ಜಿಲ್ಲಾ ಮಟ್ಟದ 5ನೇ ಜಾನಪದ ಸಮ್ಮೇಳನಾಧ್ಯಕ್ಷರಿಗೆ ಸಾಂಪ್ರದಾಯಿಕ ಆಹ್ವಾನ

| Published : Jul 30 2024, 12:30 AM IST

ಜಿಲ್ಲಾ ಮಟ್ಟದ 5ನೇ ಜಾನಪದ ಸಮ್ಮೇಳನಾಧ್ಯಕ್ಷರಿಗೆ ಸಾಂಪ್ರದಾಯಿಕ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜಂಪುರ, ಜಾನಪದ ಕೋಗಿಲೆ ಕೆ ಆರ್ ನಿಂಗಪ್ಪನವರ ಹುಟ್ಟೂರು ಕಲ್ಲೇನಹಳ್ಳಿಯಲ್ಲಿ ಅಕ್ಟೋಬರ್ 6 ರಂದು ನಡೆಯುವ ಚಿಕ್ಕಮಗಳೂರು ಜಿಲ್ಲಾ ಮಟ್ಟದ 5ನೇ ಜಾನಪದ ಸಮ್ಮೇಳನಾಧ್ಯಕ್ಷ, ಜಾನಪದ ಕಲಾವಿದ ಕರಿಬಸಪ್ಪನವರಿಗೆ ಶಿವನಿಯ ನಿವಾಸದಲ್ಲಿ ಸಾಂಪ್ರದಾಯಿಕವಾಗಿ ಆಹ್ವಾನ ನೀಡಲಾಯಿತು.

ಕನ್ನಡಪ್ರಭ ವಾರ್ತೆ, ಅಜ್ಜಂಪುರ

ಜಾನಪದ ಕೋಗಿಲೆ ಕೆ ಆರ್ ನಿಂಗಪ್ಪನವರ ಹುಟ್ಟೂರು ಕಲ್ಲೇನಹಳ್ಳಿಯಲ್ಲಿ ಅಕ್ಟೋಬರ್ 6 ರಂದು ನಡೆಯುವ ಚಿಕ್ಕಮಗಳೂರು ಜಿಲ್ಲಾ ಮಟ್ಟದ 5ನೇ ಜಾನಪದ ಸಮ್ಮೇಳನಾಧ್ಯಕ್ಷ, ಜಾನಪದ ಕಲಾವಿದ ಕರಿಬಸಪ್ಪನವರಿಗೆ ಶಿವನಿಯ ನಿವಾಸದಲ್ಲಿ ಸಾಂಪ್ರದಾಯಿಕವಾಗಿ ಆಹ್ವಾನ ನೀಡಲಾಯಿತು.

ಕರ್ನಾಟಕ ಜಾನಪದ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾ ಘಟಕ, ಅಜ್ಜಂಪುರ ತಾಲೂಕು, ಶಿವನಿ ಹೋಬಳಿ ಕಲ್ಲೇನಹಳ್ಳಿ ಘಟಕಗಳ ಸಹಯೋಗದಲ್ಲಿ ನೀಡಿದ ಆಹ್ವಾನ ಸ್ವೀಕರಿಸಿ ಮಾತನಾಡಿದ ಕರಿಬಸಪ್ಪ, ಸುಮಾರು 35 ವರ್ಷಗಳಿಂದ ಜಾನಪದ ಕಲಾವಿದನಾಗಿ, ಪ್ರೌಢಶಾಲಾ ಮುಖ್ಯ ಶಿಕ್ಷಕನಾಗಿ, ವಿದ್ಯಾರ್ಥಿಗಳಿಗೆ ಜನಪದ ಕಲಾವಿದರಿಗೆ, ಜನಪದ ಕಲೆ ಸಾಹಿತ್ಯ ಸಂಸ್ಕೃತಿ ಸಂಗೀತ, ಸೇವೆಗೆ ಕೊಟ್ಟ ಪ್ರೋತ್ಸಾಹ ಇಂದು ಜಿಲ್ಲಾ ಮಟ್ಟದ ಸಮ್ಮೇಳನದ ಅಧ್ಯಕ್ಷನಾಗುವ ಸುವರ್ಣ ಅವಕಾಶ ಒದಗಿಸಿದೆ ಎಂದರು.

