ಸಾರಾಂಶ
ಇದು ಎಳನೀರು ಪ್ರದೇಶದ ಜನರ ದುಸ್ಥಿತಿ । ಮಳೆಗೆ ರಸ್ತೆ ಹದಗೆಟ್ಟು ಸಮಸ್ಯೆಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆಯಿತು. ಆದರೂ 8 ಕಿ.ಮೀ. ಅಂತರದಲ್ಲಿರುವ ಒಂದು ಊರಿಗೆ 120 ಕಿ.ಮೀ. ದೂರ ಕ್ರಮಿಸಬೇಕಾದ ಅನಿವಾರ್ಯತೆ ಇನ್ನೂ ಇರುವುದು ವಿಪರ್ಯಾಸ. ಇದು ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾ.ಪಂ. ವ್ಯಾಪ್ತಿಯ ಪ್ರದೇಶದ ವಿಶೇಷ. ಇಲ್ಲಿನ ಎಳನೀರು ಎಂಬ ಪ್ರದೇಶ, ಪಂಚಾಯಿತಿ ಕಚೇರಿಯಿಂದ 8 ಕಿ.ಮೀ. ದೂರದಲ್ಲಿದ್ದರೂ ಇಲ್ಲಿನ ಜನರು ಈಗ ಪಂಚಾಯಿತಿಗೆ ಬರಲು 120 ಕಿ.ಮೀ. ಕ್ರಮಿಸಬೇಕಾಗಿದೆ!ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ದಿಡುಪೆಗೆ ಎಳನೀರಿನಿಂದ ಸಂಪರ್ಕ ಕಲ್ಪಿಸುವ ರಸ್ತೆ ಇದೆ. 8 ಕಿ.ಮೀ. ಉದ್ದದ ಈ ರಸ್ತೆ ಅತ್ಯಂತ ದುರ್ಗಮವಾಗಿದ್ದು, ಬೇಸಿಗೆಯಲ್ಲಿ ಜೀಪ್ ಮತ್ತು ಬೈಕುಗಳು ಸಂಚರಿಸಬಹುದಾಗಿದೆ. ಪ್ರಸ್ತುತ ಭಾರಿ ಮಳೆ ಸುರಿದು ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಕಾರಣದಿಂದ ದಿಡುಪೆಯಲ್ಲಿ ಗೇಟು ಅಳವಡಿಸಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಅಗತ್ಯ ಸಂದರ್ಭಕ್ಕೆ ಅರಣ್ಯ ಇಲಾಖೆ ಹೊರತುಪಡಿಸಿ ಇಲ್ಲಿ ಇತರರಿಗೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿಲ್ಲ.
ದುರ್ಗಮ ರಸ್ತೆಯಾದ ಕಾರಣ ಇಲ್ಲಿ ಸಂಚರಿಸಿದರೆ ಇನ್ನಷ್ಟು ರಸ್ತೆ ಹಾಳಾಗುವ, ವಾಹನಗಳು ಹೂತು ಹೋಗುವ ಸಂಭವ ಇದೆ. ಇಂತಹ ಸಮಯ ಇಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿದರೆ ಸಾಕಷ್ಟು ಪ್ರವಾಸಿಗರು ಸಂಚರಿಸಿ ಅಪಾಯಕ್ಕೆ ತುತ್ತಾಗುವ ಭೀತಿಯು ಇದೆ. ರಸ್ತೆಯಲ್ಲಿ ಹರಿಯುವ ಹಳ್ಳಗಳಲ್ಲೂ ಹೆಚ್ಚಿನ ನೀರು ಇದೆ. ಅಲ್ಲದೆ ಆಗಾಗ ಮರಗಳು ಉರುಳಿ ಬೀಳುತ್ತವೆ. ಕಾಡಾನೆ ಸಹಿತ ವನ್ಯಮೃಗಗಳ ಸಂಚಾರ ಅಹರ್ನಿಶಿಯಾಗಿದೆ. ರಸ್ತೆ ವ್ಯಾಪ್ತಿ ಅಲ್ಲಲ್ಲಿ ಅಪಾಯಕಾರಿ ಜಲಪಾತಗಳು ಇವೆ. ಇಲ್ಲೆಲ್ಲ ಪ್ರವಾಸಿಗರು ಸಂಚಾರ ನಡೆಸುವ ಸಾಧ್ಯತೆ ಇರುವುದರಿಂದ ಪ್ರವೇಶ ನಿಷೇಧಿಸಲಾಗಿದೆ.ಸದ್ಯ ಪಂಚಾಯಿತಿ ಕಚೇರಿ, ತಾಲೂಕು ಕಚೇರಿಗೆ ಎಳನೀರಿನಿಂದ ಗ್ರಾಮಸ್ಥರು ಬರಬೇಕಾದರೆ ಬಜಗೋಳಿ ಅಥವಾ ಕೊಟ್ಟಿಗೆಹಾರ- ಚಾರ್ಮಾಡಿ ಮೂಲಕ 120 ಕಿ.ಮೀ. ದೂರ ಕ್ರಮಿಸಿ ಬರಬೇಕು. ಹೋಗಿ ಬರಲು 240 ಕಿ.ಮೀ. ಕ್ರಮಿಸಬೇಕು. ಇದಕ್ಕೆ ದಿನ ಪೂರ್ತಿ ಸಮಯ ಹಾಗೂ ಹೆಚ್ಚಿನ ಹಣವು ವ್ಯಯವಾಗುತ್ತಿದೆ.ಬೇಡಿಕೆಯ ರಸ್ತೆ:
