ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಲೇಕ್‌ ಗಾರ್ಡನ್‌ನಲ್ಲಿ ಈ ಹಿಂದೆ ಸಾಂಪ್ರದಾಯಿಕ ಗಾಳ ಹಾಕುವ ಸ್ಪರ್ಧೆಯ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲಾಗಿತ್ತು. ಈ ಕಾರ್ಯಕ್ರಮವನ್ನು ಮತ್ತೆ ಶೀಘ್ರದಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಆಯುಕ್ತ ಡಾ.ಅರುಣ್‌ ಕುಮಾರ್‌ ಶೆಟ್ಟಿ ತಿಳಿಸಿದರು.

ಮಂಗಳೂರು : ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಲೇಕ್‌ ಗಾರ್ಡನ್‌ನಲ್ಲಿ ಈ ಹಿಂದೆ ಸಾಂಪ್ರದಾಯಿಕ ಗಾಳ ಹಾಕುವ ಸ್ಪರ್ಧೆಯ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲಾಗಿತ್ತು. ಈ ಕಾರ್ಯಕ್ರಮವನ್ನು ಮತ್ತೆ ಶೀಘ್ರದಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಆಯುಕ್ತ ಡಾ.ಅರುಣ್‌ ಕುಮಾರ್‌ ಶೆಟ್ಟಿ ತಿಳಿಸಿದರು.ಪಿಲಿಕುಳದ ಲೇಕ್‌ ಗಾರ್ಡನ್‌‌ನಲ್ಲಿ ಭಾನುವಾರ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು, ಪ್ರವಾಸೋದ್ಯಮ ಇಲಾಖೆ, ಮೀನುಗಾರಿಕಾ ಇಲಾಖೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಮಂಗಳೂರು ಆಶ್ರಯದಲ್ಲಿ ನಡೆದ ಪಿಲಿಕುಳ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ 2026 ಕಾರ್ಯಕ್ರಮದ ವೇಳೆ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.ಕರಾವಳಿಯ ಸಂಸ್ಕೃತಿ ಮತ್ತು ಮೀನುಗಾರಿಕಾ ಪರಂಪರೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದೊಂದಿಗೆ ಈ ಮೇಳವನ್ನು ಪ್ರತಿ ವರ್ಷ ನಡೆಸಲಾಗುತ್ತಿದೆ. ಪಿಲಿಕುಳಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಬೇಕೆಂಬ ನಿಟ್ಟಿನಲ್ಲಿ ಮತ್ಸ್ಯ ಮೇಳ ಆಯೋಜಿಸಲಾಗುತ್ತಿದೆ ಎಂದರು.ಕಳೆದ ವರ್ಷ ಕೆರೆಗೆ ಬಿಟ್ಟಿದ್ದ ಮೀನುಗಳನ್ನು ಈ ವರ್ಷ ಹಿಡಿಯಲು ನುರಿತ ಮೀನುಗಾರರನ್ನು ಶಿವಮೊಗ್ಗದಿಂದ ಕರೆಸಲಾಗಿದ್ದು, ಬೆಳಗ್ಗೆ 10 ಗಂಟೆಯ ಸುಮಾರಿಗೆ 1,000 ಕೆಜಿ ರೋಹು, ಕಾಟ್ಲಾ, ತೆಲಪಿಯ ಮೊದಲಾದ ಜಾತಿಯ ಸಿಹಿ ನೀರಿನ ಮೀನುಗಳನ್ನು ಬಲೆ ಬೀಸಿ ಹಿಡಿಯಲಾಗಿದೆ. ಈ ಬಾರಿ 1,500 ಕೆಜಿ ಮೀನು ಹಿಡಿಯುವ ಗುರಿ ಇರಿಸಲಾಗಿದೆ. ಏಳೆಂಟು ಕೆಜಿ ತೂಗುವ ಮೀನುಗಳಿದ್ದು, ಜೀವಂತ ಮೀನುಗಳನ್ನು ಕೆಜಿಗೆ ತಲಾ 160 ರು. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕಳೆದ ವರ್ಷ 1,200 ಕೆಜಿ ಮೀನು ದೊರೆತಿದ್ದು, 900 ಕೆಜಿ ಮಾರಾಟವಾಗಿದೆ ಎಂದರು.

ಬೆಳಗ್ಗೆ ಮೀನು ಮರಿಗಳನ್ನು ಪಿಲಿಕುಳದ ಕೊಳಕ್ಕೆ ಬಿಟ್ಟು ಬಲೆ ಬೀಸಿ ಹಿಡಿದ ಮೀನುಗಳನ್ನು ಬುಟ್ಟಿಗೆ ತುಂಬುವ ಮೂಲಕ ಶಾಸಕ ಉಮಾನಾಥ ಕೋಟ್ಟಾನ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಳೆದ ವರ್ಷ 20,000 ಮೀನು ಮರಿಗಳನ್ನು ಬಿಟ್ಟಿದ್ದು, ಅವುಗಳು ಬೆಳೆದು ದೊಡ್ಡದಾಗಿದ್ದು, ಅವುಗಳನ್ನು ತಾಜಾವಾಗಿ ಗ್ರಾಹಕರಿಗೆ ನೀಡಲಾಗುತ್ತಿದೆ. ಗ್ರಾಹಕರಿಗೆ ತಲಾ 5 ಕೆಜಿ ಮೀನು ಮಾರಾಟದ ಮೂಲಕ ಎಲ್ಲರಿಗೂ ಮೀನು ಲಭ್ಯವಾಗುವ ವ್ಯವಸ್ಥೆ ಮಾಡಲಾಗಿದೆ ಎಂದರು.ಮೀನು ಆಹಾರ ಮೇಳ:ಮೇಳದಲ್ಲಿ ಪ್ರವಾಸಿಗರಿಗಾಗಿ ಸ್ಥಳದಲ್ಲೇ ಮೀನಿನ ಖಾದ್ಯಗಳನ್ನು ತಯಾರಿಸಿ ನೀಡುವ ವಿಶೇಷ ‘ಮೀನು ಆಹಾರ ಮೇಳ’ ಹಾಗೂ ಕೆಎಫ್‌‌ಡಿಸಿ ವತಿಯಿಂದ ಮೊಬೈಲ್‌ ಕ್ಯಾಂಟೀನ್‌ ಸೇವೆ ವ್ಯವಸ್ಥೆಗೊಳಿಸಲಾಗಿತ್ತು.ಪಿಲಿಕುಳ ಅಭಿವೃದ್ಧಿ ಉಪ ಸಮಿತಿಯ ಅಧ್ಯಕ್ಷ ಡಾ.ಶ್ರೀನಿಕೇತನ್‌, ಕೆಎಫ್‌ಡಿಸಿಯ ಪ್ರಧಾನ ವ್ಯವಸ್ಥಾಪಕ ಮಹೇಶ್‌ ಕುಮಾರ್‌, ಪಿಲಿಕುಲದ ಹಿರಿಯ ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ, ಗುತ್ತುಮನೆ ಮತ್ತು ಸಂಸ್ಕೃತಿ ಗ್ರಾಮದ ಸೆಕ್ಷನ್‌ ಹೆಡ್‌ ನಿತಿನ್‌ ಮತ್ತಿತರರು ಇದ್ದರು.