ಸಾರಾಂಶ
ಒಂದು ಕಾಲದಲ್ಲಿ ಕಲಾತ್ಮಕ ದೇವಾಲಯ ಹೊಂದಿದ್ದ, ಟಂಕಸಾಲೆಗಳಿಂದ ಶ್ರೀಮಂತವಾಗಿದ್ದ ನಮ್ಮ ಲಕ್ಕುಂಡಿ ಇಂದು ತನ್ನ ಗತವೈಭವ ಸಾರುತ್ತಿದೆ
ಗದಗ: ಲಕ್ಕುಂಡಿಯ ಪೂರ್ವ ವೈಭವ ಮರಳಿ ತಂದು ವಿಶ್ವ ಭೂಪಟದಲ್ಲಿ ಹಂಪಿಯಂತೆಯೇ ಲಕ್ಕುಂಡಿಗೂ ಜಾಗತಿಕ ಮನ್ನಣೆ ತರುವ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ, ಸಹಕಾರ ಅಗತ್ಯವಿದೆ. ಅಲಕ್ಷ್ಯಕ್ಕೊಳಗಾದ ಪ್ರಾಚ್ಯಾವಶೇಷಗಳನ್ನು ಒಂದೆಡೆ ಕ್ರೂಢೀಕರಿಸಿ ದೇವಾಲಯಗಳ ಅತಿಕ್ರಮಣ ತೆರವುಗೊಳಿಸಿ, ಸ್ವಚ್ಛತೆಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೀವು ತೋರುವ ಕಾಳಜಿ ಮಹತ್ತರ ಕಾಯಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಈ ಕುರಿತು ಲಕ್ಕುಂಡಿ ಗ್ರಾಮಸ್ಥರಲ್ಲಿ ಮನವಿ ಮಾಡಿದ ಅವರು, ನಮ್ಮ ನಿಮ್ಮೆಲ್ಲರ ಹೆಮ್ಮೆಯ ಲಕ್ಕುಂಡಿ ಗ್ರಾಮದ ಮೊದಲ ಹೆಸರು ಲೊಕ್ಕಿಗುಂಡಿ ಎಂದರೆ ಸಾಕ್ಷಾತ್ ಲಕ್ಷ್ಮೀಯ ನೆಲೆ ಎಂದರ್ಥ. ಈ ಗ್ರಾಮವು ದೇವಾಲಯಗಳ ಸ್ವರ್ಗವೆಂದು ಹೆಸರಾಗಿದೆ. ಲಕ್ಕುಂಡಿ ಕನ್ನಡದ ರತ್ನತ್ರಯರಲ್ಲಿ ಒಬ್ಬರಾದ ರನ್ನ ಕವಿಗೆ ಆಶ್ರಯ ನೀಡಿದ್ದ ಕವಿವರ ಕಾಮಧೇನು, ದಾನಚಿಂತಾಮಣಿ ಎಂದು ಪ್ರಸಿದ್ಧಳಾದ ಅತ್ತಿಮಬ್ಬೆಗೆ ಉಸಿರಿತ್ತು, ಹೆಸರಾದ ಪಾವನ ಭೂಮಿ. ಶರಣ ಸಹೋದರ-ಸಹೋದರಿಯರಾದ ಮುಕ್ತಾಯಿಯಕ್ಕ ಮತ್ತು ಅಜಗಣ್ಣನವರ ಜನ್ಮಭೂಮಿ.ಕಲ್ಯಾಣಿ ಚಾಲುಕ್ಯರು, ಹೊಯ್ಸಳರು, ಕಲಚುರಿ ಅರಸರು ಸಾವಿರ ವರ್ಷಗಳ ಹಿಂದೆ ಹಾಕಿಸಿರುವ ಶಾಸನಗಳ ಪ್ರಕಾರ ಲಕ್ಕುಂಡಿ ಸಾಕ್ಷಾತ್ ಶ್ರೀರಾಮನಿಂದ ನಿರ್ಮಿತವಾದ ಮಹಾ ಅಗ್ರಹಾರ, ಪಾವನ ಚರಿತ್ರಳಾದ ದಾನಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿ. ಒಳ್ಳೆಯತನಕ್ಕೆ, ಧರ್ಮಕ್ಕೆ, ಲಕ್ಷ್ಮೀಗೆ ತವರು ಮನೆಯಂತಿದ್ದ ಲಕ್ಕುಂಡಿ ಗ್ರಾಮವು ಇಂದ್ರನ ಅಮರಾವತಿಗಿಂತಲೂ ಶ್ರೇಷ್ಠವಾಗಿದ್ದು, ಅಮರಾವತಿ ಮತ್ತು ಲಕ್ಕುಂಡಿಯನ್ನು ತಕ್ಕಡಿಯಲ್ಲಿಟ್ಟು ತೂಗಿದಾಗ ಲಕ್ಕುಂಡಿಯ ತೂಕವೇ ಹೆಚ್ಚಾಗಿತ್ತೆಂದು ಶಾಸನದಲ್ಲಿ ಹೇಳಲಾಗಿದೆ ಎಂದರು.
