ಹಾನಗಲ್ಲ: ತೊಟ್ಟಿಲು ತೂಗುವ ಕೈ ದೇಶವನ್ನೇ ಆಳಬಲ್ಲದು ಎಂಬುದಷ್ಟೇ ಅಲ್ಲ, ತನ್ನ ಪ್ರತಿಭೆಯ ಮೂಲಕ ಅತ್ಯುತ್ತಮ ಕಲಾ ವೈಭವವನ್ನೂ ನೀಡುವ ಶಕ್ತಿ ಮಹಿಳೆಗಿದೆ ಎಂಬುದು ಈಗ ಎಲ್ಲ ಮನೆ ಮನಗಳ ಚರ್ಚೆ ಆಗಿದ್ದು, ಆರಿ ತರಬೇತಿ ಮೂಲಕ ಮಹಿಳೆಯರಿಗೆ ಮನೆಯಲ್ಲೇ ಉದ್ಯೋಗ ಒದಗಿಸುವ ತರಬೇತಿ ಅತ್ಯಂತ ಪ್ರಯೋಜನಕಾರಿ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಮಮತಾ ಆರೆಗೊಪ್ಪ ತಿಳಿಸಿದರು. ಶುಕ್ರವಾರ ಹಾನಗಲ್ಲಿನ ಗುರುಭವನದಲ್ಲಿ ಪರಿವರ್ತನ ಕಲಿಕಾ ಕೇಂದ್ರ ಆಯೋಜಿಸಿದ ತಾಲೂಕಿನ ಅಲದಕಟ್ಟಿ ಹಾಗೂ ಹಾನಗಲ್ಲಿನ ಎರಡು ಕಡೆ ಸೇರಿ ಒಟ್ಟು ಮೂರು ಕಡೆಗಳಲ್ಲಿ ಏಕ ಕಾಲಕ್ಕೆ ಆರಂಭಿಸಿದ ನೂರಕ್ಕೂ ಅಧಿಕ ಮಹಿಳೆಯರಿಗೆ ಆರೀ ಕಲೆ ತರಬೇತಿಯ ಸಮಾರೋಪ ಹಾಗೂ ಕಲೆಯ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದರು.

ಶತಮಾನಗಳಿಂದ ಮಹಿಳೆ ತನ್ನ ಶಕ್ತಿ ಪರಾಕ್ರಮ ಮೆರೆಯುತ್ತಲೇ ಬಂದಿದ್ದಾಳೆ. ಅವಕಾಶ ಸಿಕ್ಕರೆ ಮಹಿಳೆ ಏನೆಲ್ಲ ಸಾಧನೆ ಮಾಡಬಲ್ಲಳು. ಹಾನಗಲ್ಲ ತಾಲೂಕಿನಲ್ಲಿ ಆರೀ ಕಲೆ ಬಗ್ಗೆ ಆಸಕ್ತಿವಹಿಸಿ ಶಾಸಕ ಶ್ರೀನಿವಾಸ ಮಾನೆ ಅವರ ಮಾರ್ಗದರ್ಶನದಲ್ಲಿ ಮಹಿಳೆಯರಿಗೆ ಕಲೆಯ ಉಳಿವು ಹಾಗೂ ಮನೆಗೆಲಸವನ್ನೂ ಪೂರೈಸಿ ಆರ್ಥಿಕ ಸಬಲತೆಗೆ ಸಹಕಾರಿಯಾಗುವ ಈ ತರಬೇತಿ ನಿಜಕ್ಕೂ ಮೆಚ್ಚುವಂತಹದ್ದು ಎಂದರು. ಮಾಜಿ ಉಪಾಧ್ಯಕ್ಷೆ ವೀಣಾ ಗುಡಿ ಮಾತನಾಡಿ, ಯಂತ್ರ ಯುಗದಲ್ಲಿರುವ ನಮಗೆ ಜಾನಪದ ಕಲೆ ಕುಸುರಿಯನ್ನು ಉಳಿಸುವ ಚಾಲೆಂಜ್ ಈಗ ಇದೆ. ನಮ್ಮ ಮನೆಗಳು ಒಂದು ಕಾಲದಲ್ಲಿ ಕಲಾ ಕುಸುರಿಯ ವಿಶೇಷ ತರಬೇತಿ ಕೇಂದ್ರಗಳಂತಿದ್ದವು. ಮನೆಗೆಲಸ ಮುಗಿಸಿದ ನಂತರ ಬಾಗಿಲುಗಳಿಗೆ ಹಾಕುವ ಅಲಂಕಾರಗಗಳು, ಉಡುಪುಗಳಿಗೆ ಹಾಕುವ ಅಲಂಕಾರಗಳು, ಹಾಸಿಗೆ ಹೊದಿಕೆಗೆ ಅಲಂಕಾರಗಳು, ಮಕ್ಕಳ ಉಡುಪಿಗೆ ವಿಶೇಷವಾದ ಅಲಂಕಾರಗಳನ್ನು ಮಹಿಳೆಯರು ಮಾಡುತ್ತಿದ್ದರು. ಆದರೆ ಯಂತ್ರ ಯುಗದಲ್ಲಿ ನಮ್ಮ ಜಾನಪದ ಕಲೆಗಳು ದೂರವಾಗುತ್ತಿರುವ ಸಂದರ್ಭದಲ್ಲಿ ಇಂತಹ ಕಲೆಗಳನ್ನು ಉಳಿಸುವ ತರಬೇತಿ ಅತ್ಯಂತ ಅರ್ಥಪೂರ್ಣ ಎಂದರು. ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಮಾರುತಿ ಶಿಡ್ಲಾಪೂರ, ಗಿರೀಶ ಅಂಬಿಗೇರ, ಆರೀ ಕಲೆ ಶಿಕ್ಷಕಿಯರಾದ ರ‍್ವಿನಾ ಜೇಕ್ಕಿನಕಟ್ಟಿ, ಶೃತಿ ಮರಿಯಣ್ಣನವರ, ಪ್ರಿಯಾ ಗೊಲ್ಲರ ಈ ಸಂದರ್ಭದಲ್ಲಿ ಇದ್ದರು.