ವಿಷಕಾರಕ ಅನಿಲ ಸೇವನೆಯಿಂದ ರೋಗ ನಿರೋಧಕ ಶಕ್ತಿ ಕುಂಠಿತ

| Published : Nov 08 2025, 02:45 AM IST

ವಿಷಕಾರಕ ಅನಿಲ ಸೇವನೆಯಿಂದ ರೋಗ ನಿರೋಧಕ ಶಕ್ತಿ ಕುಂಠಿತ
Share this Article
  • FB
  • TW
  • Linkdin
  • Email

ಸಾರಾಂಶ

ವಾಯುಮಾಲಿನ್ಯ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮಾನವ ಸಂಕುಲ ವಿನಾಶವಾಗಲಿದೆ

ಹೊಸಪೇಟೆ: ವಾಹನಗಳು ಹೊರಸೂಸುವ ಹೊಗೆ ಸೇರಿ ವಿಷಕಾರಕ ಅನಿಲ ಸೇವನೆಯಿಂದ ಅನಾರೋಗ್ಯ ಪ್ರಮಾಣ ಹೆಚ್ಚಳವಾಗಲಿದೆ. ವಾಯುಮಾಲಿನ್ಯ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮಾನವ ಸಂಕುಲ ವಿನಾಶವಾಗಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ ಹೇಳಿದರು.

ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು.

ವಾಯುಮಾಲಿನ್ಯ ನಿಯಂತ್ರಣ ಕುರಿತು ಸಾರಿಗೆ ಇಲಾಖೆಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ. ವಾಹನಗಳ ವಾಯು ಮಾಲಿನ್ಯದಿಂದಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಇದಾಗಿದೆ. ವಿಷಕಾರಕ ಅನಿಲ ಸೇವನೆಯಿಂದಾಗಿ ಅಸ್ತಮಾ ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗಲಿದೆ. ಚಾಲಕರಿಗೆ ಏಕಾಗ್ರತೆ ಭಂಗ, ಮಕ್ಕಳಲ್ಲಿ ಮಾನಸಿಕ ದುರ್ಬಲತೆ ಬುದ್ಧಿಮಾಂದ್ಯತೆ, ಮೆದುಳಿನ ಕಾರ್ಯಾಚರಣೆ ಕುಂಠಿತ, ದೃಷ್ಟಿ ಮಂದಾಗುವಿಕೆ, ಗರ್ಭಿಣಿಯರಿಗೆ ಗರ್ಭಸ್ರಾವ ಹಾಗೂ ಹುಟ್ಟುವ ಮಕ್ಕಳ ಆರೋಗಕ್ಕೆ ಹಾನಿ. ಸಸ್ಯಗಳ ಬೆಳವಣಿಗೆಯಲ್ಲಿ ಕುಂಠಿತ. ದಟ್ಟವಾದ ಹೊಗೆಯಿಂದ ಚಳಿಗಾಲದಲ್ಲಿ ಅಗೋಚರತೆ ಹೆಚ್ಚಾಗಲಿದೆ. ಇದರಿಂದಾಗಿ ವಾಹನಗಳ ಅಪಘಾತ ಪ್ರಕರಣಗಳು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ವಾಹನಗಳನ್ನು ಸುಸ್ಥಿತಿಯಲ್ಲಿ ಇರಿಸದೇ ಇದ್ದಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ₹1500, ನಾಲ್ಕು ಚಕ್ರದ ವಾಹನಗಳಿಗೆ ₹3000 ಮತ್ತು ಭಾರಿ ವಾಹನಗಳಿಗೆ ₹3000ಗಳಷ್ಟು ದಂಡ ವಿಧಿಸಲಾಗುವುದು ಎಂದರು.

