ಸಾರಾಂಶ
ಆಸಕ್ತಿ ಇಲ್ವಾ ವರ್ಗಾವಣೆ ಪಡೆದು ಬೇರೆ ಕಡೆ ಹೋಗಿ । ಚಿಕ್ಕಮಗಳೂರು ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬಡವರಿಗೆ ತೊಂದ್ರೆ ಕೊಟ್ರೆ ಸಹಿಸೋದಿಲ್ಲ, ನಿಮಗೆ ಕೆಲಸದಲ್ಲಿ ಆಸಕ್ತಿ ಇಲ್ವಾ, ವರ್ಗಾವಣೆ ಮಾಡಿಸಿಕೊಂಡು ಬೇರೆ ಕಡೆ ಹೋಗಿ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯ್ತಿಯಲ್ಲಿ ಸೋಮವಾರ ನಡೆದ ಚಿಕ್ಕಮಗಳೂರು ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೆಲವು ಇಲಾಖೆಗಳ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ನಗರದ ಎಪಿಎಂಸಿ ಬಳಿ ಕೆ.ಎಂ. ರಸ್ತೆಯಲ್ಲಿ ಆಗಾಗ ರಸ್ತೆ ಅಪಘಾತಗಳು ನಡೆಯುತ್ತಲೇ ಇವೆ. ಕಣಿವೆ ರುದ್ರಸ್ವಾಮಿ ದೇವಾಲಯದಿಂದ ಕತ್ರಿಮಾರಮ್ಮ ದೇವಾಲಯದವರೆಗೆ ಬೀದಿ ದೀಪ ಅಳವಡಿಸುವ ಕೆಲಸ ನೆನಗುದಿಗೆ ಬಿದ್ದಿದೆ. ಟೆಂಡರ್ ಕರೆದು ಕಾಮಗಾರಿ ಆರಂಭಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನಗರೋತ್ಥಾನದಲ್ಲಿ 17 ಕೋಟಿ ರು. ಬಿಡುಗಡೆಯಾದರೂ ಕಾಮಗಾರಿ ಇನ್ನೂ ಪ್ರಾರಂಭಿಸಿಲ್ಲ. ಈ 2 ಕೆಲಸ ಮಾಡಬೇಕಾಗಿದ್ದ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಾಪಾಲಕ ಅಭಿಯಂತರರು ಹಾಗೂ ಇದೇ ಇಲಾಖೆ ಎಂಜಿನಿಯರ್‌ಗಳಿಗೆ ನೊಟೀಸ್ ಜಾರಿ ಮಾಡಬೇಕು ಎಂದು ಶಾಸಕರು, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.ಚಿಕ್ಕಮಗಳೂರು ತಾಲೂಕಿನಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಿರುವ ವಿಷಯ ಚರ್ಚೆಗೆ ಬಂದಾಗ ತಾಲೂಕು ಆರೋಗ್ಯಾಧಿಕಾರಿ ಡಾ. ಸೀಮಾ ಮಾತನಾಡಿ, ಪ್ರತಿದಿನ ಲಾರ್ವಾ ಸರ್ವೆ ಮಾಡಲಾಗುತ್ತಿದೆ. ಮನೆಗಳ ಆಸುಪಾಸಿನಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತಿಲ್ಲ, ಬದಲಿಗೆ ಕಸ ಇರುವ ಕಡೆ ಗಳಲ್ಲಿ ಸೊಳ್ಳೆ ಕಂಡು ಬರುತ್ತಿದೆ ಎಂದು ಹೇಳಿದರು.
ಇತ್ತಿಚೇಗೆ ದೇವನೂರಿನ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ್ದೆ, ಆ ಸಂದರ್ಭದಲ್ಲಿ ಹಲವು ನ್ಯೂನ್ಯತೆಗಳು ಕಂಡು ಬಂದವು. ಪ್ರಮುಖ ವಾಗಿ ಕಿಟಕಿಗಳಿಗೆ ಮೆಸ್ ಹಾಕಿಲ್ಲ. ಹೂವಿನ ಕುಂಡದಲ್ಲಿ ನೀರು ನಿಂತಿತ್ತು. ಇವುಗಳು ಸರಿಪಡಿಸದೆ ಡೆಂಘೀ ನಿಯಂತ್ರಣ ಹೇಗೆ ಸಾಧ್ಯ ಎಂದು ಬಿಸಿಎಂ ಅಧಿಕಾರಿಗಳಿಗೆ ಪ್ರಶ್ನಿಸಿದ ಶಾಸಕರು, ಚಿಕ್ಕಮಗಳೂರು ನಗರದಲ್ಲಿ ನಿರಂತರ ಫಾಗಿಂಗ್ ಮಾಡಬೇಕು. ವಾರ್ಡ್‌ವಾರು ನಗರಸಭೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಬೇಕು ಎಂದರು.2022-23ನೇ ಸಾಲಿನಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 2460 ಮಂದಿ ರೈತರು ಹವಾಮಾನ ಆಧಾರಿತ ಬೆಳೆ ವಿಮೆ ಕಟ್ಟಿದ್ದರು. ಈ ಪೈಕಿ 2100 ಜನರಿಗೆ 6.1 ಕೋಟಿ ರು. ವಿಮೆ ಬಂದಿದೆ. 