ಲೋಂಡಾ ರೈಲು ನಿಲ್ದಾಣದ ಬಳಿ ತುರ್ತು ಕಾಮಗಾರಿ ಕೈಕೊಂಡ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಿ ಬೆಳಗಾವಿ-ಹುಬ್ಬಳ್ಳಿ ಮಾರ್ಗದಲ್ಲಿ ಚಲಿಸಬೇಕಿದ್ದ ಕೆಲವು ರೈಲುಗಳು ನಿಲ್ದಾಣಗಳಲ್ಲಿಯೇ ನಿಂತು ಪ್ರಯಾಣಿಕರಿಗೆ ತೀವ್ರ ಅನಾನುಕೂಲ ಉಂಟಾಗಿರುವ ಘಟನೆ ಮಂಗಳವಾರ ನಡೆದಿದೆ.

ಅಳ್ನಾವರ:

ಲೋಂಡಾ ರೈಲು ನಿಲ್ದಾಣದ ಬಳಿ ತುರ್ತು ಕಾಮಗಾರಿ ಕೈಕೊಂಡ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಿ ಬೆಳಗಾವಿ-ಹುಬ್ಬಳ್ಳಿ ಮಾರ್ಗದಲ್ಲಿ ಚಲಿಸಬೇಕಿದ್ದ ಕೆಲವು ರೈಲುಗಳು ನಿಲ್ದಾಣಗಳಲ್ಲಿಯೇ ನಿಂತು ಪ್ರಯಾಣಿಕರಿಗೆ ತೀವ್ರ ಅನಾನುಕೂಲ ಉಂಟಾಗಿರುವ ಘಟನೆ ಮಂಗಳವಾರ ನಡೆದಿದೆ.

ವಿಶೇಷವಾಗಿ ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ಬೆಳಗಾವಿ ಎಕ್ಸ್‌ಪ್ರೆಸ್‌ ಹಾಗೂ ರಾಣಿಚೆನ್ನಮ್ಮ ರೈಲಿನ ಪ್ರಯಾಣಿಕರು ಉಪಾಹಾರ, ಕುಡಿಯುವ ನೀರಿಗಾಗಿ ಪರದಾಡಿದ ಪ್ರಸಂಗ ಅಳ್ನಾವರ ನಿಲ್ದಾಣದಲ್ಲಿ ಕಂಡು ಬಂದಿತು.

ಸೋಮವಾರ ಮಧ್ಯರಾತ್ರಿಯಿಂದ ಲೋಂಡಾ ಬಳಿ ಕೈಕೊಂಡಿದ್ದ ಹಳಿಗಳ ದುರಸ್ತಿ ಕಾರ್ಯದ ನಿಮಿತ್ತ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಆದರೆ, ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಬೆಳಗಾವಿ ಎಕ್ಸ್‌ಪ್ರೆಸ್‌ ರೈಲು ಬೆಳಗ್ಗೆ 5ಕ್ಕೆ ಹಾಗೂ ರಾಣಿ ಚೆನ್ನಮ್ಮ ರೈಲು 7ಕ್ಕೆ ಅಳ್ನಾವರ ಸಮೀಪ ಬಂದು ನಿಂತವು.

ವಿದ್ಯುತ್ ಚಾಲಿತ ಎಂಜಿನ್‌ ಇರುವುದರಿಂದ ವಿದ್ಯುತ್ ಸರಬರಾಜು ಇಲ್ಲದೆ ರೈಲುಗಳು ಐದಾರು ಗಂಟೆ ಕಾಲ ಅಲ್ಲಿಯೇ ನಿಂತಿದ್ದವು. ಸುಮಾರು 11 ಗಂಟೆ ನಂತರ ರೈಲುಗಳ ಸಂಚಾರ ಪ್ರಾರಂಭವಾಯಿತು. ಕಾಮಗಾರಿಯ ಕಾರಣದಿಂದ ಈ ಸಮಸ್ಯೆ ಎದುರಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಐದಾರು ಗಂಟೆ ಒಂದೇ ಸ್ಥಳದಲ್ಲಿ ರೈಲು ನಿಲ್ಲಿಸಿದ್ದರಿಂದ ನೌಕರಿ, ವ್ಯಾಪಾರ-ವಹಿವಾಟು ಸೇರಿದಂತೆ ಅನೇಕ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಯಿತು. ನಿಗದಿತ ಸಮಯಕ್ಕೆ ಮನೆ ಸೇರಬೇಕಾಗಿದ್ದ ಪ್ರಯಾಣಿಕರು ತಾಳ್ಮೆ ಕಳೆದುಕೊಂಡು ನಿಲ್ದಾಣ ವ್ಯವಸ್ಥಾಪಕರೊಡನೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು. ರೈಲುಗಳನ್ನು ಯಾವ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಎನ್ನುವ ಮಾಹಿತಿ ಸ್ಥಳೀಯ ನಿಲ್ದಾಣ ಅಧಿಕಾರಿಗೂ ಗೊತ್ತಿರದೆ ಪ್ರಯಾಣಿಕರಿಗೆ ಸಮರ್ಪಕ ಉತ್ತರ ನೀಡದೆ ಹಾರಿಕೆ ಉತ್ತರ ನೀಡಿದರು.

