ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.ಹಣ ವಸೂಲಿ ಮಾಡುವ ಕೆಲ ನೌಕರರ ವಿರುದ್ಧ ಸದಸ್ಯರು ಆರೋಪ ಮಾಡಿದರು. ಕೆಲ ವರ್ತಕರಿಂದ 5 ಸಾವಿರ ರು.ಗಳ ನಗದು ಪಡೆದು ರಶೀದಿ ನೀಡಿಲ್ಲ. ಲೆಡ್ಜರ್‌ನಲ್ಲಿ ಬರೆದುಕೊಂಡಿದ್ದೇವೆ ಎಂದು ಹೇಳುತ್ತಾರೆ. ರಶೀದಿ ನೀಡದಿದ್ದರೆ, ಆ ಮೊತ್ತ ಪಂಚಾಯಿತಿಗೆ ಬರುವುದಿಲ್ಲ. ಈ ಬಗ್ಗೆ ಮುಖ್ಯಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಣ ದುರುಪಯೋಗದ ಪ್ರಕರಣಗಳು ಇದ್ದರೆ, ಹಣ ಕೊಟ್ಟವರು ಲಿಖಿತವಾಗಿ ತಮಗೆ ದೂರು ನೀಡಿದರೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ನಾಚಪ್ಪ ಸಮಜಾಯಿಷಿ ನೀಡಿದರು.ರು. 5 ಸಾವಿರದಂತೆ ಹಣ ಕೊಟ್ಟವರ ಹೆಸರನ್ನು ಶುಭಕರ್ ಸಭೆಯಲ್ಲಿ ಹೇಳಿದರು. ಹಣ ಕೊಟ್ಟವರನ್ನು ಸಭೆಗೆ ಕರೆಸಲು ಅನುಮತಿ ನೀಡಿದರೆ, ಕರೆಸುತ್ತೇನೆ ಎಂದು ಹೇಳಿದರು. ಪಂಚಾಯಿತಿ ಕೆಲ ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಸದಸ್ಯರಾದ ಜೀವನ್, ಕಿರಣ್ ಅಸಮಧಾನ ವ್ಯಕ್ತಪಡಿಸಿದರು.
ಪಂಚಾಯಿತಿಯಲ್ಲಿ ಲಂಚ ವ್ಯವಹಾರ ನಡೆಯುತ್ತಿದ್ದರೆ, ಅದನ್ನು ಮುಖ್ಯಾಧಿಕಾರಿಗಳು ಸಿಬ್ಬಂದಿಗಳ ಸಭೆ ಕರೆದು ಸರಿಪಡಿಸಬೇಕು. ಸದಸ್ಯರು ಕೂಡ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಬಾರದು. ಪಂಚಾಯಿತಿಯಲ್ಲಿ ಲಂಚಾವತಾರ ಎಂದು ಪತ್ರಿಕೆಗಳಲ್ಲಿ ಪ್ರಕಟವಾದರೆ ಪಂಚಾಯಿತಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಸದಸ್ಯರಾದ ಮೃತ್ಯುಂಜಯ, ಬಿ.ಸಂಜೀವ ಹೇಳಿದರು.ಪಂಚಾಯಿತಿಯಲ್ಲಿ ಸಾರ್ವಜನಿಕರನ್ನು ಸತಾಯಿಸದೆ, ಅವರ ಕೆಲಸಗಳನ್ನು ಮಾಡಿಕೊಡಲು ಎಲ್ಲಾ ವ್ಯವಸ್ಥೆ ಮಾಡಬೇಕು ಎಂದು ಸರ್ವ ಸದಸ್ಯರು ಮುಖ್ಯಾಧಿಕಾರಿಗೆ ಸೂಚಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿನ ವರ್ತಕರು ವ್ಯಾಪಾರ ಪರವಾನಗಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಆದರೆ ಕೆಲವರು ಲೈಸೆನ್ಸ್ ಪಡೆಯದೆ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆ ನೋಟೀಸು ಜಾರಿಗೊಳಿಸಲಾಗಿದೆ ಎಂದು ಮುಖ್ಯಾಧಿಕಾರಿ ಸಭೆಯ ಗಮನಕ್ಕೆ ತಂದರು.ಟ್ರೇಡ್ ಲೈಸೆನ್ಸ್ ಪಡೆಯದ ಅಂಗಡಿಗಳಿಗೆ ಬೀಗ ಜಡಿಯಬೇಕು ಎಂದು ಸದಸ್ಯ ಬಿ.ಆರ್.ಮಹೇಶ್ ಸಲಹೆ ನೀಡಿದರು. ಕ್ರಮ ಜರುಗಿಸುವುದಾಗಿ ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.
ಮಾರುಕಟ್ಟೆಯಲ್ಲಿ ಕೋಳಿ, ಕುರಿ ಮಾಂಸವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಶನಿವಾರಸಂತೆ, ಕೂಡಿಗೆ, ಕುಶಾಲನಗರ, ಸುಂಠಿಕೊಪ್ಪದಲ್ಲಿ ಕಡಿಮೆ ಬೆಲೆ ಮಾಂಸ ದೊರೆಯುತ್ತಿದೆ. ಬೆಲೆ ಜಾಸ್ತಿ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದೆ. ಕೂಡಲೆ ವ್ಯಾಪಾರಿಗಳನ್ನು ಕರೆಸಿ ಸೂಕ್ತ ಸಲಹೆ ನೀಡಬೇಕು ಎಂದು ಸದಸ್ಯರು ಮುಖ್ಯಾಧಿಕಾರಿಗೆ ತಿಳಿಸಿದರು.ನಿಯಮ ಮೀರಿದ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಕೃಷ್ಣ ಜನ್ಮಾಷ್ಠಮಿ ದಿನ, ಮಾಂಸ ಮಾರಾಟ ಮಾಡಿದ್ದಾರೆ. ಪ್ರಶ್ನಿಸಿದ ಅರೋಗ್ಯಧಿಕಾರಿಗಳೊಂದಿಗೆ ಉಡಾಫೆಯಿಂದ ವರ್ತಿಸಿದ್ದಾರೆ. ಅಂತಹವರ ವಿರುದ್ದ ಮುಖ್ಯಾಧಿಕಾರಿಗಳು ಕ್ರಮಕೈಗಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.