ಕುಮಟಾ ಎಪಿಎಂಸಿಯಲ್ಲಿ ಪಾರದರ್ಶಕ ವಹಿವಾಟು

| Published : Dec 16 2023, 02:00 AM IST

ಸಾರಾಂಶ

ವಾರದ ಮೂರು ದಿನ ನಡೆಯುವ ಅಡಕೆ ವ್ಯಾಪಾರ ಇಲೆಕ್ಟ್ರಾನಿಕ್ ತೂಕದ ಯಂತ್ರಗಳ ಮೂಲಕವೇ ಎಪಿಎಂಸಿ ನಿಯಮದಂತೆ ಪಾರದರ್ಶಕವಾಗಿ ನಡೆಯುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ವರ್ತಕರ, ದಲಾಲರ, ಹಮಾಲರ ಪ್ರತಿನಿಧಿ ಅರವಿಂದ ಪೈ

ಕುಮಟಾ

ದಿ. ಟಿ.ಟಿ. ಹೆಗಡೆಯವರು ರೈತರಿಗಾಗಿಯೇ ಕಟ್ಟಿ ಬೆಳೆಸಿದ ಕುಮಟಾ ಎಪಿಎಂಸಿಯಲ್ಲಿ ಅಡಕೆ ಮಾರಾಟ ವ್ಯವಸ್ಥೆಯು ಅತ್ಯಂತ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ನಡೆಯುತ್ತಿದೆ. ರೈತರಿಗೆ ಯಾವುದೇ ಶೋಷಣೆ, ಅನ್ಯಾಯವಾಗುತ್ತಿಲ್ಲ ಎನ್ನುವುದಕ್ಕೆ ಇಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅಡಕೆ ಮಾರಾಟ ಪ್ರಮಾಣವೇ ಸಾಕ್ಷಿ ಎಂದು ಎಪಿಎಂಸಿ ವರ್ತಕರ, ದಲಾಲರ, ಹಮಾಲರ ಪ್ರತಿನಿಧಿ ಅರವಿಂದ ಪೈ ತಿಳಿಸಿದರು.

ಇತ್ತೀಚೆಗೆ ಹೊನ್ನಾವರದಲ್ಲಿ ಪಿ.ಎಸ್. ಭಟ್ಟ ಉಪ್ಪೋಣಿಯವರು ಕುಮಟಾ ಎಪಿಎಂಸಿ ಪ್ರಾಂಗಣದಲ್ಲಿ ರೈತರಿಗೆ ಶೋಷಣೆಯಾಗುತ್ತಿದೆ ಎಂದು ಮಾಡಿದ್ದ ಆರೋಪ ಖಂಡಿಸಿ ಅಡಕೆ ಸೊಸೈಟಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ರೈತರು ಪ್ರತಿ ಕ್ವಿಂಟಲ್‌ಗೆ ೨ಕೆಜಿ ಅಡಕೆ ಹೆಚ್ಚುವರಿ ನೀಡಬೇಕೆಂಬ ಆರೋಪ ಮಾಡಲಾಗಿದೆ. ಇದು ಕುಮಟಾ ಎಪಿಎಂಸಿಯಲ್ಲಿ ಹಲವಾರು ದಶಕಗಳಿಂದ ನಡೆದು ಬಂದ ಶುದ್ಧ ವಹಿವಾಟಿಗೆ ಕಳಂಕ ತರುವಂಥದ್ದಾಗಿದ್ದು, ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬಂತಾಗಿದೆ. ಉನ್ನತ ಪದವೀಧರರಾಗಿದ್ದ ರವಿ ಹೆಗಡೆ ಮತ್ತಳ್ಳಿ, ವಿ.ಎಂ.ಜಾಲಿಸತ್ಗಿ, ಆರ್.ಎಸ್. ಭಾಗ್ವತ, ಡಿಎಸ್ ಭಾಗ್ವತ ಮುಂತಾದವರ ಅಧ್ಯಕ್ಷತೆಯಲ್ಲಿ ಪ್ರಗತಿ ಪಥದಲ್ಲಿ ಬೆಳೆದ ವ್ಯವಸ್ಥೆ ಇದು. ರಾಜ್ಯದ ಎರಡನೇ ದೊಡ್ಡ ಕೃಷಿ ಮಾರುಕಟ್ಟೆ ಮಂಗಳೂರಾದರೂ ಎಪಿಎಂಸಿ ಮಾರುಕಟ್ಟೆಯಲ್ಲಿ ಅಡಕೆ ಮಾರಾಟ ಅಲ್ಲಿ ಹೀಗೆ ಇಲ್ಲ. ಇಲ್ಲಿ ವಾರದ ಮೂರು ದಿನ ನಡೆಯುವ ಅಡಕೆ ವ್ಯಾಪಾರ ಇಲೆಕ್ಟ್ರಾನಿಕ್ ತೂಕದ ಯಂತ್ರಗಳ ಮೂಲಕವೇ ಎಪಿಎಂಸಿ ನಿಯಮದಂತೆ ಪಾರದರ್ಶಕವಾಗಿ ನಡೆಯುತ್ತಿದೆ. ೧೯೬೬ ರಲ್ಲಿ ಎಪಿಎಂಸಿ ಕಾಯಿದೆ ಬಂದರೂ ಈವರೆಗೆ ಕರಾವಳಿಯ ಯಾವುದೇ ಎಪಿಎಂಸಿಯಲ್ಲಿ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಯಾವುದೇ ಸ್ವಯಂಘೋಷಿತ ರೈತ ಮುಖಂಡರು, ಜನಪ್ರತಿನಿಧಿಗಳು ಯಾರಿಂದಲೂ ಸಾಧ್ಯವಾಗಿಲ್ಲ. ಆದರೆ ರೈತರ ಹಿತ ಕಾಪಾಡುತ್ತಿರುವ ವ್ಯವಸ್ಥೆಯ ಬಗ್ಗೆ ಅಪ್ರಪಚಾರ ಮಾಡಿದರೆ ಅದು ರೈತರಿಗೆ ಮಾಡುವ ಮೋಸ ಎಂದೇ ಪರಿಗಣಿತವಾಗುತ್ತದೆ.

