ಸಾರಾಂಶ
ಕನ್ನಡಪ್ರಭ ಸರಣಿ ವರದಿ ಭಾಗ : 149
ಆನಂದ್ ಎಂ. ಸೌದಿಕನ್ನಡಪ್ರಭ ವಾರ್ತೆ ಯಾದಗಿರಿ
ಕೆಮಿಕಲ್ ತ್ಯಾಜ್ಯದ ಹೆಸರಲ್ಲಿ ಕಡೇಚೂರು ಕೈಗಾರಿಕಾ ಪ್ರದೇಶಕ್ಕೆ ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ವೈದ್ಯಕೀಯ ತ್ಯಾಜ್ಯ ಬಂದು ಬೀಳುತ್ತಿದೆಯೇ ? ಹತ್ತಾರು ರಾಜ್ಯಗಳಿಂದ ಕೆಮಿಕಲ್ ಕಂಪನಿಗಳು ಕದ್ದುಮುಚ್ಚಿ ವಿಷಕಾರಿ ತ್ಯಾಜ್ಯವನ್ನು ಕಡೇಚೂರಿಗೆ ಕಳುಹಿಸಿ, ಇಲ್ಲಿನ ಜನ-ಜಲ ಜೀವನಕ್ಕೆ ಕುತ್ತು ತರುತ್ತಿದ್ದಾರೆಯೇ !?ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಫಾರ್ಮಾ -ತ್ಯಾಜ್ಯ ಕಂಪನಿಗಳು ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವುದಾಗಿ ಸರ್ಕಾರಿ ದಾಖಲೆಗಳಲ್ಲಿ ತಿಳಿಸಿ, ಪರಿಸರ ಅನುಮತಿ ಪಡೆದು, ಇದೀಗ ಅಲ್ಲಿನ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಲಕ್ಷಾಂತರ ಜೀವಸಂಕುಲಕ್ಕೆ ಮಾರಕವಾಗುವ ವಿಷಕಾರಿ ತ್ಯಾಜ್ಯವನ್ನು ತಂದು ಎಲ್ಲೆಂದರಲ್ಲಿ ಚೆಲ್ಲುತ್ತಿರುವುದು, ಚರಂಡಿಗಳ ಮೂಲಕ ಹಳ್ಳಕೊಳ್ಳಗಳಿಗೆ ಹರಿಬಿಡುತ್ತಿರುವುದು ಆಘಾತ ಮೂಡಿಸಿದೆ.
ತ್ಯಾಜ್ಯ ಹೊತ್ತ ಟ್ಯಾಂಕರ್‌ಗಳು ಕಳ್ಳಮಾರ್ಗದಲ್ಲಿ ಬಂದು, ಅಲ್ಲಿನ ರೈತರ ಜಮೀನುಗಳಲ್ಲಿ, ಹಳ್ಳಕೊಳ್ಳಗಳಲ್ಲಿ, ರಸ್ತೆಬದಿಗಳಲ್ಲಿ, ಎಲ್ಲೆಂದರಲ್ಲಿ ತ್ಯಾಜ್ಯ ಸುರಿವಿ ಕಾಲ್ಕಿತ್ತುತ್ತಾರೆ. ಗುರುವಾರ ಸಂಜೆ, ಸೂರತ್‌ನಿಂದ ಬಂದಿದೆ ಎನ್ನಲಾದ ಇಂತಹುದ್ದೊಂದು ಕೆಮಿಕಲ್ ತ್ಯಾಜ್ಯ ಹೊತ್ತ ಟ್ಯಾಂಕರ್‌ವೊಂದು (ಹಜಾರಡಸ್ ವೇಸ್ಟ್) ಕೈಗಾರಿಕಾ ಪ್ರದೇಶದ ಸುತ್ತಮುತ್ತ ತಿರುಗಾಡುತ್ತಿರುವುದನ್ನು ಕಂಡು ಸ್ಥಳೀಯರು ತಡೆದಿದ್ದಾರೆ."ಯಾವ ರೀತಿಯ ತ್ಯಾಜ್ಯ ಇಲ್ಲಿಗೆ ತರಲಾಗಿದೆ ಎಂದು ಕೇಳಿದ ನಮಗೆ, ಸೂರತ್‌ನಿಂದ ಬಂದಿರುವುದಾಗಿ ತಿಳಿಸಿದ ಚಾಲಕ, ತೂಕ ಮಾಡಿಸಿ ವಾಪಸ್ ಬರುವುದಾಗಿ ಹೇಳಿ ಹೋದಾತ, ಟ್ಯಾಂಕರ್ ಸಮೇತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ನಾವು ಬೆನ್ನು ಹತ್ತಿ ಹೋದಾಗ, ಕೈಗಾರಿಕಾ ಪ್ರದೇಶದ ವಿವಿಧೆಡೆ ತಿರುಗಾಡಿ ಅದು ನಾಪತ್ತೆಯಾಗಿದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದ ಶೆಟ್ಟಿಹಳ್ಳಿಯ ಕಾಶೀನಾಥ್, ಪರಿಸರ ಅಧಿಕಾರಿಗಳಿಗೆ ಫೋನಾಯಿಸಿದಾಗ ಅವರು ಜಿಲ್ಲಾಧಿಕಾರಿಗಳ ಮೀಟಿಂಗ್‌ನಲ್ಲಿದ್ದೇವೆ. ಹೇಗೆ ಬರಲು ಸಾಧ್ಯ ಎಂದರು.
