ರಸ್ತೆ ದುಸ್ಥಿತಿ ಕಂಡೂ ಕಾಣದಂತಿರುವ ಸಂಚಾರ ಪೊಲೀಸ್‌

| Published : Aug 18 2024, 01:46 AM IST

ರಸ್ತೆ ದುಸ್ಥಿತಿ ಕಂಡೂ ಕಾಣದಂತಿರುವ ಸಂಚಾರ ಪೊಲೀಸ್‌
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ದುಸ್ಥಿತಿಗೆ ಜನರ ಆರೋಗ್ಯ ಹಾಳು, ಕುತ್ತಿಗೆ, ಬೆನ್ನು ನೋವಿಗೆ ಕಾರಣ ವಾಹನ ಸವಾರರಿಗೆ ಸಂಚಾರ ಪೊಲೀಸ್‌ ದಂಡ ಹಾಕಿದ್ರೆ ಮಾತ್ರ ಸಾಲದು

ಕನ್ನಡಪ್ರಭ ವಾರ್ತೆ ಬೀದರ್‌

ರಸ್ತೆ ದುರಾವಸ್ಥೆ, ಗುಂಡಿಗಳು ಹೊಂಡಗಳಂತಾಗಿರುವುದು, ಅರಬರೆ ಕಾಮಗಾರಿಗಳಿಂದಾಗಿ ಏಳುತ್ತಿರುವ ರಸ್ತೆಯ ಮೇಲಿನ ಧೂಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವದು ಆತಂಕದ ವಿಷಯ. ರಸ್ತೆ ದುರಸ್ತಿಗೆ ಮುಂದಾಗದ ಲೋಕೋಪಯೋಗಿ ಇಲಾಖೆ, ನಗರಸಭೆ ಒಂದೆಡೆಯಾದರೆ ಸಂಚಾರ ವ್ಯವಸ್ಥೆ ಹಳ್ಳ ಹಿಡಿದಿರುವ ಬಗ್ಗೆ ಪೊಲೀಸ್‌ ಇಲಾಖೆ ಸಂಬಂಧಿತರನ್ನು ಎಚ್ಚರಿಸುವ ಕೆಲಸ ಮಾಡಬೇಕಿತ್ತು ಅದೂ ಇಲ್ಲಿ ಆಗದಿರುವದು ಕಳವಳಕಾರಿ.

ಬೀದರ್‌ ನಗರದ ಬಹುತೇಕ ಕಡೆ ರಸ್ತೆಗಳ ದುಸ್ಥಿತಿ ವಾಹನ ಸವಾರರ ಜೀವ ಹಿಂಡುತ್ತಿರುವದು ಸ್ಪಷ್ಟವಾಗಿದೆ. ರಸ್ತೆ ಗುಂಡಿಗಳಿಂದಾಗಿ ಬೈಕ್‌ ಸವಾರರು ಕುತ್ತಿಗೆಯ ವ್ಹಿಪ್‌ ಲ್ಯಾಶ್‌ ನೋವಿಗೆ ನೂಕಲ್ಪಡುತ್ತಿದ್ದಾರೆ. ಕೆಳಬೀಳುವ ಬೈಕ್‌ ಸವಾರರು ತಲೆಗೆ ಪೆಟ್ಟು ಮಾಡಿಕೊಂಡು ಕೋಮಾಗೆ ಹೋಗುವ ಅಥವಾ ಸಾವನ್ನಪ್ಪುವದನ್ನು ನಾವು ನಿತ್ಯವೂ ನೋಡುತ್ತಿದ್ದೇವೆ ಎಂದು ಜಿಲ್ಲೆಯ ಖ್ಯಾತ ವೈದ್ಯರು ತಮ್ಮ ಆತಂಕವನ್ನು ಕನ್ನಡಪ್ರಭದ ಮುಂದಿಡುತ್ತಿದ್ದಾರೆ.

