ಬೆಂಗಳೂರು-ವಿಜಯಪುರ ನಡುವೆ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗದಲ್ಲಿ ರೈಲು ಸೇವೆ ನೀಡಲು ರೈಲ್ವೆ ಮಂಡಳಿ ಹೊಸ ರೈಲುಗಳನ್ನು ಮಂಜೂರು ಮಾಡಬೇಕಿದೆ. ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ವಿ. ಸೋಮಣ್ಣ ಅವರಿಗೆ ಪತ್ರ ಬರೆಯಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಬೆಂಗಳೂರು : ಬೆಂಗಳೂರು-ವಿಜಯಪುರ ನಡುವೆ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗದಲ್ಲಿ ರೈಲು ಸೇವೆ ನೀಡಲು ರೈಲ್ವೆ ಮಂಡಳಿ ಹೊಸ ರೈಲುಗಳನ್ನು ಮಂಜೂರು ಮಾಡಬೇಕಿದೆ. ಅದಕ್ಕಾಗಿ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ವಿ. ಸೋಮಣ್ಣ ಅವರಿಗೆ ಪತ್ರ ಬರೆಯಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಖನಿಜ ಭವನದಲ್ಲಿ ಬುಧವಾರ ರಾಜ್ಯದ ವಿವಿಧ ವೆಚ್ಚ ಹಂಚಿಕೆಯ ರೈಲು ಯೋಜನೆಗಳ ಕುರಿತು ನೈಋತ್ಯ ರೈಲ್ವೆಯ ಉನ್ನತಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಮಾತನಾಡಿದ ಎಂ.ಬಿ. ಪಾಟೀಲ್, ಬೆಂಗಳೂರು-ವಿಜಯಪುರ ನಡುವೆ ರೈಲು ಪ್ರಯಾಣಕ್ಕೆ ಸದ್ಯ 15 ಗಂಟೆ ಬೇಕಾಗಲಿದೆ. ಅದನ್ನು 10 ಗಂಟೆಗೆ ಇಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದರ ಭಾಗವಾಗಿ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗದಲ್ಲಿ ರೈಲು ಸೇವೆ ನೀಡಲು ಅಭ್ಯಂತರವಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿವರೆಗೆ ನಿಯಮಿತ ನಿಲುಗಡೆ ನೀಡಿ, ಅಲ್ಲಿಂದ ವಿಜಯಪುರಕ್ಕೆ ಸ್ಥಳೀಯ ಜನರಿಗೆ ಅನುಕೂಲವಾಗುವಂತೆ ರೈಲು ಸೇವೆ ಆರಂಭಿಸಿದರೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದೂ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಪ್ರಸ್ತುತ ಬೆಂಗಳೂರು-ವಿಜಯಪುರ ರೈಲು ಹುಬ್ಬಳ್ಳಿ ಮತ್ತು ಗದಗ ರೈಲು ನಿಲ್ದಾಣಗಳಲ್ಲಿ ಎಂಜಿನ್ ಬದಲಿಸಿ ಚಲಿಸಬೇಕಾಗಿದೆ. ಅದರಿಂದ ಪ್ರಯಾಣದ ಅವಧಿ ಹೆಚ್ಚಾಗುತ್ತಿದೆ. ಹೀಗಾಗಿ ಈ ಎರಡೂ ಬೈಪಾಸ್‌ಗಳ ಮೂಲಕ ರೈಲು ಓಡಿಸುವಂತಾದರೆ ಪ್ರಯಾಣದ ಅವಧಿ ಕಡಿಮೆಯಾಗಲಿದೆ ಎಂದು ಹೇಳಿದರು.
