ನಾಳೆ ಛತ್ರಪತಿ ಶಿವಾಜಿ ಜಯಂತ್ಯುತ್ಸವ, ಗದಗ ಕೇಸರಿಮಯ

| Published : Feb 18 2025, 12:31 AM IST

ಸಾರಾಂಶ

ಫೆ. 19ರಂದು ನಗರದಲ್ಲಿ ಶ್ರೀರಾಮ ಸೇನಾ, ಶಿವರಾಮಕೃಷ್ಣ ಸೇವಾ ಟ್ರಸ್ಟ್ ಹಾಗೂ ಛತ್ರಪತಿ ಶಿವಾಜಿ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಗದಗ ನಗರ ಸಂಪೂರ್ಣ ಕೇಸರಿಮಯವಾಗಿ ಕಂಗೊಳಿಸುತ್ತಿದೆ.

ಗದಗ: ಫೆ. 19ರಂದು ನಗರದಲ್ಲಿ ಶ್ರೀರಾಮ ಸೇನಾ, ಶಿವರಾಮಕೃಷ್ಣ ಸೇವಾ ಟ್ರಸ್ಟ್ ಹಾಗೂ ಛತ್ರಪತಿ ಶಿವಾಜಿ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಗದಗ ನಗರ ಸಂಪೂರ್ಣ ಕೇಸರಿಮಯವಾಗಿ ಕಂಗೊಳಿಸುತ್ತಿದೆ.

ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕೇಸರಿ ಧ್ವಜ, ಬಟಿಂಗ್ಸ್‌ಗಳನ್ನು ಸಂಘಟಕರು ಕಟ್ಟಿದ್ದು, ಪ್ರತಿವರ್ಷದಂತೆ ಈ ವರ್ಷವೂ ಹಿಂದೂ ಹೃದಯ ಸಾಮ್ರಾಟ್‌, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅದ್ಧೂರಿ ಆಚರಣೆಗೆ ಭರದಿಂದ ಸಿದ್ಧತೆ ನಡೆಸಿದ್ದಾರೆ.

ಭವ್ಯ ಮೆರವಣಿಗೆ:ನಗರದ ರಾಚೋಟೇಶ್ವರ ದೇವಸ್ಥಾನದಿಂದ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್‌ ಮೂರ್ತಿ ಭವ್ಯ ಮೆರವಣಿಗೆಯೂ ಆರಂಭವಾಗಲಿದೆ. ಈ ಬಾರಿ ಮೂರು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳ ಮೆರವಣಿಗೆ ನಡೆಯುವುದು ವಿಶೇಷ. ಹಲವು ಕಲಾ ತಂಡಗಳು ಹಾಗೂ ಬೃಹತ್‌ ಡಿಜಿ ಮೆರವಣಿಗೆ ನಗರದ ವಿವಿಧೆಡೆ ಸಂಚರಿಸಿ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ. ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆ ಸೇರಿದಂತೆ ಹುಬ್ಬಳ್ಳಿ-ಧಾರವಾಡ, ಬಾಗಲಕೋಟಿ, ಕೊಪ್ಪಳ, ಹಾವೇರಿ ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು, ಯುವಕರು ಪಾಲ್ಗೊಳ್ಳವರು. ಮೆರವಣಿಗೆಯೂದ್ದಕ್ಕೂ ತಂಪು ಪಾನೀಯ, ಉಪಾಹಾರ ವ್ಯವಸ್ಥೆ ಕೂಡ ಮಾಡಲಾಗಿರುತ್ತದೆ.

ರಕ್ತದಾನ ಶಿಬಿರ: ಜಯಂತ್ಯುತ್ಸವ ಅಂಗವಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಫೆ.16 ರಂದು ನಗರದ ರಾಚೋಟೇಶ್ವರ ದೇವಸ್ಥಾನದಲ್ಲಿ ರಕ್ತದಾನ ಶಿಬಿರ ನಡೆಯಿತು.ಬೃಹತ್‌ ಸಮಾವೇಶ:ಮೆರವಣಿಗೆ ನಂತರ ಸಂಜೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಆವರಣದಲ್ಲಿ ಬೃಹತ್ ಸಮಾವೇಶ ಜರುಗಲಿದೆ. ಸಮಾವೇಶದಲ್ಲಿ ನಾಡಿನ ಹಿರಿಯ ಸ್ವಾಮೀಜಿಗಳು, ರಾಷ್ಟ್ರಾಭಿಮಾನಿಗಳು, ಸಾಂಸ್ಕೃತಿಕ ಚಿಂತಕರು, ಸಮಾಜ ಸುಧಾರಕರು ಪಾಲ್ಗೊಳ್ಳುವರು ಎಂದು ಸಂಘಟಿಕರು ತಿಳಿಸಿದರು.