ಕುಮಟಾ ಎಪಿಎಂಸಿಯಲ್ಲಿ ೨೦-೨೧ ರಲ್ಲಿ ೬೬೪೫೪ ಕ್ವಿಂಟಲ್ ಅಡಕೆ ಮಾರಾಟ, ೨೧-೨೨ ರಲ್ಲಿ ೬೮೯೦೦ ಕ್ವಿಂಟಲ್ ಅಡಕೆ ಮಾರಾಟ, ೨೨-೨೩ ರಲ್ಲಿ ೭೮೬೧೮ ಕ್ವಿಂಟಲ್ ಅಡಕೆ ಮಾರಾಟವಾಗಿರುವುದು ರೈತರ ವಿಶ್ವಾಸ, ಸ್ಪಂದನೆಯ ಧ್ಯೋತಕ. ಇಲ್ಲಿ ರೈತರಿಗೆ ಶೋಷಣೆಯಾಗುತ್ತಿಲ್ಲ, ಪಾರದರ್ಶಕ, ಪ್ರಾಮಾಣಿಕ ವಹಿವಾಟು ನಡೆಯುತ್ತಿರುವುದಕ್ಕೆ ಇದು ಸಾಕ್ಷಿ ಎಂದರು.

ಯಾವುದೇ ರೈತನಿಗೆ ಅನ್ಯಾಯವಾಗಿದ್ದರೆ ದೂರಲು ಇದೇ ಪ್ರಾಂಗಣದೊಳಗೆ ಎಪಿಎಂಸಿ ಸಮಿತಿ ಕಚೇರಿ ಇದೆ. ದೂರು ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ. ಬದಲಿಗೆ ರೈತರಲ್ಲಿ ಗೊಂದಲ ಹುಟ್ಟಿಸಬಾರದು. ಕ್ವಿಂಟಲ್ ಗೆ ೨ ಕೆಜಿ ಅಡಕೆ ಎಂದರೆ ಸುಮಾರು ₹೮೦೦ ಹಾನಿ ಮಾಡಿಕೊಂಡು ಯಾವುದೇ ರೈತ ಮಾರಾಟ ಮಾಡಲು ಸಾಧ್ಯವೇ? ಎಪಿಎಂಸಿ ಸಿಬ್ಬಂದಿ ಟೆಂಡರ್ ಘೋಷಣೆ ಮಾಡುವಾಗ ಇಲೆಕ್ಟ್ರಾನಿಕ್ ತೂಕದ ಮಾಡಿದ ವಿವರಗಳನ್ನು ದಾಖಲಿಸುತ್ತಾರೆ. ತೂಕವನ್ನು ಗ್ರಾಮುಗಳಲ್ಲೂ ದಾಖಲಿಸುತ್ತಾರೆ ಎಂದು ದಾಖಲೆ ಸಮೇತ ಅರವಿಂದ ಪೈ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಅಡಕೆ ಸೊಸೈಟಿ ಅಧ್ಯಕ್ಷ ಪ್ರಕಾಶ ಭಟ್ ಮಾತನಾಡಿ, ಯಾರಿಗೂ ಅನ್ಯಾಯವಾಗುವ ರೀತಿಯಲ್ಲಿ ವ್ಯವಹಾರ ನಡೆದಿಲ್ಲ. ಸದ್ಯ ಕಾರವಾರದಿಂದ ಭಟ್ಕಳದವರೆಗೆ ಎಪಿಎಂಸಿ ಅಡಕೆ ವಹಿವಾಟು ಎಂದರೆ ಕುಮಟಾದಲ್ಲಿ ಮಾತ್ರ, ರೈತರ ದಾರಿ ತಪ್ಪಿಸಲು ಸಂಬಂಧವಿಲ್ಲದವರು ಅಪಪ್ರಚಾರ ಮಾಡುವುದನ್ನು ಎಲ್ಲರೂ ಖಂಡಿಸುತ್ತೇವೆ ಎಂದರು.

ಉಪಾಧ್ಯಕ್ಷ ಎಸ್.ಎನ್. ಭಟ್ಟ, ವ್ಯವಸ್ಥಾಪಕ ನಾಗರಾಜ ಭಟ್ಟ, ಪ್ರಭಾಕರ ಬಾಳಗಿ, ವಿವಿಧ ಅಡಕೆ ಸಂಘಗಳ ಆರ್.ಜಿ. ಭಟ್, ಆರ್.ವಿ. ಕಡೇಕೋಡಿ, ಜಿ.ಜಿ. ಹೆಗಡೆ, ಮಹೇಶ ಶಾನಭಾಗ, ಹರೀಶ, ದೀಪಕ ಕಾಮತ, ಎಸ್. ಜಿ. ಭಟ್, ಶ್ರೀಧರ ಹೆಗಡೆ, ಎಸ್.ಎಂ. ಹೆಗಡೆ, ಹಮಾಲರ ಸಂಘದ ಉದಯ ನಾಯ್ಕ, ಉದಾಸಿ, ಸತೀಶ ಭಟ್, ಶ್ರೀಧರ ಕಡೆಕೋಡಿ ಇತರರು ಇದ್ದರು.