ಪರಿಸರವಾದಿ ಪ್ರಭಾಕರ್ ಮಾತನಾಡಿ, ಪರಿಸರದ ಮಹತ್ವವನ್ನು ಇಂದಿನ ಯುವಪೀಳಿಗೆ ಹಾಗೂ ಮಕ್ಕಳು ಅರಿತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಗಿಡ ಮರಗಳನ್ನು ನಾಶ ಮಾಡಿ ಅರಣ್ಯಗಳನ್ನು ಕಳೆದುಕೊಂಡಿದ್ದೇವೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಹೆಚ್ಚಿನ ಆಕ್ಸಿಜನ್ ಅವಶ್ಯಕತೆಯಿದೆ. ಭವಿಷ್ಯದಲ್ಲಿ ಅರಣ್ಯ ನಾಶದ ಪ್ರತಿಫಲವಾಗಿ ಆಕ್ಸಿಜನ್ ಬ್ಯಾಗ್ ಬಳಕೆ ಮಾಡುವ ಪರಿಸ್ಥಿತಿ ಬಂದೊದಗಲಿದೆ. ನಮ್ಮ ಭಾಗದಲ್ಲಿ ಗಣಿಗಾರಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಉದ್ಯಮಿದಾರರು ಕುಡಿಯುವ ನೀರಿನ ಮಾಲಿನ್ಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಪ್ರತಿಯೊಬ್ಬರೂ ಮನೆಯ ಸುತ್ತಮುತ್ತಲಿನ ವಾತಾವರಣ ಶುದ್ಧವಾಗಿರಿಸಬೇಕು. ಪ್ರತಿ ವ್ಯಕ್ತಿ 5 ಮರದ ಸಸಿಗಳನ್ನು ನೆಡುವ ಜತೆಗೆ ಸಂರಕ್ಷಣೆ ಮಾಡಬೇಕು. ಅರಣ್ಯೀಕರಣಕ್ಕೆ ಆದ್ಯತೆ ನೀಡುವಷ್ಟೇ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ನಮ್ಮ ಆದ್ಯ ಕರ್ತವ್ಯವಾಗಲಿ ಎಂದರು.

ಪೊಲೀಸ್ ವೃತ್ತ ನಿರೀಕ್ಷಕ ಡಿ. ಹುಲುಗಪ್ಪ ಮಾತನಾಡಿ, ಕಲಬೆರಕೆ ಪೆಟ್ರೋಲ್ ಮತ್ತು ಡೀಸೆಲ್‌ ಅನ್ನು ಬಳಕೆ ಹಾಗೂ ವಾಹನ ಮಾಲೀಕರು ಕಡಿಮೆ ಬೆಲೆಯ ಕಳಪೆ ಎಂಜಿನ್ ಆಯಿಲ್‌ಗಳನ್ನು ಬಳಸುವುದು, ಸೈಲೆನ್ಸರ್‌ಗಳನ್ನು ಟ್ಯಾಂಪರ್ ಮಾಡುವುದು. ಏರ್‌ಫಿಲ್ಟರ್ ಮತ್ತು ಸ್ಪಾರ್ಕ್ ಪ್ಲಗ್‌ಗಳನ್ನು ಬದಲಾಯಿಸದೇ ಇರುವುದು. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕೆಂಪು ದೀಪ ಇದ್ದಾಗ ವಾಹನಗಳ ಎಂಜಿನ್‌ ಬಂದ್ ಮಾಡದಿರುವುದು. ನಿಗದಿಗಿಂತ ಅಧಿಕ ಭಾರದ ಸಾಗಣೆ, ಎಂಜಿನ್ ಅಯಿಲ್‌ನ್ನು ನಿಗದಿತ ಅವಧಿಯಲ್ಲಿ ಬದಲಾಯಿಸದೇ ಇರುವುದರಿಂದ ಹೆಚ್ಚು ವಾಯುಮಾಲಿನ್ಯ ಸೃಷ್ಟಿಯಾಗಲಿದೆ. ವಾಹನಗಳ ಮಾಲೀಕರು ವಾಹನಗಳ ನಿರ್ವಹಣೆಗೆ ಕಾಳಜಿ ವಹಿಸಿದರೆ ಪರಿಸರದಲ್ಲಿನ ಮಾಲಿನ್ಯ ನಿಯಂತ್ರಿಸಲು ಸಾಧ್ಯ ಎಂದರು.

ಈ ವೇಳೆ ಮೋಟಾರ್ ಹಿರಿಯ ನಿರೀಕ್ಷಕ ಮಂಜುನಾಥ ಪ್ರಸಾದ್‌, ಮೋಟಾರು ನಿರೀಕ್ಷಕ ಮೊಹಮ್ಮದ್ ಶರೀಫ್ ಶೇಖ್‌ಜಿ ಮತ್ತಿತರರಿದ್ದರು.