ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಎಲ್ಲರನ್ನೂ ಪ್ರೀತಿಸಬೇಕು, ಗೌರವಿಸಬೇಕು. ಇದನ್ನೇ ಮಾಧವಾನಂದರು ಮಾಡಿರುವ ಕೆಲಸ. ಹಾಗಾಗಿಯೇ ಇದನ್ನು ಜಾತ್ಯತೀತ ಮಠ ಎಂದು ಕರೆಯುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ಇಂಚಗೇರಿ ಮಠದ ಮಾಧವಾನಂದ ಪ್ರಭುಗಳ ದೇವಸ್ಥಾನ ಲೋಕಾರ್ಪಣೆ, ಕಳಸಾರೋಹಣ ಹಾಗೂ 44ನೇ ಪುಣ್ಯತಿಥಿ ಜೊತೆಗೆ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಬಸವಣ್ಣನವರು ಅಂತರ್ಜಾತಿ ಮದುವೆ ಮಾಡಿಸಿದರೆ ಮಾಧವಾನಂದರು ಅಂತರ್ ಧರ್ಮಿಯರ ಮದುವೆ ಮಾಡಿಸಿದರು. ಅಂತರ್ಜಾತಿ ಮದುವೆಗಳಿಗೆ ಹೆಚ್ಚು ಪ್ರೋತ್ಸಾಹ ಕೊಡುವ ಮೂಲಕ ಮಾಧವಾನಂದ ಪ್ರಭುಜಿಗಳಿಗೆ ಗೌರವ ಕೊಡಬೇಕು ಎಂದರು.
ಸಂಗೊಳ್ಳಿ ರಾಯಣ್ಣ ಅವರು ಕಿತ್ತೂರು ಸಂಸ್ಥಾನದಲ್ಲಿ ಸೈನಕರಾಗಿದ್ದವರು. ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಭಂಟರಾಗಿದ್ದರು. ಚೆನ್ನಮ್ಮ ಹಾಗೂ ರಾಯಣ್ಣನ ಮುಂದಾಳತ್ವದಲ್ಲಿ ಬ್ರಿಟಿಷರ ಮೊದಲನೇ ಯುದ್ಧದಲ್ಲಿ ಗೆಲ್ಲುತ್ತಾರೆ. ಎರಡನೇ ಯುದ್ಧದಲ್ಲಿ ಬ್ರಿಟಿಷರು ಚೆನ್ನಮ್ಮನನ್ನು ಬಂಧಿಸಿದ ವೇಳೆ ರಾಯಣ್ಣ ತಪ್ಪಿಸಿಕೊಂಡು ನಿರಂತರವಾಗಿ ಅವರ ವಿರುದ್ಧ ಹೋರಾಟ ನಡೆಸುತ್ತಾರೆ. ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಪ್ರಾಣ ಕೊಟ್ಟಿದ್ದಾರೆ. ಇವರು ಸ್ವಾರ್ಥಕ್ಕಾಗಿ ಹೋರಾಟ ಮಾಡಲಿಲ್ಲ ಎಂದರು.ಜಾತಿ ವ್ಯವಸ್ಥೆ ವಿರುದ್ಧ ಹೋರಾಟಿದ ಬಸವಣ್ಣ:
