ಸಾರಾಂಶ
ನಗರದಲ್ಲಿ ಸೋಮವಾರ ಮಧ್ಯಾಹ್ನ ಅಲ್ಪಕಾಲ ಸುರಿದ ಧಾರಾಕಾರವಾಗಿ ಮಳೆಯಿಂದ ನಗರದ ರಸ್ತೆಗಳು ಅಕ್ಷರಶಃ ನದಿಗಳಂತೆ ತುಂಬಿ ಹರಿದ ಪರಿಣಾಮ ಹಲವು ಕಡೆ ವಾಹನ ಸಂಚಾರದಲ್ಲಿ ದಟ್ಟಣೆ ಉಂಟಾಯಿತು. ಬೆಳಗ್ಗೆ ನಗರದಲ್ಲಿ ಬಿಸಿಲ ವಾತಾವರಣ ಕಂಡು ಬಂತಾದರೂ. ಮಧ್ಯಾಹ್ನ 12 ಗಂಟೆಯ ನಂತರ ಏಕಾಏಕಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಮೂರು ಗಂಟೆಯ ಸುಮಾರಿಗೆ ಮೆಜಸ್ಟಿಕ್, ಗಾಂಧಿನಗರ, ವಿಧಾನಸೌಧ, ಸದಾಶಿವನಗರ ಸೇರಿದಂತೆ ಮೊದಲಾದ ಸ್ಥಳದಲ್ಲಿ ಧಾರಾಕಾರವಾಗಿ ಮಳೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಸೋಮವಾರ ಮಧ್ಯಾಹ್ನ ಅಲ್ಪಕಾಲ ಸುರಿದ ಧಾರಾಕಾರವಾಗಿ ಮಳೆಯಿಂದ ನಗರದ ರಸ್ತೆಗಳು ಅಕ್ಷರಶಃ ನದಿಗಳಂತೆ ತುಂಬಿ ಹರಿದ ಪರಿಣಾಮ ಹಲವು ಕಡೆ ವಾಹನ ಸಂಚಾರದಲ್ಲಿ ದಟ್ಟಣೆ ಉಂಟಾಯಿತು. ಬೆಳಗ್ಗೆ ನಗರದಲ್ಲಿ ಬಿಸಿಲ ವಾತಾವರಣ ಕಂಡು ಬಂತಾದರೂ. ಮಧ್ಯಾಹ್ನ 12 ಗಂಟೆಯ ನಂತರ ಏಕಾಏಕಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಮೂರು ಗಂಟೆಯ ಸುಮಾರಿಗೆ ಮೆಜಸ್ಟಿಕ್, ಗಾಂಧಿನಗರ, ವಿಧಾನಸೌಧ, ಸದಾಶಿವನಗರ ಸೇರಿದಂತೆ ಮೊದಲಾದ ಸ್ಥಳದಲ್ಲಿ ಧಾರಾಕಾರವಾಗಿ ಮಳೆಯಿತು.ಸುಮಾರು 15ರಿಂದ 20 ನಿಮಿಷ ಕಾಲ ಧಾರಾಕಾರವಾಗಿ ಮಳೆ ಸುರಿದು ಭಾರೀ ಪ್ರಮಾಣ ನೀರು ರಸ್ತೆಗಳಲ್ಲಿ ಹರಿಯಿತು. ಇದರಿಂದ ಮೆಜೆಸ್ಟಿಕ್, ಅರಮನೆ ರಸ್ತೆ, ಆನಂದ್ ರಾವ್ ವೃತ್ತ ಸೇರಿದಂತೆ ಮೊದಲಾದ ಕಡೆ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ನಾಗಶೆಟ್ಟಿ ಹಳ್ಳಿ ಬಳಿಕ ಆರ್‌ಎಂವಿ 2ನೇ ಹಂತದಲ್ಲಿ ಭಾರೀ ಪ್ರಮಾಣ ಮಳೆ ನೀರು ತುಂಬಿಕೊಂಡ ವರದಿಯಾಗಿದೆ. ಸಂಜಯ್ ನಗರದಲ್ಲಿ ಬೃಹತ್ ಮರ ಬುಡಸಮೇತ ರಸ್ತೆಯಲ್ಲಿ ನಿಲ್ಲಿಸಿದ ಕಾರಿನ ಮೇಲೆ ಬಿದ್ದು, ಕಾರು ಜಖಂ ಆಗಿದೆ. ಪದ್ಮನಾಭ ನಗರದಲ್ಲಿ ರಸ್ತೆಯಲ್ಲಿ ಆಟೋ ಹಾಗೂ ಕಾರಿನ ಮೇಲೆ ಮರದ ಕೊಂಬೆ ಬಿದ್ದಿದೆ. ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ.
ಸೋಮವಾರ ನಗರದಲ್ಲಿ ಸರಾಸರಿ 7.5 ಮಿ.ಮೀ ಮಳೆಯಾಗಿದ್ದು, ವಿಶ್ವನಾಥ ನಾಗೇನಹಳ್ಳಿಯಲ್ಲಿ ಅತಿ ಹೆಚ್ಚು 3.4 ಸೆಂ.ಮೀ ಮಳೆಯಾಗಿದೆ. ಕೊಡಿಗೆಹಳ್ಳಿಯಲ್ಲಿ 2.8, ಈಸ್ಟ್ ಬಾಣಸವಾಡಿಯಲ್ಲಿ 1.8, ಕುಶಾಲನಗರ 1.7 ಹಾಗೂ ರಾಜಮಹಲ್ ಗುಟ್ಟಹಳ್ಳಿಯಲ್ಲಿ 1.2 ಸೆಂ.ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.