ಕನ್ನಡಪ್ರಭ ವಾರ್ತೆ ಹರಿಹರ

ಕಳೆದ 3 ತಿಂಗಳಿಗೂ ಅಧಿಕ ದಿನಗಳಿಂದ ಸುರಿದ ಬಿಸಿಲಿನ ತಾಪಮಾನಕ್ಕೆ, ಕಾದ ಕಬ್ಬಿಣದ ಕಡಲೆಯಂತಾಗಿದ್ದ ಹರಿಹರ ನಗರದ ಜನತೆಗೆ ಶುಕ್ರವಾರ ಬೆಳಗಿನ ಜಾವ 4.50ರಿಂದ ಬೆಳಗ್ಗೆ 7 ಗಂಟೆವರೆಗೆ ಸುರಿದ ಆರಿದ್ರಾ ಮಳೆ ಆಹ್ಲಾದ ನೀಡಿದೆ. ಉತ್ತಮ ಮಳೆ ಎಂಬುದು ಅನ್ನದಾತರ ಬದುಕಿನಲ್ಲಿ ಸಂತಸ ನೀಡಿದರೆ, ನಗರದ ಜನತೆ ಮಳೆಯಿಂದ ಪರದಾಡುವಂತಾಗಿದೆ.

ಬೆಳ್ಳಂಬೆಳಗ್ಗೆಯೇ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಆರಂಭಗೊಂಡ ಮಳೆ 2 ತಾಸಿಗೂ ಅಧಿಕ ಸಮಯ ಎಡೆಬಿಡದೇ ಸುರಿಯಿತು. ಮುಂಜಾನೆ ಸುದ್ದಿ ಪತ್ರಿಕೆಗಳನ್ನು ಹಂಚುವವರಿಗೆ, ಹಾಲು, ತರಕಾರಿ ಮಾರಾಟಗಾರರಿಗೆ, ವ್ಯಾಪಾರ ವಹಿವಾಟನ್ನು ಆರಂಭಿಸುವವರಿಗೆ ಹಾಗೂ ನಗರ ಸ್ವಚ್ಛತೆಗೆ ತೆರಳುವ ಪೌರ ಕಾರ್ಮಿಕರಿಗೂ ಮಳೆ ಅಡ್ಡಿಪಡಿಸಿತು.

ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ನಗರದ ಹರಪನಹಳ್ಳಿ ಸರ್ಕಲ್ ಸಮೀಪದ ರೈಲ್ವೆ ಕೇಳಸೇತುವೆ, ದಾವಣಗೆರೆಗೆ ತೆರಳುವ ಮುಖ್ಯ ರಸ್ತೆ, ಬೆಂಕಿ ನಗರ, ಗಾಂಧಿ ನಗರ ಸೇರಿದಂತೆ ಬಹುತೇಕ ವಾರ್ಡುಗಳ ತಗ್ಗುಪ್ರದೇಶಗಳಲ್ಲಿ ನೀರು ನಿಂತಿತು. ಕೆಲವೆಡೆ ಮನೆಗಳಲ್ಲಿ ಮಳೆನೀರಿನ ಜತೆ ಚರಂಡಿ ನೀರು ನುಗ್ಗಿ ಪರದಾಡುವಂತಾಯಿತು.

ತರಕಾರಿ ಮಾರುಕಟ್ಟೆಯಲ್ಲಿ ಹರಾಜಿಗೆಂದು ಇರಿಸಿದ್ದ ಸೊಪ್ಪು, ತರಕಾರಿಗಳು ನೀರಿನಲ್ಲಿ ತೇಲಿಹೊಗಿವೆ. ಕೆಲವು ಓಣಿಗಳಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ರಸ್ತೆಯಲ್ಲಿನ ತ್ಯಾಜ್ಯ ನೀರು ಹರಿಯುತ್ತಿರುವುದು ಕಂಡುಬಂದಿತು. ಇನ್ನಾದರೂ ಅಧಿಕಾರಿಗಳು ನಗರದಾದ್ಯಂತ ಮಳೆಗಾಲದ ಸಮಯದಲ್ಲಿ ಬಿದ್ದ ಮಳೆನೀರು ಸರಾಗವಾಗಿ ಹರಿದು ಊರಿಂದಾಚೆಗೆ ಸಾಗುವಂತೆ ಮಾಡಬೇಕು ಎಂಬ ಒತ್ತಾಯ ಜನರಿಂದ ವ್ಯಕ್ತವಾಯಿತು.


ಶಾಸಕ ಬಿ.ಪಿ. ಹರೀಶ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ನಗರದ ಮಳೆಯಿಂದ ತೊಂದರೆಕ್ಕೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರೀಶಿಲನೆ ಮಾಡಿದರು. ಮಳೆಗಾಲ ಹಿನ್ನೆಲೆ ಇಂಥ ಸಮಸ್ಯೆ ಮರುಕಳಿಸದಂತೆ ಶೀಘ್ರ ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ನಗರಸಭೆ ಪೌರಾಯುಕ್ತೆ ಈರಮ್ಮ, ಎಇಇ ವಿನಯ್‌ಕುಮಾರ್ ಹಾಗೂ ಸಿಬ್ಬಂದಿ ಇದ್ದರು.

- - -

(ಬಾಕ್ಸ್‌)

* ವಿವಿಧೆಡೆ ಮಳೆ ವಿವರ ಹರಿಹರ ತಾಲೂಕಿನಲ್ಲಿ ಗುರುವಾರ ಉತ್ತಮ ಮಳೆಯಾಗಿದ್ದು, ವಿವಿಧ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆಯ ಪ್ರಮಾಣ ಹೀಗಿದೆ. ಹರಿಹರದಲ್ಲಿ 38.8 ಮಿ.ಮೀ., ಕೊಂಡಜ್ಜಿಯಲ್ಲಿ 46.0, ಮಲೇಬೆನ್ನೂರಿನಲ್ಲಿ 17.0 ಹಾಗೂ ಹೊಳೆಸಿರಿಗೆರೆಯಲ್ಲಿ 24.6 ಮಿ.ಮೀ. ಮಳೆಯಾಗಿದೆ. ತಾಲೂಕಿನ ಒಟ್ಟು ಮಳೆಯ ಪ್ರಮಾಣ 126.4 ಮಿ.ಮೀ. ಆಗಿದ್ದು, ಸರಾಸರಿ 31.6 ಮಿ.ಮೀ. ಮಳೆಯಾಗಿದೆ.

-- -

22 ಹೆಚ್.ಆರ್.ಆರ್ 01

ಹರಿಹರ ನಗರದಾದ್ಯಂತ ಶುಕ್ರವಾರ ಬೆಳಂಬೆಳಿಗ್ಗೆ ಸುರಿದ ಮಳೆಯಿಂದ ಇನ್ನಿಲ್ಲದ ಅವಾಂತರ ಸೃಷ್ಠಿಯಾಗಿದೆ.