2023-24ನೇ ಸಾಲಿನಲ್ಲಿ 1757 ಹಾಗೂ 2024-25ನೇ ಸಾಲಿನಲ್ಲಿ ಈವರೆಗೆ 92 ಮಂದಿ ರೈತರು ವಿಮೆ ಕಟ್ಟಿದ್ದಾರೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶಿಶು ಅಭಿವೃದ್ಧಿ ಅಧಿಕಾರಿ ರಂಗನಾಥ್ ಮಾತನಾಡಿ, ಚಿಕ್ಕಮಗಳೂರು ತಾಲೂಕಿನಲ್ಲಿ 407 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ 345 ಕೇಂದ್ರಗಳು ಸ್ವಂತ ಕಟ್ಟಡಗಳಲ್ಲಿ ಇದ್ದರೆ, 62 ಅಂಗನವಾಡಿ ಕೇಂದ್ರಗಳು ಬಾಡಿಗೆ ಹಾಗೂ ಇತರೆ ಕಟ್ಟಡಗಳಲ್ಲಿ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.ಕಾಂಕ್ ವುಡ್:2022-23ನೇ ಸಾಲಿನಲ್ಲಿ ಚಿಕ್ಕಮಗಳೂರಿನ ಕಾಂಕ್ ವುಡ್ ಸಂಸ್ಥೆಗೆ 7 ಕೋಟಿ ರು. ಕಾಮಗಾರಿ ನೀಡಲಾಗಿತ್ತು. ಆದರೆ, ಈವರೆಗೆ ಕಾಮಗಾರಿ ಆರಂಭಿಸಿಲ್ಲ. ಹಾಗಾಗಿ ಎರಡು ಬಾರಿ ನೊಟೀಸ್ ಜಾರಿ ಮಾಡಲಾಗಿದೆ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಅಧಿಕಾರಿಗಳು ಉತ್ತರ ನೀಡಿದರು. ಆಗ ಶಾಸಕರು ಮಾತನಾಡಿ, ಜನ ಸಾಮಾನ್ಯರಿಗೆ ಅನುಕೂಲವಾಗಬೇಕು, ಯಾರ ಮೇಲೂ ವೈಯಕ್ತಿಕ ದ್ವೇಷ ಇಲ್ಲ, ಜನರ ಕೆಲಸ ಆಗಬೇಕು. ಇದೇ ಜು. 30 ರೊಳಗೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಷಯ ಚರ್ಚೆಗೆ ಬಂದಾಗ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಜಯಣ್ಣ ಮಾತನಾಡಿ, ಬೇಲೂರು- ಚಿಕ್ಕ ಮಗಳೂರು ಚತುಸ್ಪಥ ರಸ್ತೆ ನಿರ್ಮಾಣದ ಸಂಬಂಧ ಡಿಪಿಆರ್ ಆಗಿದೆ ಎಂದು ಹೇಳುತ್ತಿದ್ದಂತೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಮೂಗ್ತಿಹಳ್ಳಿ- ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸಲು ಆಗಸ್ಟ್ ತಿಂಗಳಲ್ಲಿ ಸಭೆ ಕರೆಯಬೇಕೆಂದು ಸೂಚನೆ ನೀಡಿದರು.ಪಿಎಂಜಿಎಸ್‌ವೈ ಯೋಜನೆಯಡಿ ಕಾಮಗಾರಿ ಕೈಗೊತ್ತಿಕೊಳ್ಳಲು ಪ್ರತಿ ಕ್ಷೇತ್ರಕ್ಕೆ 50 ಕೋಟಿ ರು. ನೀಡುವುದಾಗಿ ಸರ್ಕಾರ ಹೇಳಿದೆ. ಕೂಡಲೇ ಕಾಮಗಾರಿ ಪಟ್ಟಿ ಸಿದ್ಧಪಡಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಭದ್ರಾದಿಂದ ಕೆರೆಗಳಿಗೆ ನೀರು ತುಂಬಿಸುವ 2ನೇ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, 78 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, ಅವು ಪ್ರಗತಿಯಲ್ಲಿವೆ. 3ನೇ ಹಂತಕ್ಕೆ ಅಂದಾಜುಪಟ್ಟಿ ಸಿದ್ಧಪಡಿಸಲಾಗಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿ ಮಾಹಿತಿ ನೀಡಿದರು.ಸಭೆಯಲ್ಲಿ ತಾಲೂಕು ಪಂಚಾಯ್ತಿ ಆಡಳಿತಾಧಿಕಾರಿ ಸೋಮಶೇಖರ್, ತಾಪಂ ಕಾರ್ಯನಿರ್ವಹಕ ಅಧಿಕಾರಿ ಎಚ್.ಕೆ. ತಾರಾನಾಥ್, ತಹಸೀಲ್ದಾರ್ ಡಾ. ಸುಮಂತ್ ಉಪಸ್ಥಿತರಿದ್ದರು. 8 ಕೆಸಿಕೆಎಂ 1
ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಚಿಕ್ಕಮಗಳೂರು ತಾಲೂಕಿನ ತ್ರೈ ಮಾಸಿಕ ಕೆಡಿಪಿ ಸಭೆ ಶಾಸಕ ಎಚ್.ಡಿ. ತಮ್ಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಸೋಮಶೇಖರ್, ಡಾ. ಸುಮಂತ್, ಎಚ್.ಕೆ. ತಾರಾನಾಥ್ ಇದ್ದರು.