ವಂಡಾಲ ಮತ್ತು ಆಲಮಟ್ಟಿ ನಡುವೆ ಜೋಡಿ ಹಳಿ ಕಾಮಗಾರಿ ಬಾಕಿ ಉಳಿದಿದ್ದು, 2026ರ ಫೆಬ್ರವರಿಯಲ್ಲಿ ಕಾಮಗಾರಿ ಪೂರ್ಣವಾಗಲಿದೆ. ಈ ಭಾಗದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಅರ್ಧ ಕಿ.ಮೀ. ಉದ್ದದ ಬೃಹತ್ ಉಕ್ಕು ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಾರ್ಚ್ ವೇಳೆಗೆ ವಿದ್ಯುದ್ದೀಕರಣದ ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಆ ಬಳಿಕ ಹಾಲಿ ಸೇವೆ ನೀಡುತ್ತಿರುವ ರೈಲುಗಳ ವೇಗ ಹೆಚ್ಚಲಿದೆ. ಜತೆಗೆ ಹೊಸ ರೈಲುಗಳಿಗೂ ಬೇಡಿಕೆ ಸಲ್ಲಿಸಲಾಗುತ್ತದೆ. ಅದಕ್ಕಾಗಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ತುಮಕೂರು-ಊರುಕೆರೆ ರೈಲು ಆರಂಭ:
ತುಮಕೂರು-ರಾಯದುರ್ಗ ನಡುವೆ ರೈಲ್ವೆ ಹಳಿ ಜೋಡಣೆ ಕಾರ್ಯ ನಡೆಯುತ್ತಿದ್ದು, ಅಲ್ಲಿ ತುಮಕೂರು-ಊರುಕೆರೆ ಮತ್ತು ದೊಡ್ಡಹಳ್ಳಿ-ಪಾವಗಡ ನಡುವೆ ಈ ವರ್ಷ 27 ಕಿ.ಮೀ. ಕಾಮಗಾರಿ ಪೂರ್ಣವಾಗಲಿದೆ. ತುಮಕೂರು-ಊರುಕೆರೆ ನಡುವೆ ನೂರಾರು ಕೈಗಾರಿಕೆಗಳಿದ್ದು, ಅಲ್ಲಿಗೆ ಶೀಘ್ರದಲ್ಲಿ ರೈಲು ಸೇವೆ ಆರಂಭಿಸಲಾಗುತ್ತದೆ. ಉಳಿದಂತೆ ದೊಡ್ಡಹಳ್ಳಿ-ಪಾವಗಡ ನಡುವೆ 2026ರ ಜನವರಿಯಲ್ಲಿ ಸೇವೆ ಆರಂಭವಾಗಲಿದೆ. ಉಳಿದಂತೆ ಮಡಕಶಿರಾ-ಪಾವಗಡ ನಡುವಿನ ಕಾಮಗಾರಿ 2026ರ ಡಿಸೆಂಬರ್, ಮಧುಗಿರಿ-ಪಾವಗಡ ಮಧ್ಯದ ಹಳಿ ಜೋಡಣೆ 2028ರ ಫೆಬ್ರವರಿ ವೇಳೆಗ ಪೂರ್ಣವಾಗಲಿದೆ ಎಂದು ಎಂ.ಬಿ. ಪಾಟೀಲ್ ವಿವರಿಸಿದರು.ಬೆಂಗಳೂರಿಂದ ತುಮಕೂರು,
ಮೈಸೂರಿಗೆ 4 ಹಳಿ ಮಾರ್ಗ
ಬೆಂಗಳೂರು-ತುಮಕೂರು ಮತ್ತು ಬೆಂಗಳೂರು-ಮೈಸೂರು ನಡುವೆ ಸದ್ಯ ಜೋಡಿ ಹಳಿಗಳಿವೆ. ಅದನ್ನು ನಾಲ್ಕು ಹಳಿಗಳ ಮಾರ್ಗವಾಗಿ ಮಾಡುವ ಕುರಿತು ಕಾರ್ಯಸಾಧ್ಯತಾ ವರದಿ ನೀಡುವಂತೆ ಹೇಳಲಾಗಿತ್ತು. ಈ ಸಂಬಂಧ ವರದಿಗಳು ಕ್ರಮವಾಗಿ ಡಿ. 25 ಮತ್ತು 2026ರ ಮೇ ತಿಂಗಳಲ್ಲಿ ಕೈ ಸೇರಲಿವೆ ಎಂದು ತಿಳಿಸಿದರು.
ಬೆಂಗಳೂರು-ಹಾಸನ-ಮಂಗಳೂರು ಮಾರ್ಗವನ್ನು ಜೋಡಿ ಹಳಿಗೆ ಮೇಲ್ದರ್ಜೆಗೇರಿಸುವ ಕುರಿತು ಚರ್ಚಿಸಲಾಗಿದೆ. ಹಾಸನ-ಮಂಗಳೂರು ಮಾರ್ಗದಲ್ಲಿ ರಸ್ತೆ ಮತ್ತು ರೈಲು ಎರಡನ್ನೂ ಸಮಾನಾಂತರವಾಗಿ ಅಭಿವೃದ್ಧಿಪಡಿಸುವ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎನ್. ಮಂಜುಳಾ, ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಅಜಯ್‌ಸಿಂಗ್ ಇತರರಿದ್ದರು.