560 ಸಂಸ್ಥಾನಗಳು, ರಾಜರು ಇದ್ದರು, ಒಬ್ಬರಿಗೊಬ್ಬರು ಕಂಡರೆ ಆಗುತ್ತಿರಲಿಲ್ಲ. ಬಲಿಷ್ಠರಾದವರು ಮಾತ್ರ ಬಚಾವ್ ಆಗುತ್ತಿದ್ದರು. ಯಾಕೆಂದರೆ ನಮ್ಮ ಜಾತಿ ವ್ಯವಸ್ಥೆ ಅಷ್ಟರ ಮಟ್ಟಿಗೆ ಬೇರೂರಿದೆ. ನಮ್ಮ ದೇಶದಲ್ಲಿ ನಾಲ್ಕು ವರ್ಣಗಳನ್ನು ಮಾಡಿ ಚಾತುರವರ್ಣ ಎಂದು ಮಾಡಿದರು. ಅದರಲ್ಲಿ ಮೇಲಿನ ಮೂರು ವರ್ಗಗಳಿಗೆ ಎಲ್ಲವೂ ಅನುಭವಿಸಿದರು. ನಾಲ್ಕನೇ ವರ್ಗದ ಕ್ಷುದ್ರರಿಗೆ ಏನೂ ಸಿಗಲಿಲ್ಲ. ಇವರು ಉತ್ಪಾದನೆ ಮಾಡಿದ್ದನ್ನು ಬೇರೆಯವರು ಅನುಭವಿಸುವಂತಾಗಿತ್ತು. ಅದಕ್ಕಾಗಿಯೇ ಮಾಧವಾನಂದ ಪ್ರಭುಜಿಗಳು ಇದಕ್ಕಾಗಿಯೇ ಜಾತ್ಯತೀತ ತತ್ವವನ್ನು ಅಳವಡಿಸಿಕೊಂಡರು. ಅವರಂತೆ ನಾವೆಲ್ಲರೂ ಜಾತ್ಯತೀತತೆ ರೂಢಿಸಿಕೊಳ್ಳಬೇಕು. ಯಾವುದೋ ಒಂದು ಜಾತಿಯಲ್ಲಿ ಹುಟ್ಟಿರುತ್ತೇವೆ, ಹಾಗಂತ ಅದರಲ್ಲೇ ಇರಬೇಕಾ?. ಬಸವಣ್ಣನವರ 12ನೇ ಶತಮಾನದಲ್ಲಿಯೇ ಜಾತಿ ವ್ಯವಸ್ಥೆಯ ವಿರುದ್ದ ಹೋರಾಟ ಮಾಡಿದರು. ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಬ್ರಾಹ್ಮಣ ಹಾಗೂ ದಲಿತರಿಗೆ ಮದುವೆ ಮಾಡಿಸಿದರು.ಇವನಾರವ ಇವನಾರವ ಇವನಾರವ ಎಂದೆಣಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ ಕೂಡಲ ಸಂಗಮದೇವ ಎಂದು ಬಸವಣ್ಣನವರು 12ನೇ ಶತಮಾನದಲ್ಲಿ ಹೇಳಿದರು ಎಂದರು.
ಅಂತರ್ಜಾತಿ ಮದುವೆ ಮಾಡಿದ ಮಾಧವಾನಂದರು:ನಾನು ಕುರುಬ ಜಾತಿಯಲ್ಲೇ ಹುಟ್ಟಬೇಕು ಎಂದು ಅರ್ಜಿ ಹಾಕಿದ್ದೆನಾ? ನಮ್ಮ ಅಪ್ಪ ಅಮ್ಮ ಕುರುಬರಾಗಿದ್ದರು. ನಾವು ಕುರುಬರಾಗಿ ಹುಟ್ಟಿದ್ದೇವೆ. ಕಾಯಿಲೆ ಬಂದು ರಕ್ತ ಬೇಕು ಎಂದಾಗ ನಮ್ಮ ಜಾತಿಯ ರಕ್ತವೇ ಬೇಕು ಎನ್ನುತ್ತೇವಾ? ಬದುಕಿದರೆ ಸಾಕು ಎನ್ನಲ್ಲವೇ?. ಯಾವ ರಕ್ತ ಆದರೂ ಪರವಾಗಿಲ್ಲ ಬದುಕಿಸು ಎನ್ನುತ್ತೇವೆ. ಬೇರೆ ಜಾತಿಯ ರಕ್ತ ಪಡೆದು ಆಪರೇಷನ್ ಮಾಡಿಸಿಕೊಂಡು ಬದುಕಿದ ಮೇಲೆ ಜಾತಿಯತೆ ಮಾಡೋದು ತಪ್ಪಲ್ಲವೇ. ಅದಕ್ಕಾಗಿಯೇ ಮಾಧವಾನಂದರು ಜೀವನದುದ್ದಕ್ಕೂ ಅಂತರ ಜಾತಿಯ ಮದುವೆ ಮಾಡಿಸಿದರು ಎಂದು ಹೇಳಿದರು.