ಹಸಿವಿನಿಂದ ಪರದಾಟ:

ಬೆಂಗಳೂರಿನಿಂದ ರಾತ್ರಿ ಹೊರಟ ರೈಲುಗಳು ಅಳ್ನಾವರ ನಿಲ್ದಾಣದಲ್ಲಿ ಬೆಳಗಿನ ಜಾವ 5ರಿಂದಲೇ ನಿಂತಿದ್ದರಿಂದ ರೈಲಿನಲ್ಲಿ ಮಾರಾಟ ಮಾಡುತ್ತಿದ್ದ ಉಪಾಹಾರ, ಚಹಾ ಖಾಲಿಯಾಗಿತ್ತು. ಇನ್ನು, ಅಳ್ನಾವರದಲ್ಲಿ ಹೊಸದಾಗಿ ನಿಲ್ದಾಣವಾಗಿದ್ದು, ಒಳಗೂ-ಹೊರಗೂ ಯಾವುದೇ ತಿಂಡಿ, ತಿನಿಸು, ಚಹಾ ಅಂಗಡಿಗಳಿಲ್ಲದ ಕಾರಣ ಕೆಲವು ಪ್ರಯಾಣಿಕರು ಹಸಿವಿನಿಂದ ಬಳಲಿದ ಪ್ರಸಂಗವೂ ನಡೆಯಿತು. ರೈಲಿನಿಂದ ಇಳಿದು ನಿಲ್ದಾಣದ ಹೊರಗೆ ಇದ್ದ ಅಂಗಡಿಗಳಿಗೆ ಹೋಗಿ ತಿಂಡಿ ತರಬೇಕೆಂದರೆ, ರೈಲು ಬಿಡುವ ಸಮಯ ತಿಳಿಯದೇ ರೈಲಿನಲ್ಲಿಯೇ ಕುಳಿತುಕೊಳ್ಳುವ ಅನಿವಾರ್ಯತೆಯೂ ಪ್ರಯಾಣಿಕರಿಗೆ ಒದಗಿ ಬಂದಿತು.

ಬೆಳಗಾವಿ ಕಡೆಗೆ ತೆರಳಬೇಕಾಗಿದ್ದ ಮೈಸೂರು- ಬೆಳಗಾವಿ ಧಾರವಾಡದಲ್ಲಿ, ಹರಿಪ್ರಿಯಾ ರೈಲು ಹುಬ್ಬಳ್ಳಿಯಲ್ಲಿ, ಅದರಂತೆ ಬೆಂಗಳೂರಿಗೆ ತೆರಳಬೇಕಾಗಿದ್ದ ವಂದೇ ಭಾರತ ರೈಲು ಖಾನಾಪುರ ಹಾಗೂ ಇತರೆ ರೈಲುಗಳನ್ನು ಬೆಳಗಾವಿ ಮತ್ತು ಅದಕ್ಕಿಂತಲೂ ಹಿಂದಿನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ ಎಂಬ ಮಾಹಿತಿ ಇದೆ. ಉಳಿದೆಲ್ಲ ನಿಲ್ದಾಣಗಳಲ್ಲಿ ಆಹಾರ, ನೀರಿನ ಸೌಲಭ್ಯವಿದ್ದು, ಅಳ್ನಾವರದಲ್ಲಿ ಮಾತ್ರ ಈ ವ್ಯವಸ್ಥೆ ಇರದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ತಿಳಿದು ಬಂದಿದೆ.