ಇರುವವರೆಗೂ ಜನಪದ ಕಲೆ ಸಾಹಿತ್ಯ ಸಂಗೀತಕ್ಕೆ ಸೇವೆ ಸಲ್ಲಿಸಿರುವ ತಮಗೆ ಈಗ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಭಾರತೀಯರ ಎಲ್ಲಾ ವಿಧದ ಕಲೆ ಮತ್ತು ಸಾಹಿತ್ಯಗಳಿಗೆ ಗ್ರಾಮೀಣ ಜಾನಪದ ಕಲೆ ಮತ್ತು ಸಾಹಿತ್ಯ ಮೂಲ ಬೇರು ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುವ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಅವುಗಳನ್ನು ಆಯೋಜಕರು ಮರೆತಂತಿದೆ. ಭಾರತೀಯ ಕಲೆಗಳು ಮುಂದಿನ ಪೀಳಿಗೆಗೆ ಜೀವಂತವಾಗಿರಲು ಎಲ್ಲಾ ಸಾಂಸ್ಕೃತಿಕ ವೇದಿಕೆಗಳಲ್ಲಿ ಅವುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗಿದೆ. ಇಲ್ಲದಿದ್ದರೆ ತಳಹದಿ ಇಲ್ಲದೆ ಮನೆ ಕಟ್ಟಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಜನಪದ ಕಲಾವಿದರು ಮೂಲ ಕೃಷಿಕರೇ ಆಗಿದ್ದು ಜೀವನಾಡಿ ಕೃಷಿಯೊಂದಿಗೆ ಜಾನಪದ ಕಲೆಗಳನ್ನು ಉಳಿಸಬೇಕಾಗಿದೆ. ಈ ಕಲೆಯನ್ನೆ ನಂಬಿ ಬದುಕುವ ಕಲಾವಿದರಿದ್ದಾರೆ. ಹಾಗಾಗಿ ಈಗ ಕೊಡುತ್ತಿರುವ ಮಾಶಾಸನ ಏನಕ್ಕೂ ಸಾಕಾಗುತ್ತಿಲ್ಲ. ಜನಪದ ಕಲಾವಿದರನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಈ ಜಾನಪದ ಕಲೆ, ಸಾಹಿತ್ಯ ಕಣ್ಮರೆಯಾಗುತ್ತವೆ. ಸರ್ಕಾರ ಈ ಕಲೆ ಮತ್ತು ಕಲಾವಿದರನ್ನು ಆರ್ಥಿಕ ಸಹಕಾರ ನೀಡಿ ಹೆಚ್ಚು ಪ್ರೋತ್ಸಾಹಿಸಬೇಕಾಗಿದೆ ಎಂದು ಕೋರಿದರು.

ಕಸಾಪದ ಅಜ್ಜಂಪುರ ತಾಲೂಕು ಅಧ್ಯಕ್ಷ ಎಚ್ .ಆರ್ ಚಂದ್ರಪ್ಪ ಮಾತನಾಡಿ, ಜನಪದ ಸಂಸ್ಕೃತಿಯಲ್ಲಿ ಪ್ರಾಮಾಣಿಕತೆ ವಾಸ್ತವಿಕತೆ, ನೈಜ ಬದುಕಿನ ಚಿತ್ರಣವಿದೆ. ಕೆ.ಆರ್. ಲಿಂಗಪ್ಪ ಅವರು ಹುಟ್ಟಿದ ಸ್ಥಳದಲ್ಲಿ ಈ ಸಮ್ಮೇಳನ ನಡೆಸುತ್ತಿರುವುದು ಜಾನಪದ ಪರಿಷತ್ತಿನ ಸಾರ್ಥಕ ಕೆಲಸವಾಗಿದೆ ಎಂದರು.

ಸಾಹಿತಿ ದಂದೂರು ರಾಜಣ್ಣ ಮಾತನಾಡಿ, ಜಾನಪದ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿಯ ಬಗ್ಗೆ ಕುಟುಂಬದ ಹಿರಿಯರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ತಿಳಿ ಹೇಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ತಿಪ್ಪೇಶ್, ಡಾ.ಮಾಳೇನಹಳ್ಳಿ ಬಸಪ್ಪ, ಗೌರವಾಧ್ಯಕ್ಷ ಮರಳು ಸಿದ್ದಪ್ಪ, ಗ್ರಾಪಂ ಅಧ್ಯಕ್ಷ ತಿಪ್ಪೇಶ್, ಸದಸ್ಯರಾದ ಪುಷ್ಪಾ, ಶಂಕ್ರಪ್ಪ, ಸಮ್ಮೇಳನ ಸಮಿತಿ ಮುಖಂಡರಾದ ಅಣ್ಣಯ್ಯ, ಬಸವರಾಜಪ್ಪ. ಕಾರೆಹಳ್ಳಿ ಬಸಪ್ಪ, ಚಿಕ್ಕನಲ್ಲೂರು ಜಯಣ್ಣ, ಗೊಂಡೇದಹಳ್ಳಿ ತಿಪ್ಪೇಶ್, ಗಂಗಣ್ಣ, ಗಂಗಾಧರಪ್ಪ, ಸಿದ್ದರಾಮಪ್ಪ, ನಾರಾಯಣಪುರ ರಾಜಣ್ಣ, ಚಿಕ್ಕಾನಂಗಲ ಶಂಕ್ರಪ್ಪ, ರೇವಣಸಿದ್ದಪ್ಪ, ಜನಪದ ಕಲಾತಂಡಗಳ ಸದಸ್ಯರು ಗ್ರಾಮಸ್ಥರು, ಮುಂತಾದವರಿದ್ದರು.

29ಕೆಕೆಡಿಯು3.

ಜಿಲ್ಲಾ ಮಟ್ಟದ ಐದನೇ ಜಾನಪದ ಸಮ್ಮೇಳನ ಅಧ್ಯಕ್ಷ, ಜಾನಪದ ಕಲಾವಿದ ಕರಿಬಸಪ್ಪನವರಿಗೆ ಶಿವನಿಯ ನಿವಾಸದಲ್ಲಿ ಸಾಂಪ್ರದಾಯಿಕ ಆಹ್ವಾನ ನೀಡಲಾಯಿತು.