ನಾಳೆ ಸೋಂದಾ ಮಠದಲ್ಲಿ ಶಿಷ್ಯ ಸ್ವೀಕಾರ ಸಮಾರಂಭ

| Published : Feb 21 2024, 02:00 AM IST

ಸಾರಾಂಶ

ಶಿರಸಿ ತಾಲೂಕಿನ ಮಠದೇವಳದ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ಫೆ.22ರಂದು ಶಿಷ್ಯ ಸ್ವೀಕಾರ ಮಹೋತ್ಸವ ಆಯೋಜಿಸಲಾಗಿದೆ ಎಂದು ವಕೀಲ ಅಶೋಕ್ ಜಿ. ಭಟ್ ಹೇಳಿದರು. ಸಾಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ತಮ್ಮ ಸಂಕಲ್ಪದಂತೆ ಮುಂದಿನ ಉತ್ತರಾಧಿಕಾರಿಯನ್ನಾಗಿ ಯಲ್ಲಾಪುರ ತಾಲೂಕಿನ ಈರಾಪುರದ ವೇದಬ್ರಹ್ಮ ನಾಗರಾಜ ಭಟ್ಟ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಶಿಷ್ಯ ಸ್ವೀಕಾರ ಬಳಿಕ ಅವರಿಗೆ ಬೇರೆಯದೇ ಹೆಸರು ನೀಡಲಾಗುತ್ತದೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶಿರಸಿ ತಾಲೂಕಿನ ಮಠದೇವಳದ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ಫೆ.22ರಂದು ಶಿಷ್ಯ ಸ್ವೀಕಾರ ಮಹೋತ್ಸವ ಆಯೋಜಿಸಲಾಗಿದೆ ಎಂದು ವಕೀಲ ಅಶೋಕ್ ಜಿ. ಭಟ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ತಮ್ಮ ಸಂಕಲ್ಪದಂತೆ ಮುಂದಿನ ಉತ್ತರಾಧಿಕಾರಿಯನ್ನಾಗಿ ಯಲ್ಲಾಪುರ ತಾಲೂಕಿನ ಈರಾಪುರದ ವೇದಬ್ರಹ್ಮ ನಾಗರಾಜ ಭಟ್ಟ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಶಿಷ್ಯ ಸ್ವೀಕಾರ ಬಳಿಕ ಅವರಿಗೆ ಬೇರೆಯದೇ ಹೆಸರು ನೀಡಲಾಗುತ್ತದೆ ಎಂದರು.

1300 ವರ್ಷಗಳ ಇತಿಹಾಸ:

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಅತ್ಯಂತ ಪ್ರಾಚೀನವಾದುದು. ಶಂಕರಾಚಾರ್ಯ ಪರಂಪರೆ ಇತಿಹಾಸವನ್ನು ಹೊಂದಿದೆ. 1300 ವರ್ಷಗಳ ಇತಿಹಾಸ ಜೊಂದಿದೆ. ಅತ್ಯಂತ ಸಾಮಾಜಿಕ ಕಾರ್ಯಕ್ರಮಗಳು, ಚಟುವಟಿಕೆಗಳನ್ನು ನಡೆಸುತ್ತಿದೆ. ಇಂತಹ ಇತಿಹಾಸವುಳ್ಳ ಮಠಕ್ಕೆ ಒಳ್ಳೆಯ ಉತ್ತರಾಧಿಕಾರಿ ಶಿಷ್ಯರ ಅಗತ್ಯವಿದೆ. ಈಗಿರುವ ಶ್ರೀಗಳ ನಿರ್ಣಯದಂತೆ ಕಾರ್ಯಕ್ರಮ ನಡೆಯಲಿದೆ ಎಂದರು.

ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ಫೆ.18ರಿಂದ 22 ರವರೆಗೆ ಶಿಷ್ಯ ಸ್ವೀಕಾರ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ ಹಲವು ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯುತ್ತಿವೆ. ಮುಖ್ಯವಾಗಿ 22ರಂದು ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಯೋಗಾವಾಸಿಷ್ಠ ಸಂಪುಟ ಬಿಡುಗಡೆ:

22ರ ಕಾರ್ಯಕ್ರಮದಲ್ಲಿ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ವಿರಚಿತ ಯೋಗವಾಸಿಷ್ಠ ಪ್ರಥಮ ಸಂಪುಟ ಕೂಡ ಬಿಡುಗಡೆಯಾಗಲಿದೆ. ಕಾರ್ಯಕ್ರಮದಲ್ಲಿ ಹಲವು ಸ್ವಾಮೀಜಿಗಳು ಉಪಸ್ಥಿತರಿರುವರು. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಅವರೊಂದಿಗೆ ಮಂತ್ರಿಗಳು, ಜನಪ್ರತಿನಿಧಿಗಳು, ವಿದ್ವಾಂಸರು ಮತ್ತು ಗಣ್ಯರು ಕೂಡ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಡಾ. ಬಾಲಕೃಷ್ಣ ಹೆಗಡೆ ಮಾತನಾಡಿ, ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಪರಿಸರಪ್ರೇಮಿ. ಹಲವು ಪರಿಸರ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಸಾರ್ವಜನಿಕ ಕ್ಷೇತ್ರ ಸಂಕಷ್ಟಗಳಿಗೆ ಸ್ಪಂದಿಸುತ್ತಾರೆ. ಅವರನ್ನು ಹಸಿರು ಸ್ವಾಮಿ ಎಂದೇ ಕರೆಯಲಾಗುತ್ತಿದೆ. ಇಂತಹ ಮಹಾನ್ ವ್ಯಕ್ತಿತ್ವದ ಶ್ರೀಗಳು ತಮ್ಮದೇ ದಾರಿಯಲ್ಲಿ ಸಾಗುವ ಶಿಷ್ಯರನ್ನು ನಿರ್ಣಯಿಸಿದ್ದಾರೆ. ಅವರ ಜೊತೆಗೆ ಅಪಾರ ಶಿಷ್ಯಭಕ್ತರ ದಂಡೇ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಲಕ್ಷ್ಮೀ ನಾರಾಯಣ ಜೋಷಿ, ಡಿ.ಎಂ. ಹೆಗಡೆ, ದೇವೇಂದ್ರ ಭಟ್, ಪಿ.ಪಿ. ಹೆಗಡೆ, ಬಾಲಾಜಿ ದೇಶಪಾಂಡೆ, ಮೋಹನ್ ಹೆಗಡೆ ಉಪಸ್ಥಿತರಿದ್ದರು.

- - - ಶ್ರೀ ಗಂಗಾಧರೇಂದ್ರ ಸರಸ್ವತಿ ಶ್ರೀ ಜತೆ ನೂತನ ಶಿಷ್ಯ ವೇದಬ್ರಹ್ಮ ನಾಗರಾಜ ಭಟ್ಟ.