ವಿದ್ಯೆಯನ್ನು ತಪಸ್ಸಿನಂತೆ ಪರಿಗಣಿಸಿ: ಡಾ.ಗಣೇಶ್‌

| Published : Feb 10 2025, 01:47 AM IST

ವಿದ್ಯೆಯನ್ನು ತಪಸ್ಸಿನಂತೆ ಪರಿಗಣಿಸಿ: ಡಾ.ಗಣೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಹತ್ತನೇ ತರಗತಿ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಯಶಸ್ಸಿನ ಮೆಟ್ಟಿಲಾಗಿದ್ದು, ಪರೀಕ್ಷೆಯನ್ನು ಸಂತೋಷದಿಂದ ಹಬ್ಬದಂತೆ ಎದುರಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಡಾ.ಜಿ.ಎಸ್.ಗಣೇಶ ವಿದ್ಯಾರ್ಥಿ ಗಳಿಗೆ ಸ್ಫೂರ್ತಿ ತುಂಬಿದರು.

ರಾಮನಗರ: ಹತ್ತನೇ ತರಗತಿ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಯಶಸ್ಸಿನ ಮೆಟ್ಟಿಲಾಗಿದ್ದು, ಪರೀಕ್ಷೆಯನ್ನು ಸಂತೋಷದಿಂದ ಹಬ್ಬದಂತೆ ಎದುರಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಡಾ.ಜಿ.ಎಸ್.ಗಣೇಶ ವಿದ್ಯಾರ್ಥಿ ಗಳಿಗೆ ಸ್ಫೂರ್ತಿ ತುಂಬಿದರು.

ನಗರದ ಬೆತೆಲ್ ಪಿಯು ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಪಿಯುಸಿ ದಾಖಲಾತಿ ಸಂಬಂಧ ಜಿಲ್ಲೆಯ ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿನ ಶೈಕ್ಷಣಿಕ ಗುಣಮಟ್ಟ ಪರೀಕ್ಷೆ ಮತ್ತು ಉಪನ್ಯಾಸ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿದ್ಯೆಯನ್ನು ತಪಸ್ಸನ್ನಾಗಿಸಿಕೊಂಡ ಮಕ್ಕಳು ಮಾತ್ರ ಯಶಸ್ಸು ಕಾಣಲು ಸಾಧ್ಯ. ಮಕ್ಕಳು ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕವಾಗಿ ಜಗತ್ತಿನಲ್ಲಿ ಶಿಕ್ಷಣಕ್ಕೆ ಪೈಪೋಟಿಯಿದೆ. ಅದನ್ನು ಅರ್ಥಮಾಡಿ ಕೊಂಡು ಪಠ್ಯದ ವಿಷಯಗಳನ್ನು ಕರಗತ ಮಾಡಿಕೊಂಡು ಧೈರ್ಯದಿಂದ ಹಬ್ಬದಂತೆ ಪರೀಕ್ಷೆ ಎದುರಿಸಿ ಎಂದು‌ ಮಕ್ಕಳಲ್ಲಿ ಆತ್ಮ‌ಸ್ಥೈರ್ಯ ತುಂಬಿದರು.

