ನಾಳೆ, ನಾಡಿದ್ದು ಹರಿಹರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

| Published : Mar 17 2024, 01:47 AM IST

ನಾಳೆ, ನಾಡಿದ್ದು ಹರಿಹರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಮ್ಮೇಳನಕ್ಕೆ ಚಾಲನೆ ನೀಡುವರು. ನಂತರ ಸಮ್ಮೇಳನಾಧ್ಯಕ್ಷರಾದ ಪ್ರೊ.ಸಿ.ವಿ.ಪಾಟೀಲ್ ಮಾತನಾಡುವರು. ಡಾ.ಎಚ್ ಗಿರಿಜಮ್ಮ ಮಹಾದ್ವಾರ ಉದ್ಘಾಟನೆಯನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ನೆರವೇರಿಸಲಿದ್ದಾರೆ. ಹೆಳವನಕಟ್ಟೆ ಗಿರಿಯಮ್ಮ, ಪ್ರೊ.ಬಿ.ಕೃಷ್ಣಪ್ಪ ವೇದಿಕೆಯನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಉದ್ಘಾಟಿಸುವರು. ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಉಪಸ್ಥಿತರಿರುವರು.

* ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಮ್ಮೇಳನ ಉದ್ಘಾಟನೆ, ಮೆರವಣಿಗೆಗೆ ಎಸ್‌ಪಿ ಉಮಾ ಚಾಲನೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ.18 ಹಾಗೂ 19ರಂದು ಹರಿಹರದ ಶಿವಮೊಗ್ಗ ರಸ್ತೆಯಲ್ಲಿರುವ ಸಿದ್ದೇಶ್ವರ ಪ್ಯಾಲೇಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.18ರ ಬೆಳಗ್ಗೆ 8ಕ್ಕೆ ಧ್ವಜಾರೋಹಣ, ಬೆಳಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್ ಮೆರವಣಿಗೆ ನಡೆಯಲಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಚಾಲನೆ ನೀಡುವರು. ಮೆರವಣಿಗೆ ಶ್ರೀಹರಿಹರೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಸಮ್ಮೇಳನದ ಸಭಾಂಗಣ ತಲುಪಲಿದೆ ಎಂದರು.

ಬೆಳಗ್ಗೆ 10.30ಕ್ಕೆ ಶಾಸಕ ಬಿ.ಪಿ.ಹರೀಶ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಮ್ಮೇಳನಕ್ಕೆ ಚಾಲನೆ ನೀಡುವರು. ನಂತರ ಸಮ್ಮೇಳನಾಧ್ಯಕ್ಷರಾದ ಪ್ರೊ.ಸಿ.ವಿ.ಪಾಟೀಲ್ ಮಾತನಾಡುವರು. ಡಾ.ಎಚ್ ಗಿರಿಜಮ್ಮ ಮಹಾದ್ವಾರ ಉದ್ಘಾಟನೆಯನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ನೆರವೇರಿಸಲಿದ್ದಾರೆ. ಹೆಳವನಕಟ್ಟೆ ಗಿರಿಯಮ್ಮ, ಪ್ರೊ.ಬಿ.ಕೃಷ್ಣಪ್ಪ ವೇದಿಕೆಯನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಉದ್ಘಾಟಿಸುವರು. ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಉಪಸ್ಥಿತರಿರುವರು.

ಸಮ್ಮೇಳನದ ಪ್ರಧಾನ ಭಾಷಣ ಬೆಂಗಳೂರಿನ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮಾಡುವರು. ಪರಿಷತ್ತು ಸದಸ್ಯರಾದ ಅಬ್ದುಲ್ ಜಬ್ಬಾರ್, ಡಾ.ವೈ.ಎ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಎಚ್.ಎಸ್ ಶಿವಶಂಕರ್, ಎಸ್.ರಾಮಪ್ಪ ಕೃತಿಗಳ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಎಸ್.ಎಸ್. ಕೇರ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್, ಕೆ.ಬಿ.ಕೊಟ್ರೇಶ್, ಜಿ.ಬಿ.ವಿನಯ್ ಕುಮಾರ್, ಡಾ.ಟಿ.ಜಿ.ರವಿಕುಮಾರ್ ಮತ್ತಿತರರು ಭಾಗವಹಿಸುವರು ಎಂದರು.

