ದಿನ ನಿತ್ಯ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳುವ ಸಾವಿರಾರು ಉದ್ಯೋಗಿ ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲಕರವಾಗಿರುವ ರೈಲುಗಳು ನಮ್ಮ ಜೀವನಾಡಿಗಳಾಗಿವೆ, ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿವೆ ಎಂದು ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ, ತುಮಕೂರು ದಿನ ನಿತ್ಯ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳುವ ಸಾವಿರಾರು ಉದ್ಯೋಗಿ ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲಕರವಾಗಿರುವ ರೈಲುಗಳು ನಮ್ಮ ಜೀವನಾಡಿಗಳಾಗಿವೆ, ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿವೆ ಎಂದು ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್ ತಿಳಿಸಿದರು.ತುಮಕೂರು-ಬೆಂಗಳೂರು ಮೆಮು ರೈಲು ಆರಂಭದ 13ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಕೇವಲ ಉದ್ಯೋಗಿ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ಕಚೇರಿ ತಲುಪಲು ರೈಲುಗಳು ಸುಲಭದ ಸಂಚಾರ ವ್ಯವಸ್ಥೆಯಾಗಿವೆ. ಅಲ್ಲದೆ, ಬಡ ಮತ್ತು ಮಧ್ಯಮವರ್ಗದ ಜನಸಾಮಾನ್ಯರ ಸಂಚಾರಕ್ಕೆ ರೈಲುಗಳು ತುಂಬಾ ಸಹಕಾರಿಯಾಗಿವೆ ಎಂದರು. ವೇದಿಕೆ ಕಾರ್ಯದರ್ಶಿ ಸಿ. ನಾಗರಾಜ್ ಮಾತನಾಡಿ, ನಮ್ಮ ಸಂಸದ, ಸಚಿವರರಾದ ವಿ. ಸೋಮಣ್ಣನವರು ರೈಲ್ವೇ ರಾಜ್ಯ ಸಚಿವರಾದ ಮೇಲೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತಿದೆ. ಅದರಲ್ಲೂ ವಿಶೇಷವಾಗಿ ತುಮಕೂರು ಜಿಲ್ಲೆಯಲ್ಲಿ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಳಸೇತುವೆ, ಮೇಲ್ಸೇತುವೆಗಳು ನಿರ್ಮಾಣವಾಗುತ್ತಿವೆ. ಇದರಿಂದ ಜನಸಾಮಾನ್ಯರ ಸುಗಮ ಓಡಾಟಕ್ಕೆ ಅನುಕೂಲವಾಗಿವೆ. ತುಮಕೂರು ರೈಲು ನಿಲ್ದಾಣ, ಅತ್ಯಾಧುನಿಕವಾಗಿ ಮರು ನಿರ್ಮಾಣಗೊಳ್ಳಲಿದೆ ಎಂದರಲ್ಲದೆ, ತುಮಕೂರಿನಿಂದ ಅರಸೀಕೆರೆ ಕಡೆಗೆ ಮತ್ತು ಬೆಂಗಳೂರು ಕಡೆಗೆ ಇನ್ನೂ ಹೆಚ್ಚಿನ ಮೆಮು ರೈಲುಗಳ ಸಂಚಾರದ ಅಗತ್ಯವಿದೆ. ಇದನ್ನು ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.ಖಜಾಂಚಿ ಆರ್. ಬಾಲಾಜಿ ಮಾತನಾಡಿ, ನಮ್ಮ ವೇದಿಕೆಯ ಕಾರ್ಯಚಟುವಟಿಕೆಗಳಿಗೆ ತುಮಕೂರು ರೈಲು ನಿಲ್ದಾಣವೇ ಆಧಾರವಾಗಿದೆ. ಇದಕ್ಕೆ ರೈಲ್ವೇ ಹಿರಿಯ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿಯ ಸಹಕಾರ, ಸಹಾಯದಿಂದ ವೇದಿಕೆ ಮತ್ತು ಇಲಾಖೆ ಸಿಬ್ಬಂದಿಯ ನಡುವೆ ಅವಿನಾಭಾವ ಸಂಬಂಧಕ್ಕೆ ವೇದಿಕೆ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.ನಮ್ಮ ರೈಲಿನ 13ನೇ ಜನ್ಮ ದಿನಾಚರಣೆ ಅಂಗವಾಗಿ ವೇದಿಕೆ ಪದಾಧಿಕಾರಿಗಳು ಮತ್ತು ಸದಸ್ಯರು ಬೆಳಗ್ಗೆಯೇ ನಿಲ್ದಾಣಕ್ಕೆ ಬಂದು ರೈಲಿಗೆ ಮಾವಿನ ತೋರಣ, ಬಾಳೆಕಂದು, ಹೂವುಗಳನ್ನು ಕಟ್ಟಿ ಅಲಂಕರಿಸಿದರು. ರೈಲಿನ ಚಾಲಕರಾದ ಅಮರೇಂದ್ರ ಪ್ರಸಾದ್ ಮತ್ತು ಅಮಿತ್ ಪ್ರಸಾದ್ ಅವರುಗಳಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿ, ಎಲ್ಲರಿಗೂ ಹಂಚಿದರು.ಕಾರ್ಯಕ್ರಮದಲ್ಲಿ ಆರ್‌ಪಿಎಫ್ ಅಧಿಕಾರಿಗಳಾದ ಅಂಬರೀಶ್, ವಿಕ್ರಂ ಮತ್ತು ಸಿಬ್ಬಂದಿ ರೈಲ್ವೇ ಪೊಲೀಸ್ ಸಬ್ ಇನ್ಸಪೆಕ್ಟರ್ ಆನಂದ್ ಮತ್ತು ಸಿಬ್ಬಂದಿ, ಸ್ಟೇಷನ್ ಅಧಿಕಾರಿಗಳು ಮತ್ತು ಸಿಬ್ಬಂದಿ, ರೋಟರಿ ಅಧ್ಯಕ್ಷೆ ಕೆ.ಆರ್. ಭಾಗ್ಯಲಕ್ಷ್ಮಿ ನಾಗರಾಜ್, ವೇದಿಕೆ ಉಪಾಧ್ಯಕ್ಷರಾದ ಮಾಧವಮೂರ್ತಿ ಗುಡಿಬಂಡೆ, ಜಂಟಿ ಕಾರ್ಯದರ್ಶಿ ರವಿಶಂಕರ್, ನಿರ್ದೇಶಕರಾದ ಮೋಹನ್ ಕುಮಾರ್, ಚಕ್ರವರ್ತಿ, ರಾಜಶೇಖರ್, ಗುರುಪ್ರಸಾದ್, ದೀಪಕ್, ವೀರಪ್ಪ, ಭರತ್ ಕುಮಾರ್, ಗುರುಪ್ರಸಾದ್, ಅರ್ಷದ್, ನಂದಿನಿ, ಉಮಾಶಂಕರ್, ಮತ್ತಿತರ ಪ್ರಯಾಣಿಕರು ಭಾಗವಹಿಸಿದ್ದರು.