ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಪಟ್ಟಣದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣ ಬಳಿ ಬುಧವಾರ ರಾತ್ರಿ ಬಿಜೆಪಿ ಮುಖಂಡರು ಪಂಜಿನ ಮೆರವಣಿಗೆ ನಡೆಸಿದರು.ಡಾ.ಎಚ್.ಎನ್.ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಿದ ಪಕ್ಷದ ಕಾರ್ಯಕರ್ತರು ನಂತರ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಹಿಂದುಗಳೇ ಟಾರ್ಗೆಟ್ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಬಾಗೇಪಲ್ಲಿ ತಾಲೂಕು ಮಂಡಲಾಧ್ಯಕ್ಷ ಆರ್.ಪ್ರತಾಪ್, ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿರುವುದು ಖಂಡನೀಯ. ಪ್ರವಾಸಕ್ಕೆ ತೆರಳಿದ್ದವರನ್ನು ಉಗ್ರರು ಅಮಾನುಷವಾಗಿ ಹತ್ಯೆ ಮಾಡಿರುವುದು ಹೇಯ ಕೃತ್ಯ. ಈ ಕೃತ್ಯವೆಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಉಗ್ರರಿಗೆ ಪಾಕ್ ಬೆಂಬಲಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಈ ಕೃತ್ಯಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. 370ನೇ ವಿಧಿ ರದ್ದಾದ ನಂತರ ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದೆ. ನೆರೆಯ ಪಾಕಿಸ್ತಾನಕ್ಕೆ ಇದನ್ನು ಸಹಿಸಲು ಆಗುತ್ತಿಲ್ಲ. ದಿವಾಳಿ ಎದುರಿಸುತ್ತಿರುವ ಪಾಕಿಸ್ತಾನ ಸರ್ಕಾರ ಅಲ್ಲಿನ ಜನರ ಮನಸ್ಸು ಬೇರೆಡೆ ತಿರುಗಿಸಲು ಇಂತಹ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಗುಡಿಬಂಡೆ ಮಂಡಲಾದ್ಯಕ್ಷರಾದ ಗಂಗಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಮುಖಂಡರಾದ ಕೃಷ್ಣಯ್ಯ, ಮಂಜುನಾಥ್, ಚಿನ್ನ ಪುಜಪ್ಪ, ಕೆ.ಆರ್. ಅಂಜಿನಪ್ಪ, ಕೆ ಟಿ ವೀರಾಂಜನೇಯ, ಎಂ. ರವಿ ಕುಮಾರ್, ಎಂ.ಆರ್. ಶ್ರೀನಿವಾಸ್, ಸುನಿಲ್ ರೆಡ್ಡಿ, ಗಣೇಶ್ ರೆಡ್ಡಿ, ಗಂಗರಾಜು, ಸುಬ್ಬಿರೆಡ್ಡಿ, ಮಂಜುನಾಥಸ್ವಾಮಿ, ಮಂಜುಳಮ್ಮ, ರೂಪ, ಗಂಗಮ್ಮ, ಗಾಯಿತ್ರಮ್ಮ, ದೇವರಾಜು, ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.