ಮಾ.18 ರಂದು ಮಧ್ಯಾಹ್ನ 2 ಗಂಟೆಗೆ ಗೋಷ್ಠಿಗಳು ನಡೆಯಲಿದ್ದು, ಶಿಕ್ಷಣ ತಜ್ಞ ಡಾ.ಎಚ್.ವಿ.ವಾಮದೇವಪ್ಪ ಅಧ್ಯಕ್ಷತೆಯಲ್ಲಿ ಶಿಕ್ಷಣ ಮತ್ತು ಕನ್ನಡದ ಅಸ್ಮಿತೆ ಕುರಿತು ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3.30 ಕ್ಕೆ ಪ್ರೊ.ಎಚ್.ಎಸ್.ಹರಿಶಂಕರ್ ಅಧ್ಯಕ್ಷತೆಯಲ್ಲಿ ಇತಿಹಾಸ, ಕೃಷಿ, ದಲಿತ ಚಳುವಳಿ ಕುರಿತು ನಡೆಯುವ ಗೋಷ್ಠಿ ನಡೆಯಲಿದೆ.

ಸಂಜೆ 4.30ಕ್ಕೆ ಸಾಹಿತಿ ಎಸ್.ಸಿದ್ದೇಶ್ ಕುರ್ಕಿ ಅಧ್ಯಕ್ಷತೆಯಲ್ಲಿ ಯುವಗೋಷ್ಠಿ ನಡೆಯಲಿದೆ. ಸಂಜೆ 6.30ಕ್ಕೆ ನಟ ಡಾ.ರಾಧಾಕೃಷ್ಣ ಪಲ್ಲಕ್ಕಿ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ. 19 ರಂದು ಬೆಳಗ್ಗೆ 9 ರಂದು ಕವಿಗೋಷ್ಠಿ ನಡೆಯಲಿದೆ. ಅಂದು ಬೆಳಗ್ಗೆ 10.30 ಕ್ಕೆ ಮಠಾಧೀಶ್ವರರ ವಿಶೇಷ ಚಿಂತನ ಮಂಥನ ನಡೆಯಲಿದೆ ಹಾಗೂ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 12 ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ, ಮಧ್ಯಾಹ್ನ 1.30 ಕ್ಕೆ ಡಾ.ಎಂ.ಜಿ ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಮಧ್ಯ ಕರ್ನಾಟಕದ ಚಳುವಳಿ ಸ್ವರೂಪಗಳು ಕುರಿತು ಗೋಷ್ಠಿ ನಡೆಯಲಿದೆ. ಗೋಷ್ಠಿಯಲ್ಲಿ ಬಿ.ಎನ್.ಮಲ್ಲೇಶ್, ಡಾ.ದಾದಾಪೀರ್ ನವಿಲೇಹಾಳ್, ಡಾ.ಆನಂದ ಋಗ್ವೇದಿ ವಿಷಯ ಮಂಡಿಸುವರು. ಮಧ್ಯಾಹ್ನ 3.30 ಕ್ಕೆ ಬಹಿರಂಗ ಅಧಿವೇಶ ನಡೆಯಲಿದೆ. ಸಂಜೆ 4 ರಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಗುವುದು. 5.30 ಕ್ಕೆ ಸಮಾರೋಪ ಸಮಾರಂಭ, ನಂತರ 6.30 ಕ್ಕೆ ಸಾಂಸ್ಕೃತಿಕ ಸಂಭ್ರಮ ಜರುಗಲಿದೆ ಎಂದು ಮಾಹಿತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿ.ದಿಳ್ಯಪ್ಪ, ಕೆ.ರಾಘವೇಂದ್ರ ನಾಯರಿ, ರುದ್ರಾಕ್ಷಿಬಾಯಿ, ಸುರೇಶ್ ಕುಣೆಬೆಳಕೆರೆ, ಜಿಗಳಿ ಪ್ರಕಾಶ್, ರೇವಣಸಿದ್ದಪ್ಪ ಅಂಗಡಿ ಇತರರಿದ್ದರು.