ಇತ್ತ, ವಿಷಕಾರಿ ತ್ಯಾಜ್ಯ ಚರಂಡಿ ಮೂಲಕ ಹರಿಬಿಡುತ್ತಿದ್ದ ಕಂಪನಿಯೊಂದು, ತ್ಯಾಜ್ಯ ನಿಲ್ಲುತ್ತಿದ್ದ ತೆಗ್ಗು ಪ್ರದೇಶದಲ್ಲಿ ಸಿಮೆಂಟ್ ಹಾಕಿ ಸಮತಟ್ಟು ಮಾಡಿಸಿದ್ದಾರೆ. ತ್ಯಾಜ್ಯ ಹರಿಬಿಟ್ಟರೂ ಮುಂದೆ ಅದು ಸಲೀಸಾಗಿ ಹಳ್ಳ ಸೇರಬಹುದಲ್ಲದೆ, ತಮ್ಮದೇ ಕಂಪನಿಯಿಂದ ಹರಿಬಿಟ್ಟಿದ್ದು ಎಂದು ಯಾರಿಗೂ ತಿಳಿಯುವುದಿಲ್ಲ ಎಂಬ ದೂರಾಲೋಚನೆ ಮಾಡಿದೆಯಂತೆ.------------
ನಾವೆಲ್ಲ ಟ್ಯಾಂಕರ್ ತಡೆದು ಪರಿಶೀಲಿಸಬಹುದು ಎಂಬ ಗಾಬರಿಯಿಂದ ಟ್ಯಾಂಕರ್ ಸಮೇತ ಚಾಲಕ ಪರಾರಿಯಾಗಿರಬಹುದು, ಅಥವಾ ಅಲ್ಲಿನ ವಿಲೇವಾರಿ ಘಟಕದಲ್ಲಿ ಅಡಗಿರಬಹುದು. ರಾತ್ರಿ- ನಸುಕಿನ ಜಾವ ತ್ಯಾಜ್ಯ ಚೆಲ್ಲಿ ಅವು ಪರಾರಿಯಾಗುತ್ತದೆ. ಕತ್ತಲಲ್ಲೇ ಇವರು ಇಂತಹ ಕೃತ್ಯ ನಡೆಸುತ್ತಾರೆ. : ಕಾಶೀನಾಥ್, ಸಾಮಾಜಿಕ ಕಾರ್ಯಕರ್ತ, ಶೆಟ್ಟಿಹಳ್ಳಿ.-------------
ಗುರುವಾರ ಬೆಳಿಗ್ಗೆ ಇಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಿಂದ ಯಥೇಚ್ಛವಾಗಿ ಹರಿಯುತ್ತಿದ್ದ ಕೆಮಿಕಲ್- ವಿಷಪೂರಿತ ದ್ರವ ಇಡೀ ರಸ್ತೆಗುಂಟ ಹರಿದಾಡುತ್ತಿತ್ತು. ಕಿ.ಮೀ.ಗಟ್ಟಲೇ ತ್ಯಾಜ್ಯ ರಸ್ತೆಯಲ್ಲೆಲ್ಲಾ ಬಿದ್ದಿದ್ದರಿಂದ ಸುಮಾರು ಕಿ.ಮೀವರೆಗೆ ತಡೆಯಲಾರದಷ್ಟು ದುರ್ನಾತ ವ್ಯಾಪಿಸಿ, ಸಮೀಪದ ವಸತಿಯಲ್ಲಿನ ಜನರು ಮೂಗು ಮುಚ್ಚಿಕೊಂಡೇ ದಿನ ಕಳೆಯುವಂತಾಗಿತ್ತು. ಅಧಿಕಾರಿಗಳಿಗೆ ದೂರಿದರಾದರೂ, ಯಾರೂ ಬರಲೇ ಇಲ್ಲ. : ವೀರೇಶ್, ಕನ್ನಡಪರ ಸಂಘಟನೆ ಮುಖಂಡ.---------------