ಸಿದ್ದತೆ, ಶುದ್ಧತೆ, ಬದ್ಧತೆ ಈ ಮೂರು ಗುಣಗಳು ಮಕ್ಕಳಲ್ಲಿರಬೇಕಾಗುತ್ತದೆ. ಮಕ್ಕಳ ಕಲಿಕೆಯ ಉತ್ಸಾಹದ ಜೊತೆಗೆ ಮೊದಲು ಮೋಟಿವೇಷನ್, ಇನ್ಸ್ಪಿರೇಷನ್‌ ಕೊಡಬೇಕು. ಸಂಸ್ಕಾರ ಮತ್ತು ಮೌಲ್ಯಯುತ ಗುಣಗಳನ್ನು ಬೆಳೆಸಿಕೊಳ್ಳಬೇಕು. ಬೆತೆಲ್ ಶಿಕ್ಷಣ ಸಂಸ್ಥೆ ವಿದ್ಯೆಯನ್ನು ಕಲಿಸುವ ಜೊತೆಗೆ ಮಕ್ಕಳಿಗೆ ಬೇಕಾದ ಶಿಸ್ತು, ಸಂಯಮ, ಗುರಿಯ ಜೊತೆಗೆ ಸಂಸ್ಕಾರವಂತ ವಿದ್ಯೆ ಕಲಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಪರೀಕ್ಷೆಯ ಗೊಂದಲವನ್ನು ಮನಸ್ಸಿನಿಂದ ಹೊರಗಿಟ್ಟು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಕೊಳ್ಳಬೇಕು. ಆದರೆ ಸಮಯವನ್ನು ವ್ಯರ್ಥ ಮಾಡಬೇಡಬಾರದು. ಪಠ್ಯಕ್ರಮ ಕಷ್ಟವಲ್ಲ. ನಿರ್ಮಲವಾದ ಮನಸ್ಸಿನಿಂದ ಓದಬೇಕು. ಹತ್ತನೇ ತರಗತಿ ಮಕ್ಕಳು ಅತ್ಯುತ್ತಮ ಅಂಕಗಳನ್ನು ಗಳಿಸುತ್ತೀರಿ ಎನ್ನುವ ಭಾವನೆ ನಿಮ್ಮಲ್ಲಿನ ಆ ಶಕ್ತಿಯಲ್ಲಿ ಕಾಣುತ್ತಿದೆ ಎಂದು ಕಾರ್ಯಾಗಾರದುದ್ದಕ್ಕೂ ಮಕ್ಕಳಲ್ಲಿ ಪರೀಕ್ಷೆ ಎದುರಿಸುವ ಉಪಯುಕ್ತ ಟಿಪ್ಸ್ ಗಳನ್ನು ನೀಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಸಮಾಜದಲ್ಲಿ ಮೌಲ್ಯ ಮತ್ತು ಸಂಸ್ಕಾರ ಶಿಕ್ಷಣ ಕೊಟ್ಟರೆ ಹತ್ತು ಜೈಲುಗಳನ್ನು ಮುಚ್ಚಬಹುದು ಎಂಬ ಮಾತಿನಂತೆ ಪೋಷಕರು, ಶಿಕ್ಷಕರು ಇಂತಹ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಎಸ್ಸೆಸ್ಸೆಲ್ಸಿ ನಂತರ ಪಿಯುಸಿಯಲ್ಲಿ ನಿಮ್ಮ ಅಗತ್ಯಕ್ಕೆ ತಕ್ಕ ಶಿಕ್ಷಣ ನೀಡುವ ಮತ್ತು ಕಲಿಕೆಗೆ ಉತ್ತಮ ವಾತಾವರಣ, ಉತ್ಸಾಹಿ ಶಿಕ್ಷಕ ವರ್ಗವಿದೆ ಎಂದು ಹೇಳಿದರು.ಕಡಲೆಕಾಯಿ ಮಾರುವ ಹುಡುಗ ಶೇ. 96, ತಂದೆ ತಾಯಿ ಇಲ್ಲದ ಮಗು ಶೇಕಡ 95, ಅನಾಥರು, ಅನಕ್ಷರತೆ ಇರುವ ಕುಟುಂಬದ ಮಗು, ಬಜ್ಜಿ ಬೋಂಡಾ ಹಾಕುವ ಬಡವರ ಮಗ ಐಐಟಿಯಲ್ಲಿ ಅತ್ಯುನ್ನತ ಫಲಿತಾಂಶ ಪಡೆದು ಇಂಜಿನಿಯರ್, ಡಾಕ್ಟರ್ ಆಗಿರುವ ಹಲವು ಉದಾಹರಣೆಗಳಿವೆ ಎಂದು ಗಣೇಶ್ ಹೇಳಿದರು.

ವಿನೂತನವಾಗಿ ನಡೆದ ಗುಣಾತ್ಮಕ ಪರೀಕ್ಷೆಯಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಯಶಸ್ಸಿನ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಹತ್ತನೇ ತರಗತಿ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿ ಬೇತೆಲ್ ಸಂಸ್ಥೆ ನಮ್ಮ ಕಲಿಕೆಗೆ ಉಪಯುಕ್ತ ಮಾಹಿತಿಗಳನ್ನು ನಮಗೆ ನೀಡುವಲ್ಲಿ ಹೆಚ್ಚು ಆಶಕ್ತಿ ವಹಿಸಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಶಿಕ್ಷಕರು‌ ಮತ್ತು ಪೋಷಕರ ಗೌರವವನ್ನು ಹೆಚ್ಚಿಸುತ್ತೇವೆ ಎಂದು ಹೇಳಿದರು.

