ಶ್ರೀಕಾಂತ ಹೆಮ್ಮಾಡಿ, ಕುಂದಾಪುರ: ಬಡವರ ಪಾಲಿನ ಕೊನೆಯ ಭರವಸೆಯಾಗಬೇಕಿದ್ದ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಂದ ಹಣ ಪಡೆಯಲಾಗುತ್ತಿದೆ ಎಂಬ ಆರೋಪದ ಕುರಿತು ಕನ್ನಡಪ್ರಭ ಪ್ರಕಟಿಸಿದ ತನಿಖಾ ವರದಿ ಭಾರಿ ಪರಿಣಾಮ ಬೀರಿದೆ. ವರದಿ ಪ್ರಕಟಗೊಂಡ ಬೆನ್ನಲ್ಲೇ ಆರೋಪ ಎದುರಿಸುತ್ತಿರುವ ಸರ್ಜನ್ ವೈದ್ಯರನ್ನು ಕಾರ್ಕಳ ತಾಲೂಕು ಆಸ್ಪತ್ರೆಗೆ ತಾತ್ಕಾಲಿಕವಾಗಿ ವರ್ಗಾವಣೆಗೊಳಿಸಿ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ್ ಆದೇಶ ಹೊರಡಿಸಿದ್ದಾರೆ.ಒಂದು ವರ್ಷದ ಆರೋಪಕ್ಕೆ ಈಗ ಕ್ರಮ: ವೈದ್ಯರ ವಿರುದ್ಧ ರೋಗಿಗಳಿಂದ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕಳೆದ ಒಂದು ವರ್ಷದಿಂದಲೂ ಕೇಳಿಬರುತ್ತಿದ್ದರೂ, ಲಿಖಿತ ದೂರುಗಳ ಕೊರತೆಯಿಂದಾಗಿ ಇಲಾಖೆ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ ಶನಿವಾರ ಪ್ರಕಟಿಸಿದ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಭ್ರಷ್ಟಾಚಾರದ ಕರಿನೆರಳು ಎಂಬ ತನಿಖಾ ವರದಿ ಇಲಾಖೆಯ ಗಮನ ಸೆಳೆದಿದ್ದು, ತಕ್ಷಣವೇ ವರ್ಗಾವಣೆ ಆದೇಶ ಹೊರಬಿದ್ದಿದೆ.
ಕರೆಗಳ ಸುರಿಮಳೆ!: ‘ಕನ್ನಡಪ್ರಭ’ ವರದಿಗೆ ಸಾರ್ವಜನಿಕರಿಂದ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವರದಿಯನ್ನು ವ್ಯಾಪಕವಾಗಿ ಹಂಚಿಕೊಂಡಿರುವ ಸಾರ್ವಜನಿಕರು, ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ವರದಿ ಪ್ರಕಟವಾದ ಬಳಿಕ ಹಲವು ಸಂತ್ರಸ್ತ ರೋಗಿಗಳ ಕುಟುಂಬಿಕರು ಕನ್ನಡಪ್ರಭ ಪ್ರತಿನಿಧಿಯನ್ನು ಸಂಪರ್ಕಿಸಿ, ತಮಗೂ ಇದೇ ರೀತಿಯ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದರಿಂದಾಗಿ ವೈದ್ಯರ ವಿರುದ್ಧದ ಆರೋಪಗಳ ವ್ಯಾಪ್ತಿ ಮತ್ತಷ್ಟು ವಿಸ್ತರಿಸಿದೆ.ಹೊಸ ಆಡಳಿತಾಧಿಕಾರಿಗೆ ಭೇಟಿ: ಆಗಸ್ಟ್ 1ರಿಂದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿರುವ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿನ ವ್ಯವಸ್ಥೆ, ರೋಗಿಗಳ ಸಮಸ್ಯೆಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.ಕ್ರಮಕ್ಕೆ ಆಗ್ರಹ: ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸುತ್ತಿರುವ ಆರೋಗ್ಯ ಸಚಿವರು, ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಾಕ್ಷ್ಯಗಳ ಕೊರತೆಯಿಂದ ಕ್ರಮ ಸಾಧ್ಯವಾಗಿರಲಿಲ್ಲ: ವೈದ್ಯರ ಬಗ್ಗೆ ಕಳೆದ ಕೆಲ ತಿಂಗಳಿನಿಂದ ದೂರುಗಳು ಬರುತ್ತಿದ್ದವು. ಆದರೆ ಯಾರೊಬ್ಬರೂ ಲಿಖಿತವಾಗಿ ದೂರು ನೀಡಿರಲಿಲ್ಲ. ಹಲವು ಬಾರಿ ತನಿಖೆ ನಡೆಸಿದರೂ ಸಾಕ್ಷ್ಯಗಳ ಕೊರತೆಯಿಂದ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಕನ್ನಡಪ್ರಭ ವರದಿಯ ಬಳಿಕ ಅವರನ್ನು ತಾತ್ಕಾಲಿಕವಾಗಿ ಕಾರ್ಕಳ ತಾಲೂಕು ಆಸ್ಪತ್ರೆಗೆ ವರ್ಗಾವಣೆಗೊಳಿಸಿ ಆದೇಶ ನೀಡಿದ್ದೇನೆ. -ಬಸವರಾಜ್, ಜಿಲ್ಲಾ ಆರೋಗ್ಯಾಧಿಕಾರಿಇದು ಅಧರ್ಮದ ಪರಮಾವಧಿ: ಉಚಿತ ಚಿಕಿತ್ಸೆ ನೀಡಬೇಕಾದ ಸರ್ಕಾರಿ ಆಸ್ಪತ್ರೆಯ ಸರ್ಜನ್ ವೈದ್ಯರು ಆರ್ಥಿಕವಾಗಿ ಹಿಂದುಳಿದ ರೋಗಿಗಳಿಂದ ಚಿಕಿತ್ಸೆಗಾಗಿ ಹಣದ ಬೇಡಿಕೆ ಇಡುತ್ತಿದ್ದಾರೆ ಎನ್ನುವುದಾದರೆ ಇದು ಅಧರ್ಮದ ಪರಮಾವಧಿ. ಕನ್ನಡಪ್ರಭದ ಜನಪರ ಕಾಳಜಿ ಶ್ಲಾಘನೀಯ. ಆರೋಪಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. -ವಿಕಾಸ್ ಹೆಗ್ಡೆ, ಸಾಮಾಜಿಕ ಕಾರ್ಯಕರ್ತ