ಇದೇನಿದ್ದರೂ ಕಳೆದ ಒಂದೂವರೆ ವರ್ಷದ ಹಿಂದಷ್ಟೇ ಕೈಗೆತ್ತಿಕೊಳ್ಳಲಾಗಿದ್ದ ರಸ್ತೆ ದುರಸ್ತಿ ಕಾಮಗಾರಿಗಳು ಎಲ್ಲವೂ ಅಪೂರ್ಣ ಎಂಬುವದೀಗ ಬಟಾಬಯಲಾಗಿದೆ. ಕೇಳೋರು ದಿಕ್ಕಿಲ್ಲದಂತಾಗಿದೆ. ರಸ್ತೆಗಳು ಅಧೋಗತಿಗೆ ಹೋಗಿದ್ದು ರಸ್ತೆಗಿಳಿಯುವ ವಾಹನ ಸವಾರರು ಒಂದಿಲ್ಲೊಂದು ಬಾರಿ ಬಿದ್ದು ಕೈಕಾಲು ಮುರಿದುಕೊಂಡಿರುವ, ಕುತ್ತಿಗೆ, ಬೆನ್ನು ನೋವಿನ ಸಮಸ್ಯೆಗೆ ಸಿಲುಕುವಂತಾಗಿರುವ ಹಾಗೂ ಧೂಳಿನಿಂದ ಶ್ವಾಸಕೋಶ ಸಮಸ್ಯೆಗಳು ಎದುರಿಸುವದು ಸೇರಿ ಹಲವಾರು ಉದಾಹರಣೆಗಳಿವೆ.

ಇಲ್ಲಿನ ಈ ರಸ್ತೆ ಸಂಚಾರ ದುರಾವಸ್ಥೆಯ ಸಮಸ್ಯೆಯನ್ನು ನಗರಾಡಳಿತ, ಜಿಲ್ಲಾಡಳಿತಕ್ಕೆ ಗಮನ ತಂದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಜವಾಬ್ದಾರಿಯ ಪಾಲನ್ನು ಹೊತ್ತಿರುವ ಪೊಲೀಸ್‌ ಇಲಾಖೆ ಮೌನಿಯಾದಂತಿದೆ. ಸಂಚಾರ ಠಾಣೆಯ ಪೊಲೀಸರು ಈ ನಿಟ್ಟಿನಲ್ಲಿ ಈಗಲಾದರೂ ಜವಾಬ್ದಾರಿಯನ್ನು ಅರಿತು ಸಾರ್ವಜನಿಕರ ರಸ್ತೆ ಸಂಚಾರ ಸುಗಮಗೊಳಿಸುವಲ್ಲಿ ನಗರಸಭೆ, ಲೋಕೋಪಯೋಗಿ ಇಲಾಖೆಯನ್ನು ಬಡಿದೆಬ್ಬಿಸಲಿ.

ಕೇವಲ ಹೆಲ್ಮೆಟ್‌, ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡ ವಿಧಿಸುವದಕ್ಕೆ ಮಾತ್ರ ಸಂಚಾರ ಪೊಲೀಸ್‌ ಸೀಮಿತವಾಗದೇ ತಮ್ಮ ಮೇಲಾಧಿಕಾರಿಗಳ ಗಮನ ಸೆಳೆದು ರಸ್ತೆ ದುರಾವಸ್ಥೆಯ ಬಗ್ಗೆ ಗಂಭೀರತೆ ಪ್ರದರ್ಶಿಸಲಿ.

ಥೂಕ್‌ ಪಾಲೀಶ್‌ ಎಂಬಂತೆ ಮಾಡುವ ರಸ್ತೆ ರಿಪೇರಿಗೆ ಬ್ರೇಕ್‌ ಹಾಕಲಿ ಎಂಬುವದು ಸಾರ್ವಜನಿಕರ ಅಭಿಪ್ರಾಯ. ಸಧ್ಯಕ್ಕೆ ಕನ್ನಡಪ್ರಭ ದಿನಪತ್ರಿಕೆಯ ಸರಣಿ ವಿಶೇಷ ವರದಿಗಳಿಗೆ ಲೋಕೋಪಯೋಗಿ ಇಲಾಖೆ ತಕ್ಷಣ ಸ್ಪಂದಿಸುವ ಭರವಸೆ ನೀಡಿದೆಯಾದರೂ ಕಾಮಗಾರಿಯ ವೇಗ, ಗುಣಮಟ್ಟ ಅವರ ಕಾರ್ಯವೈಖರಿಯನ್ನು ಮುಂದಿನಗಳಲ್ಲಿ ತೋರಿಸಬಹುದಾಗಿದೆ.