23 ರಂದು ಶಾಸಕರೊಂದಿಗೆ ರೈತರ ಮುಖಾಮುಖಿ ಚರ್ಚೆ

| Published : Jan 03 2025, 12:32 AM IST

ಸಾರಾಂಶ

ರೈತರು ಬೆಳೆದ ಟನ್ ಕಬ್ಬಿಗೆ ಐದುವರೆ ಸಾವಿರ ನೀಡಬೇಕು

ಕನ್ನಡಪ್ರಭ ವಾರ್ತೆ ನಂಜನಗೂಡು ತಾಲೂಕಿನ ತಾಂಡವಪುರ ಗ್ರಾಮದಲ್ಲಿ ಜ. 23 ರಂದು ಜಿಲ್ಲೆಯ ಶಾಸಕರೊಂದಿಗೆ ರೈತರ ಮುಖಾಮುಖಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ರೈತರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಸೂಚಿಸುವಂತೆ ಮನವಿ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ಮುಖಂಡ ಪಚ್ಚೆ ನಂಜುಂಡಸ್ವಾಮಿ ಹೇಳಿದರು.ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಂದು ಜಿಲ್ಲೆಯ ಶಾಸಕರಾದ ದರ್ಶನ್ ಧ್ರುವನಾರಾಯಣ, ಅನಿಲ್ ಚಿಕ್ಕಮಾದು, ಡಾ. ಯತೀಂದ್ರ ಸಿದ್ದರಾಮಯ್ಯ, ಗಣೇಶ್ ಪ್ರಸಾದ್, ಡಿ. ರವಿಶಂಕರ್, ದರ್ಶನ್ ಪುಟ್ಟಣ್ಣಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ, ಸರ್ಕಾರದ ವತಿಯಿಂದ ಪರಿಹಾರ ಕಂಡುಕೊಳ್ಳಲು, ಶಾಸಕರು ಜಿಲ್ಲೆಯ ರೈತರೊಂದಿಗೆ ಮುಖಾಮುಖಿ ಚರ್ಚಿಸಲು, ರೈತರ ಬೇಡಿಕೆಗಳನ್ನು ಈಡೇರಿಸಲು ಶಾಸಕರ ಮೂಲಕ ಸರ್ಕಾರಕ್ಕೆ ಗಡುವು ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.ರೈತರು ಬೆಳೆದ ಟನ್ ಕಬ್ಬಿಗೆ ಐದುವರೆ ಸಾವಿರ ನೀಡಬೇಕು, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರು ಜಮೀನಿನ ಮಂಜೂರಾತಿ ಪಡೆಯಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದು,ಹಣ ನೀಡಿದವರಿಗೆ ಜಮೀನು ಮಂಜೂರಾತಿ ಪತ್ರ ನೀಡುತ್ತಿದ್ದಾರೆ, ನೂರಾರು ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಮಂಜೂರಾತಿ ನೀಡಬೇಕು, ಗ್ರಾಮಗಳು ಗ್ರಾಮದ 10 ಪಟ್ಟು ವ್ಯಾಪ್ತಿ ಮೀರಿ ಬೆಳೆದಿವೆ, ಗ್ರಾಮ ಠಾಣಾ ವಿಸ್ತರಿಸಿ ಎ ಖಾತೆ ಮಾಡಿಕೊಡಬೇಕು, ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ಕೇಂದ್ರ ಸರ್ಕಾರಕ್ಕೆ 18 ಸಾವಿರ ಕೋಟಿ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿತ್ತು, ಕೇಂದ್ರ ಸರ್ಕಾರ ರಾಜ್ಯದ ಬೇಡಿಕೆಯಷ್ಟು ಸಾಲ ಮಂಜೂರಾತಿ ಮಾಡದೆ ಇರುವುದರಿಂದ ರೈತರು ಖಾಸಗಿ ಬ್ಯಾಂಕುಗಳಲ್ಲಿ ಅಧಿಕ ಬಡ್ಡಿ ದರದಲ್ಲಿ ನೀಡಿ ಸಾಲ ಪಡೆಯಬೇಕಾಗಿದೆ, ಕೇಂದ್ರ ರಾಜ್ಯದ ಮನವಿಯನ್ನು ಪುರಸ್ಕರಿಸಿ ನಮ್ಮ ರಾಜ್ಯದ ಪಾಲಿನ ಹಣವನ್ನು ಬಿಡುಗಡೆ ಮಾಡಬೇಕು, ರೈತರ ಜಮೀನುಗಳಿಗೆ 12ಕ್ಕೆ ಕಾಲ ತ್ರಿಫೇಸ್ ವಿದ್ಯುತ್ನೀಡಬೇಕು, ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಪ್ರಾಣ ಕಳೆದುಕೊಂಡ ಪ್ರಕರಣಗಳಲ್ಲಿ 15 ದಿನಗಳ ಒಳಗೆ ಸರ್ಕಾರ ಪರಿಹಾರ ಧನ ವಿತರಿಸಬೇಕು ಎಂದು ಹೇಳಿದರು.ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ರಾಜ್ಯದ ವಿವಿಧ ರೈತ ಸಂಘಗಳ ಒಣಗಳು ರೈತ ಮುಖಂಡ ಪಚ್ಚೆ ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಏಕೀಕರಣಗೊಳ್ಳಲು ತೀರ್ಮಾನಿಸಲಾಗಿದ್ದು, ಅದರಂತೆ ರೈತ ಮುಖಂಡರು ತಮ್ಮಲ್ಲಿನ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗಿ ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬೆಳಗಾವಿಗೆ ತೆರಳಿ ಚಳುವಳಿ ನಡೆಸಿದ್ದೇವು, ಜಿಲ್ಲೆಯಲ್ಲಿ ರೈತ ಸಂಘಕ್ಕೆ ಒಂದು ಲಕ್ಷ ಹೊಸ ಸದಸ್ಯರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದ್ದು, ರೈತ ಸಂಘಟನೆಯನ್ನು ಬಲಪಡಿಸಲಾಗುವುದು ಎಂದು ಹೇಳಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್ ರಾವ್, ತಾಲೂಕು ಹಸಿರು ಸೇನೆ ಅಧ್ಯಕ್ಷ ಬಂಗಾರು ಸ್ವಾಮಿ, ಹಿಮ್ಮಾವು ರಘು, ವೇಣುಗೋಪಾಲ್, ಮಹದೇವನಾಯ್ಕ ಇದ್ದರು.