ಸಾರಾಂಶ
ಹಿರೇಕೆರೂರು: ವಿವಿಧ ತರಬೇತಿಗಳು ವೃತ್ತಿ ಬದುಕಿನ ಕೌಶಲ್ಯಗಳನ್ನು ಹೆಚ್ಚಿಸುತ್ತವೆ ಎಂದು ಪ್ರಾಚಾರ್ಯ ಡಾ. ಎಸ್.ಪಿ. ಗೌಡರ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಶೋಧನಾ ಅಭಿವೃದ್ಧಿ ಕೋಶ, ಆಂತರಿಕ ಗುಣಮಟ್ಟ ಭರವಶಾ ಕೋಶ ಹಾಗೂ ಗಣಕ ವಿಜ್ಞಾನ ವಿಭಾಗಗಳ ಸಹಯೋಗದಲ್ಲಿ ನಡೆದ ಕೃತಕ ಬುದ್ಧಿಮತ್ತೆಯ ಉಪಯೋಗಗಳು ಕುರಿತು ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಜಗತ್ತಿನ ಹೊಸ ಹೊಸ ಜ್ಞಾನಗಳನ್ನು ತಿಳಿದುಕೊಳ್ಳುವುದರೊಂದಿಗೆ ಸಮರ್ಥವಾಗಿ ಬಳಕೆ ಮಾಡಿಕೊಳ್ಳಲು ಸನ್ನದ್ಧರಾಗಬೇಕು ಎಂದರು. ಅಧ್ಯಾಪಕರು ಪರಿಣಾಮಕಾರಿ ಬೋಧನೆ ಮಾಡಲು ಕೃತಕ ಬುದ್ಧಿಮತ್ತೆ ತಿಳುವಳಿಕೆ ಅಗತ್ಯ ಎಂದರು. ಕಾರ್ಯಾಗಾರದಲ್ಲಿ ಕೃತಕ ಬುದ್ಧಿಮತ್ತೆಯ ಉಪಯೋಗಗಳು ಮತ್ತು ಅದರ ಸಾಧ್ಯತೆಗಳನ್ನು ಕುರಿತು ಧಾರವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಾಗರ ಮನಗಾವೆ ಮಾತನಾಡಿ, ಕೃತಕ ಬುದ್ಧಿಮತ್ತೆಯು ನಮ್ಮ ದಿನ ನಿತ್ಯದ ಬದುಕನ ಆವರಿಸಿದ್ದು, ಎಲ್ಲರೂ ಇದರ ಉಪಯೋಗದ ಸಾಧ್ಯತೆಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದರು. ಕೃತಕ ಬುದ್ಧಿಮತ್ತೆಯ ಉಪಯೋಗ ಮತ್ತು ಅದರ ಆಯಾಮಗಳನ್ನು ಅರಿತುಕೊಂಡರೆ ಮಾತ್ರ ಸಮರ್ಥವಾಗಿ ಬೋಧನೆ ಮಾಡಲು ಸಾಧ್ಯ ಎಂದು ಅಧ್ಯಾಪಕರಿಗೆ ಹೇಳಿದರು.ಈ ವೇಳೆ ಪ್ರಾಧ್ಯಾಪಕರಾದ ಎಂ.ಬಿ. ಬದನೆಕಾಯಿ, ಯತೀಶ್ ಎನ್.ಎ., ನವೀನ ಎಂ., ಹೇಮಾ ಯರಗುಂಟಿ, ಹೇಮಲತಾ ಕೆ. ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ವಿವಿಧ ಕಾಲೇಜುಗಳಿಂದ ಆಗಮಿಸಿದ ಡಾ. ಲಕ್ಷ್ಮಣ್ ಪೂಜಾರ, ಉಮೇಶ ಕುಬಸದ, ಡಾ. ಪ್ರಿಯಾ ಇಂಡಿ, ಡಾ. ಸಂತೋಷ ಸಿ., ಆರ್.ಎಫ್. ದೊಡ್ಡಮನಿ, ಗೀತಾ ಎಂ.,ಸುಮಲತಾ ಬಿ.ಎನ್. ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.