ಬೆತೆಲ್ ಶಾಲೆಯ ಪ್ರಾಂಶುಪಾಲರಾದ ರೀಟಾ ಮಾತನಾಡಿ ಪೋಷಕರು ನನ್ನ ಕುಟುಂಬವಿದ್ದಂತೆ, ನಮ್ಮ ಕುಟುಂಬಕ್ಕೆ ಮಕ್ಕಳೇ ಆಸ್ತಿಯಾಗಿದ್ದಾರೆ. ಅವರು ಯಶಸ್ಸು ಪಡೆದರೆ ಅದರ ಕೀರ್ತಿ ನಮ್ಮ ಕುಟುಂಬಕ್ಕೆ ಸಿಗುತ್ತದೆ. ಆಗಾಗಿ ವಿದ್ಯಾರ್ಥಿಗಳಿಗೆ ಯಶಸ್ಸಿಗೆ ಪೂರಕವಾದ ಶಿಕ್ಷಣ ನೀಡುತ್ತೇವೆ. ನುರಿತ ಬೋದಕ ವರ್ಗವಿದೆ. ಮಕ್ಕಳಿಗೆ ಮೌಲ್ಯ ಶಿಕ್ಷಣ ಪಡೆಯಲು ನಮ್ಮ ಸಂಸ್ಥೆಗೆ ಬನ್ನಿ, ಭವಿಷ್ಯ ಕಟ್ಟಿಕೊಳ್ಳಲು ಮಕ್ಕಳನ್ನು ತಯಾರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ನಾವು ಮಾಡುತ್ತಿದ್ದೇವೆ ಎಂದರು.

ಉಪನ್ಯಾಸ ಕಾರ್ಯಗಾರದಲ್ಲಿ ಸಂಸ್ಥೆಯ ಅಧ್ಯಕ್ಷ ಮನೋಹರ್, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರುಭಾಗವಹಿಸಿದ್ದರು.

ಕೋಟ್‌.......

ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಅರ್ಥ‌ಮಾಡಿಕೊಂಡು ಉತ್ತರಿಸಬೇಕು. ಹಾಗೆ ಉತ್ತರಿಸಲು ನೀವು ನಿಮ್ಮ ಪಠ್ಯವನ್ನು ಸಂಪೂರ್ಣ ಅರ್ಥ ಮಾಡಿಕೊಂಡಿರಬೇಕು. ಕೇವಲ ಪ್ರಶ್ನೋತ್ತರಗಳನ್ನು ಮಾತ್ರ ಓದಬಾರದು. ಸಂಪೂರ್ಣ ಪಾಠವನ್ನು ಎರಡುಮೂರು ಬಾರಿ ಓದಿ ಅದರ ಸಾರಾಂಶವನ್ನು ಅರ್ಥ ಮಾಡಿಕೊಂಡರೆ ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆ ಕೊಟ್ಟರು ನೀವು ಸರಾಗವಾಗಿ ಬರೆಯಬಹುದು. ಉತ್ತಮ ಅಂಕಗಳನ್ನೂ ಗಳಿಸಬಹುದು.

-ಡಾ.ಡಾ.ಜಿ.ಎಸ್.ಗಣೇಶ್, ಸಂಪನ್ಮೂಲ ವ್ಯಕ್ತಿ

ಬಾಕ್ಸ್ ................

ಸ್ಫೂರ್ತಿ ತುಂಬುವ ಕಾರ್ಯಾಗಾರ

ಬೆತೆಲ್ ಪಿಯು ಕಾಲೇಜಿನಲ್ಲಿ ಪಿಯುಸಿ ದಾಖಲಾತಿ ಸಂಬಂಧ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ಹತ್ತನೆ ತರಗತಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಮತ್ತು ಶೈಕ್ಷಣಿಕ ಗುಣಮಟ್ಟದ ಪರೀಕ್ಷೆ ನಡೆಸಲಾಯಿತು. ಜೊತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ವಿನೂತನ ಉಪನ್ಯಾಸ ಕಾರ್ಯಾಗಾರ ಮಕ್ಕಳು ಮತ್ತು ಪೋಷಕರ ಮೆಚ್ಚಗೆಗೆ ಪಾತ್ರವಾಯಿತು. ವಿದ್ಯಾರ್ಥಿಗಳು ಲವಲವಿಕೆಯಿಂದ ಪರೀಕ್ಷೆ ಎದುರಿಸಲು ಸಿದ್ಧಗೊಳಿಸುವ ವಿಷಯಗಳಿಂದ ವಿದ್ಯಾರ್ಥಿಗಳು, ಪೋಷಕರು ಪರೀಕ್ಷೆ ಎಂಬ ಟೆನ್ಷನ್‌ನಿಂದ ರಿಲೀಫ್‌ ಆದರು.

9ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಬೇತೆಲ್ ಪಿಯು ಕಾಲೇಜಿನಲ್ಲಿ ಭಾನುವಾರ ನಡೆದ ಪಿಯುಸಿ ದಾಖಲಾತಿ ಸಂಬಂಧ ಜಿಲ್ಲೆಯ ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿನ ಶೈಕ್ಷಣಿಕ ಗುಣಮಟ್ಟ ಪರೀಕ್ಷೆ ಮತ್ತು ಉಪನ್ಯಾಸ ಕಾರ್ಯಾಗಾರದಲ್ಲಿ ಡಾ.ಜಿ.ಎಸ್.ಗಣೇಶ್ ಮಾತನಾಡಿದರು.