿರುವ ಮಣ್ಣಿನ ಆರೋಗ್ಯವನ್ನು ಉಳಿಸುವ ಕೆಲಸ ಆಗಬೇಕಿದೆ. ಎಲ್ಲರೂ ಸೇರಿ ಪ್ರಕೃತಿಯ ಪರವಾಗಿ ಕ್ರಾಂತಿ ಮಾಡೋಣ.
-ಮಲ್ಲಿಕಾರ್ಜುನ ಹಟ್ಟಿ, ಹಳ್ಳಿಮನೆ ಭೋಜನಾಲ ಮಾಲೀಕರು.