ಪ್ರವಾಸಿಗರ ಹತ್ಯೆ: ನ್ಯಾಮತಿಯಲ್ಲಿ ಪಂಜಿನ ಮೆರವಣಿಗೆ

| Published : Apr 28 2025, 11:45 PM IST

ಸಾರಾಂಶ

ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ನರಮೇಧ ಖಂಡಿಸಿ ತಾಲೂಕು ಯುವ ಬ್ರಿಗೇಡ್‌ ಘಟಕ ನೇತೃತ್ವದಲ್ಲಿ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ನ್ಯಾಮತಿ

ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ನರಮೇಧ ಖಂಡಿಸಿ ತಾಲೂಕು ಯುವ ಬ್ರಿಗೇಡ್‌ ಘಟಕ ನೇತೃತ್ವದಲ್ಲಿ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಪಹಲ್ಗಾಂ ಪ್ರವಾಸಕ್ಕೆ ತೆರೆಳಿದ್ದ ಹಿಂದುಗಳ ಮೇಲೆ ಧರ್ಮ ಯಾವುದೆಂದು ಕೇಳಿ ದಾಳಿ ಮಾಡಲಾಗಿದೆ. ಹಿಂದೂಗಳ ಮೇಲಿನ ದಾಳಿ ಖಂಡನೀಯ. ಪ್ರಧಾನಿ ಮೋದಿ ಅದಕ್ಕೆ ತಕ್ಕ ಉತ್ತರ ನೀಡುವ ಮೂಲಕ ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ನೀಡಲಿದ್ದಾರೆ ಎಂದರು.

ಯುವ ಬ್ರಿಗೇಡ್‌ ಮಂಗಳೂರು ವಿಭಾಗದ ಜಿಲ್ಲಾ ಸಹ ಸಂಚಾಲಕ ಶರತ್‌ ಸೋಗಿ ಮಾತನಾಡಿ, ಹಿಂದುಗಳು ಜಾತಿ ಮನಸ್ಥಿತಿಯಿಂದ ಹೊರಬರಬೇಕು. ಇನ್ನೂ ಮುಂದಾದರು ನಾವೆಲ್ಲರು ಒಂದೇ ಎಂಬ ಮನೋಭಾವದಿಂದ ಹಿಂದುಗಳು ಒಗ್ಗಟ್ಟಿನಿಂದ ಬದುಕಬೇಕು. ಆಗ ಮಾತ್ರ ಇಂತಹ ಮನಸ್ಥಿತಿಯ ದಾಳಿಕೋರರನ್ನು ಎದುರಿಸಲು ಸಾಧ್ಯ ಎಂದು ಹೇಳಿದರು.

ಪಂಜಿನ ಮೆರವಣಿಗೆ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾಗಿ, ಅಜಾದ್‌ ರಸ್ತೆ ಮೂಲಕ ಗಾಂಧಿ ರಸ್ತೆ, ಮಹಾಂತೇಶ್ವರ ರಸ್ತೆ, ನೆಹರೂ ರಸ್ತೆ ಮೂಲಕ ಕಿತ್ತೂರು ಚೆನ್ನಮ್ಮ ವೃತ್ತದವರೆಗೆ ಸಾಗಿತು. ಮೆರವಣಿಗೆಯಲ್ಲಿ ಉಗ್ರರ ವಿರುದ್ಧ ಕನ್ನಡಿಗ ಎಂಬ ಶೀರ್ಷಿಕೆ ಅಡಿಯಲ್ಲಿ ಹಿಂದು ನಾವೆಲ್ಲ ಒಂದು ಘೋಷಣೆ ಕೂಗಲಾಯಿತು. ಮೆರವಣಿಗೆ ನಂತರ ಮೌನಾಚರಣೆ ನಡೆಸಿ, ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಯುವ ಬ್ರಿಗೇಡ್‌ ನ್ಯಾಮತಿ ಘಟಕ ಸಂಚಾಲಕ ಸುಪ್ರೀತ್‌, ಹವಳದ ಲಿಂಗರಾಜು, ವೀರಣ್ಣ ಗೌಡ, ಬಿ.ಕೆ.ಕರಿಬಸಪ್ಪ, ಯುವ ಬ್ರಿಗೇಡ್‌ ಪದಾಧಿಕಾರಿಗಳು, ಮುಖಂಡರು ಮತ್ತಿತರರಿದ್ದರು.

- - -

(ಫೋಟೋ)