135 ಮನೆಗಳು ಹಾಗೂ 600ಕ್ಕಿಂತ ಅಧಿಕ ಜನಸಂಖ್ಯೆ ಇರುವ ಎಳನೀರು ಪ್ರದೇಶ, ಚಿಕ್ಕಮಗಳೂರು ಜಿಲ್ಲೆಯ ಸಂಸೆಯಿಂದ ಕೇವಲ 5 ಕಿ.ಮೀ. ದೂರದಲ್ಲಿದೆ. ಆದರೆ ಇಲ್ಲಿನ ಜನರ ಜಾಗದ, ಮನೆಗಳ ದಾಖಲೆಗಳು, ಬ್ಯಾಂಕ್, ಕಚೇರಿ ವ್ಯವಹಾರ ಇತ್ಯಾದಿ ಇರುವುದು ಬೆಳ್ತಂಗಡಿ ತಾಲೂಕಿನಲ್ಲಿ. ಇದಕ್ಕಾಗಿ ಸುತ್ತು ಬಳಸಿ ರಸ್ತೆ ಸಂಚಾರದ ಮುಕ್ತಿಗಾಗಿ ಇಲ್ಲಿನ ಜನ ದಿಡುಪೆ ರಸ್ತೆಯನ್ನು ಅಭಿವೃದ್ಧಿಪಡಿಸಿ ಸಂಪರ್ಕ ಕಲ್ಪಿಸುವಂತೆ ಹಲವಾರು ದಶಕಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಜನಪ್ರತಿನಿಧಿಗಳ, ಅಧಿಕಾರಿಗಳ ನಿರುತ್ಸಾಹ, ಅರಣ್ಯ ಇಲಾಖೆಯ ಕಾನೂನು ತೊಡಕುಗಳಿಂದ ರಸ್ತೆ ಅಭಿವೃದ್ಧಿಯೆಂಬುದು ಈ ಪ್ರದೇಶದ ಜನರ ಕನಸಾಗಿಯೇ ಉಳಿದಿದೆ.ಶಾಸಕ ಹರೀಶ್ ಪೂಂಜ, ಎಳನೀರು ಪ್ರದೇಶದ ಕಂದಾಯ ಜಾಗಗಳಲ್ಲಿ ರಸ್ತೆ, ಸೇತುವೆ ಸಹಿತ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಕಳೆದ ಸಾಲಿನಲ್ಲಿ ಅನುದಾನ ಒದಗಿಸಿದ್ದಾರೆ. ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ರಸ್ತೆ ಅಭಿವೃದ್ಧಿ ಬಗ್ಗೆಯು ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಈ ಬಗ್ಗೆ ಈಗಾಗಲೇ ಅನೇಕ ಸಮೀಕ್ಷೆಗಳು ನಡೆದಿವೆ.
-----------ರಸ್ತೆ ಅಭಿವೃದ್ಧಿಯಾದರೆ ಪ್ರವಾಸೋದ್ಯಮವೂ ವೃದ್ಧಿ
ಈ ಕಾಡುದಾರಿಯ 8 ಕಿ.ಮೀ. ರಸ್ತೆ ವ್ಯಾಪ್ತಿಯು ಸುಂದರ, ಜನಾಕರ್ಷಕವಾಗಿದೆ. ರಸ್ತೆಯುದ್ದಕ್ಕೂ ಸಿಗುವ ತೊರೆ, ಹಳ್ಳ, ಘಾಟಿ ಪ್ರದೇಶವನ್ನು ನೆನಪಿಸುವ ರಸ್ತೆ ವ್ಯಾಪ್ತಿ, ರಸ್ತೆ ಬದಿಯ ಜಲಪಾತಗಳು, ಸಂಚಾರದ ವೇಳೆ ಸಿಗುವ ಮೃಗಗಳು ಚಾರ್ಮಾಡಿ ಘಾಟಿ ಪ್ರದೇಶದಂತೆ ಆಕರ್ಷಕವಾಗಿವೆ. ಈ ರಸ್ತೆ ಅಭಿವೃದ್ಧಿ ಹೊಂದಿದರೆ ಪ್ರಕೃತಿ ಸೌಂದರ್ಯವನ್ನು ಸವಿಯಲು ಬರುವ ಪ್ರವಾಸಿಗರಿಗೆ ಉತ್ತಮ ವೇದಿಕೆಯಾಗಲಿದೆ. ದಿಡುಪೆ-ಎಳನೀರು ಪರಿಸರ ಅಭಿವೃದ್ಧಿ ಹೊಂದಿ ಆಕರ್ಷಕ ಪ್ರವಾಸಿ ಕೇಂದ್ರವಾಗಿಯೂ ಮಾರ್ಪಡಲಿದೆ. ಅಲ್ಲದೆ ಚಾರ್ಮಾಡಿ ಘಾಟಿಯ ವಾಹನಗಳ ಒತ್ತಡವು ಕಡಿಮೆಯಾಗಲಿದೆ. --------------ರಸ್ತೆಯು ತೀವ್ರ ಹದಗೆಟ್ಟ ಕಾರಣ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಒಪ್ಪಿಗೆಯಂತೆ ದಿಡುಪೆಯಲ್ಲಿ ಗೇಟು ಅಳವಡಿಸಿ ಎಳನೀರು ಪ್ರದೇಶಕ್ಕೆ ವಾಹನ ಸಂಚಾರ ನಿಷೇಧ ಹೇರಲಾಗಿದೆ. ಮಳೆ ಕಡಿಮೆಯಾದ ಬಳಿಕವಷ್ಟೇ ಸಂಚಾರ ಆರಂಭಿಸಬಹುದಾಗಿದೆ.
। ಪ್ರಕಾಶ್ ಜೈನ್, ಅಧ್ಯಕ್ಷ, ಮಲವಂತಿಗೆ ಗ್ರಾಪಂ