ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಅಯೋಧ್ಯೆ ರಾಮಮಂದಿರದ ಶ್ರೀ ರಾಮ ಲಲ್ಲಾ ಮೂರ್ತಿ ಕೆತ್ತುವ ತಂಡದಲ್ಲಿ ಬೆಳ್ತಂಗಡಿ ತಾಲೂಕಿನ ನಾಳದ ಜಯಚಂದ್ರ ಆಚಾರ್ಯ ಅವರೂ ಇದ್ದಾರೆ.ಶ್ರೀ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲು ಒಟ್ಟು ಮೂರು ಮೂರ್ತಿಗಳನ್ನು ಈಗಾಗಲೇ ತಯಾರಿಸಲಾಗಿದೆ. ಒಂದು ರಾಜಸ್ಥಾನದ ಮಾರ್ಬಲ್ ನಲ್ಲಿ ಇನ್ನುಳಿದ ಎರಡು ಕೃಷ್ಣಶಿಲೆಯಲ್ಲಿ ಕೆತ್ತಲಾಗಿದೆ. ಕೃಷ್ಣಶಿಲೆಯಲ್ಲಿ ಶ್ರೀರಾಮ ಲಲ್ಲಾ ಮೂರ್ತಿ ಕೆತ್ತುವ ತಂಡದಲ್ಲಿದ್ದ ಶಿಲ್ಪಿಗಳಲ್ಲಿ ನಾಳದ ಜಯಚಂದ್ರ ಆಚಾರ್ಯರು ಒಬ್ಬರು.
ಮಧ್ಯಪ್ರದೇಶದಿಂದ ಕರ್ನಾಟಕಕ್ಕೆ ಹಲವು ವರ್ಷಗಳ ಹಿಂದೆ ಬಂದು ನೆಲೆಸಿದ ವಿಪಿನ್ ಬದೌರಿಯ ಅವರಿಗೆ ಅವರ ಗುರುಗಳಾದ ಇಡಗುಂಜಿ ಜಿ.ಎಲ್.ಭಟ್ ಮಾರ್ಗದರ್ಶನದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ್ ಲಲಾ ಮೂರ್ತಿಯನ್ನು ಕೆತ್ತುವ ಅವಕಾಶ ಸಿಕ್ಕಿತ್ತು.ವಿಪಿನ್ ಬದೌರಿಯ ಅವರ ಶಿಷ್ಯ ವೃಂದದಲ್ಲಿ ಜಯಚಂದ್ರ ಆಚಾರ್ಯರು ಪ್ರಮುಖರು. ಉತ್ತಮ ಮತ್ತು ನಿಷ್ಠೆಯಿಂದ ಪ್ರಾಮಾಣಿಕ ಕೆಲಸ ಮಾಡುವ ಇವರ ತಂಡದ ಮೌನೇಶ್, ಪ್ರಕಾಶ್,ಸಂದೀಪ್, ಅವರ ಜತೆ ಕೆಲಸವನ್ನು ನಿರ್ವಹಿಸಿ ಮೂರ್ತಿ ಕೆತ್ತುವ ಕೆಲಸ ಪೂರ್ಣಗೊಳಿಸಲಾಗಿದೆ. ಸತತ ಏಳು ತಿಂಗಳಿನಿಂದ ಅಯೋಧ್ಯೆಯಲ್ಲಿ ನೆಲೆಸಿದ ತಂಡ ಪ್ರತಿದಿನ ನಿರಂತರ 16 ಗಂಟೆಗಳಷ್ಟು ಕಾಲ ಕೆಲಸ ನಿರ್ವಹಿಸಿ ಏಳೂವರೆ ಅಡಿ ಎತ್ತರದ ಈ ಮೂರ್ತಿಯನ್ನು ತಯಾರಿಸಿದೆ.ಅನಗತ್ಯ ಯಾವುದೇ ಯಂತ್ರದ ಸಹಾಯವಿಲ್ಲದೆ ಕೈಗಳ ಮೂಲಕವೇ ಹೆಚ್ಚಿನ ಕೆಲಸ ಮಾಡಲಾಗಿದೆ.
ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ನಾಳ ದೇವಿನಗರದ ಶ್ಯಾಮರಾಯ ಆಚಾರ್ಯ,ಲಲಿತಾ ದಂಪತಿಯ ಪುತ್ರ ಜಯಚಂದ್ರ ಆಚಾರ್ಯ(33) ಅವರಿಗೆ ಚಿಕ್ಕ ವಯಸ್ಸಿನಿಂದಲೇ ಶಿಲ್ಪಕಲೆ,ಮರದ ಕೆಲಸಗಳಲ್ಲಿ ವಿಶೇಷ ಆಸಕ್ತಿ. ಏಳನೇ ತರಗತಿಯನ್ನು ನಾಳ ಸರಕಾರಿ ಶಾಲೆಯಲ್ಲಿ ಹಾಗೂ ಹೈಸ್ಕೂಲ್, ಪಿಯುಸಿ ವಿದ್ಯಾಭ್ಯಾಸವನ್ನು ಗೇರುಕಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿ ಕಾರ್ಕಳದಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ ಇ ಕಾಮತ್ ಇನ್ಸ್ಟಿಟ್ಯೂಷನ್ ಫಾರ್ ಆರ್ಟಿಜೆನ್ಸ್ ನಲ್ಲಿ ಒಂದೂವರೆ ವರ್ಷ ಕಾಲ ಶಿಲ್ಪಕಲೆ,ಕಲ್ಲು,ಮರ ಹಾಗೂ ಲೋಹದ ಕೆಲಸದ ತರಬೇತಿ ಪಡೆದು ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆ ಕುಡಲ್ ನಲ್ಲಿ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.ಬಳಿಕ ಕೇಂದ್ರ ಸರಕಾರ ಪ್ರಾಯೋಜಿತ ಕಾವೇರಿ ಎಫೋರಿಯಂ ಕರಕುಶಲ ತರಬೇತಿ ನಿಗಮ ಬೆಂಗಳೂರು ಇದರ ಸಾಗರದಲ್ಲಿರುವ ಶಿಲ್ಪ ಗುರುಕುಲದಲ್ಲಿ ಶಿಲ್ಪಗುರು ವಿಪಿನ್ ಬದೌರಿಯ ಅವರಿಂದ ತರಬೇತಿ ಪಡೆದಿದ್ದಾರೆ. ಇವರ ಕೆಲಸದ ನಿಪುಣತೆ ಗಮನಿಸಿದ ಗುರುಗಳು ಅವರನ್ನು ತಮ್ಮೊಡನೆ ನೇಮಿಸಿಕೊಂಡು ಹಲವು ಅವಕಾಶಗಳನ್ನು ಒದಗಿಸಿದ್ದಾರೆ.ಇದೀಗ ಅಯೋಧ್ಯೆಯಲ್ಲಿ ಪೂರ್ಣಗೊಂಡ ಶ್ರೀರಾಮ್ ಲಲಾ ಮೂರ್ತಿ ರಚನೆಯ ಅವಕಾಶ ಇವರಿಂದಲೇ ಸಿಕ್ಕಿದೆ.-ಕೋಟ್-ನಾಳದ ಶ್ರೀ ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ, ನಾವು ಮನೆಯಲ್ಲಿ ಪೂಜಿಸುವ ಶ್ರೀರಾಮ ದೇವರಿಂದ ಇಂತಹ ಅಪೂರ್ವ ಅವಕಾಶ ಸಿಕ್ಕಿದೆ.ಈ ಕೆಲಸಗಳಿಗೆ ಪ್ರೇರಣೆ ನೀಡಿದ ಗುರುಗಳಿಗೆ,ಪೋಷಕರಿಗೆ, ಕುಟುಂಬ ವರ್ಗದವರಿಗೆ ಆಭಾರಿಯಾಗಿದ್ದೇನೆ. ಶಿಲ್ಪ ಕಲೆಯಲ್ಲಿ ನನಗಿದ್ದ ಆಸಕ್ತಿಗೆ ತಕ್ಕಂತೆ ಜೀವಮಾನದಲ್ಲಿ ಶ್ರೇಷ್ಠ ಕೆಲಸವೊಂದನ್ನು ನಿರ್ವಹಿಸಿದ ಧನ್ಯತೆಯ ಭಾವ ಇದೆ.ಜಯಚಂದ್ರ ಆಚಾರ್ಯ ನಾಳ,ಶಿಲ್ಪಿ.-ಕೋಟ್-ನಾಳದ ಶ್ರೀ ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ, ನಾವು ಮನೆಯಲ್ಲಿ ಪೂಜಿಸುವ ಶ್ರೀರಾಮ ದೇವರಿಂದ ಇಂತಹ ಅಪೂರ್ವ ಅವಕಾಶ ಸಿಕ್ಕಿದೆ.ಈ ಕೆಲಸಗಳಿಗೆ ಪ್ರೇರಣೆ ನೀಡಿದ ಗುರುಗಳಿಗೆ,ಪೋಷಕರಿಗೆ, ಕುಟುಂಬ ವರ್ಗದವರಿಗೆ ಆಭಾರಿಯಾಗಿದ್ದೇನೆ. ಶಿಲ್ಪ ಕಲೆಯಲ್ಲಿ ನನಗಿದ್ದ ಆಸಕ್ತಿಗೆ ತಕ್ಕಂತೆ ಜೀವಮಾನದಲ್ಲಿ ಶ್ರೇಷ್ಠ ಕೆಲಸವೊಂದನ್ನು ನಿರ್ವಹಿಸಿದ ಧನ್ಯತೆಯ ಭಾವ ಇದೆ.
ಜಯಚಂದ್ರ ಆಚಾರ್ಯ ನಾಳ,ಶಿಲ್ಪಿ.