ಒಂದು ಕಾಲದಲ್ಲಿ ಕಲಾತ್ಮಕ ದೇವಾಲಯ ಹೊಂದಿದ್ದ, ಟಂಕಸಾಲೆಗಳಿಂದ ಶ್ರೀಮಂತವಾಗಿದ್ದ ನಮ್ಮ ಲಕ್ಕುಂಡಿ ಇಂದು ತನ್ನ ಗತವೈಭವ ಸಾರುತ್ತಿದೆ. ಹಿಂದೊಮ್ಮೆ ಪೂಜೆ ಪುನಸ್ಕಾರ, ದಾನ ದತ್ತಿಗಳಿಂದ ಶ್ರೀಮಂತವಾಗಿದ್ದ ಗ್ರಾಮದ ಅಪರೂಪದ ವಾಸ್ತುಶಿಲ್ಪದ ನೆಲೆವೀಡಾಗಿದ್ದ ದೇವಾಲಯಗಳು, ಇಂದು ಕಾಲನ ಹೊಡೆತಕ್ಕೆ, ನಮ್ಮಗಳ ಅಲಕ್ಷಕ್ಕೆ ಸಿಕ್ಕು ಕಣ್ಮರೆಯಾಗುತ್ತಿವೆ. ದೇವಾಲಯದ ಅವಶೇಷಗಳು ಎಲ್ಲೆಂದರಲ್ಲಿ ಚದುರಿ ಬಿದ್ದಿವೆ. ಇದು ನನಗೆ ಮಾತ್ರವಲ್ಲ, ನಮ್ಮೆಲ್ಲರಿಗೆ ನೋವನ್ನು ತಂದಿದೆ. ಹೀಗಾಗಿ ನಮ್ಮ ಪ್ರಾಚೀನ ಇತಿಹಾಸ ಮತ್ತು ಪರಂಪರೆ ಸಂರಕ್ಷಿಸುವ ದಿಸೆಯಲ್ಲಿ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ. ಅದರ ಫಲಿತವಾಗಿ, ಹಿಂದೊಮ್ಮೆ ವೈಭವಯುತವಾಗಿ ಮೆರೆದಿದ್ದ ಲಕ್ಕುಂಡಿ ಗ್ರಾಮವನ್ನು ಪುನರುತ್ಥಾನ ಮಾಡಲು ಗತವೈಭವ ಮರಳಿಸಲು ಮುಂದಡಿ ಇಟ್ಟಿದೆ. ಲಕ್ಕುಂಡಿಯಲ್ಲಿ ಎಲ್ಲೆಂದರಲ್ಲಿ ಸುಂದರವಾದ ಕಲಾಕೃತಿ, ವಿಗ್ರಹ, ಮೂರ್ತಿ ಉತ್ಕರ್ಷ್ಟ ಕೆತ್ತನೆಯ ಶಿಲ್ಪಕಲೆ ಬಿಂಬಿಸುವ ಕಂಬಗಳು ನಿಮ್ಮ ಮನೆಗಳ ಬಳಿ ಚದುರಿ ಬಿದ್ದಿರುವ ಕಂಬಗಳು, ಮುರಿದು ಬಿದ್ದಿರುವ ಭಗ್ನಗೊಂಡಿರುವ ಶಿಲ್ಪಗಳು, ಮನೆಯ ಮೆಟ್ಟಿಲಾಗಿರುವ ಶಾಸನಗಳು, ದೇವರ ಮನೆಗಳಲ್ಲಿ, ಅಟ್ಟಗಳಲ್ಲಿ ಇಟ್ಟು ನಿರ್ಲಕ್ಯಕ್ಕೊಳಗಾಗಿರುವ ತಾಳೆಗರಿಯ ಹಸ್ತಪ್ರತಿಗಳು, ಇನ್ನೂ ಮುಂತಾದ ಐತಿಹಾಸಿಕ ಮಹತ್ವದ ಪ್ರಾಚ್ಯಾವಶೇಷ ನೀಡುವಂತೆ ಕೋರಿ ನ. 24 ರಂದು ನಿಮ್ಮ ಮನೆಯ ಬಾಗಿಲಿಗೆ ಬಂದು ಸ್ವೀಕರಿಸುತ್ತೇವೆ. ನೀವು ಕೊಡುವಂತಹ ಪ್ರಾಚ್ಯಾವಶೇಷ ಅತ್ಯಂತ ವಿಶೇಷವಾದವುಗಳೆಂದು ಭಾವಿಸಿ ಸೂಕ್ತ ಸಂರಕ್ಷಣೆ ಮಾಡುತ್ತೇವೆ. ನೀವು ನೀಡುವ ಒಂದೊಂದು ಇತಿಹಾಸ ಸಂಬಂಧಿ ವಸ್ತುವೂ ನಮ್ಮ ಪರಂಪರೆಯ ರಕ್ಷಣೆಗೆ ಹಾಗೂ ಮುಂದಿನ ತಲೆಮಾರಿಗೆ ನೀವು ನೀಡುವ ಬೆಲೆ ಕಟ್ಟಲಾರದ ಕೊಡುಗೆ ಎಂದೇ ಭಾವಿಸುತ್ತೇನೆ ಎಂದರು.