ನಾವು ಬಡವರ ಅಭಿವೃದ್ಧಿ ಮಾಡುತ್ತಿದ್ದೇವೆ. ಶಕ್ತಿ ಯೋಜನೆಯಲ್ಲಿ ಎಲ್ಲ ಜಾತಿಯ, ಧರ್ಮದವರಿಗೂ ಅವಕಾಶ ಕೊಟ್ಟಿದ್ದೇವೆ. ಆರ್ಥಿಕ ಬಡವರಿಗೆ ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆ ಕೊಟ್ಟಿದ್ದೇವೆ. ವಿದ್ಯುತ್ ಕೊಡುತ್ತಿರುವುದನ್ನು ಎಲ್ಲ ಜಾತಿಯವರೂ ಬಳಸ್ತಾರೆ. ಮಾಧವಾನಂದರನ್ನು ಎಲ್ಲರೂ ಯಾಕೆ ಗೌರವಿಸುತ್ತಾರೆ ಎಂದರೆ ಸ್ವಾತಂತ್ರ್ಯ ಹೋರಾಟದಲ್ಲಿ, ಕರ್ನಾಟಕ ಏಕೀಕರಣದಲ್ಲಿ, ಜಾತ್ಯತೀತ ವ್ಯವಸ್ಥೆ ವಿರುದ್ದ ಹೋರಾಟ ಮಾಡಿದರು. ಇದರಿಂದ ನಾವು ಇಂದು ಸ್ವತಂತ್ರರಾಗಿದ್ದೇವೆ ಎಂದು ತಿಳಿಸಿದರು.ಮಾನವರಾಗಿ:
1947ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೇಳಿದವರು ಗಾಂಧೀಜಿ. ಅವರು ಕಾಂಗ್ರೆಸ್ ಪಾರ್ಟಿಯವರು. ಆದರೆ ಇವತ್ತು ಒಂದು ಪಾರ್ಟಿಯವರು 1942ರಲ್ಲಿ ಬ್ರಿಟಿಷರ ಪರವಾಗಿ ಇದ್ದವರು. ಈ ದೇಶದಲ್ಲಿ ಅಧಿಕಾರಿ ಬಲಾಢ್ಯರ ಕೈಯಲ್ಲಿ ಇರಬಾರದು ಎಂದು ಡಾ. ಅಂಬೇಡ್ಕರ್ ಅವರು ಹೇಳಿದ್ದಾರೆ. ಬಲಾಢ್ಯರ ಕೈಯಲ್ಲಿ ಅಧಿಕಾರ ಇದ್ದರೆ ದೌರ್ಜನ್ಯ, ಪಾಳೆಗಾರಿಕೆ ಇರುತ್ತೆ, ಅಧಿಕಾರ ಹಂಚಿಕೆ ಆಗಬೇಕು ಎಂದರು. ನಾವೆಲ್ಲರೂ ಮನುಷ್ಯರು, ಮನುಷ್ಯರಾಗಿ ಬಾಳಬೇಕು. ದಾನವರಾಗಬಾರದು, ಮಾನವರಾಗಿ ಇರಬೇಕು ಎಂದು ಕಿವಿಮಾತು ಹೇಳಿದರು. ಬೆಂಗಳೂರಿನಿಂದ ಬರುವಾಗ ಸ್ವಲ್ಪ ತಡವಾಗಿದೆ, ಕ್ಷಮಿಸಬೇಕು ಎಂದು ನೆರೆದಿದ್ದ ಭಕ್ತರಲ್ಲಿ ಕ್ಷಮೆ ಕೇಳಿ ಮಾತು ಆರಂಭಿಸಿದರು.---ನಾಡಿನ ಜನತೆಗೆ ಗ್ಯಾರಂಟಿಗಳು ಅನುಕೂಲ
ನಾಡ ಮುಖ್ಯಮಂತ್ರಿಗಳು ಇಂದು ಮಾಧವಾನಂದರ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಮಗೆಲ್ಲ ಸಂತಸ ತಂದಿದೆ. ಇಂಚಗೇರಿ ಮಠ ಭವ್ಯ ಪರಂಪರೆ, ಇತಿಹಾಸವನ್ನು ಹೊಂದಿರುವ ಮಠವಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.ಸ್ವಾತಂತ್ರ್ಯ ಹೋರಾಟದಲ್ಲಿ, ಕರ್ನಾಟಕ ಏಕೀಕರಣದಲ್ಲಿ ಭಾಗವಹಿಸಿದ್ದ ಈ ಮಠದ ಇತಿಹಾಸವಾಗಿದೆ. ಒಂದು ಕಾಲದಲ್ಲಿ ಇಂಚಗೇರಿ ಮಠ ಎಂದರೆ ಕಾಂಗ್ರೆಸ್ಸಿನ ಮಠ ಎಂದು ಬಹಳ ಪ್ರಸಿದ್ಧಿಯಾದಂತಹ ಮಠವಿದು. ಹಿಂದಿನ ಗೃಹಮಂತ್ರಿ ಬೂಟಾಸಿಂಗ್, ನಮ್ಮ ತಂದೆಯವರಾದ ಬಿ.ಎಂ.ಪಾಟೀಲ್ ಅವರು ಈ ಮಠಕ್ಕೆ ನಡೆದುಕೊಂಡವರು. ಯಾರಿಗೂ ನೋವಾಗದಂತಹ ರೇವಣಸಿದ್ಧೇಶ್ವರ ನೇತೃತ್ವದಲ್ಲಿ ಈ ಮಠ ಮತ್ತೆ ಹಿಂದಿನ ಗತವೈಭವ ಪಡೆದುಕೊಂಡಿದೆ ಎಂದರು.
ಸಿಎಂ ಇಚ್ಚಾಶಕ್ತಿ ಹಾಗೂ ಈ ಭಾಗದ ಶಾಸಕರ ಪರಿಶ್ರಮದಿಂದ ಈ ಭಾಗದ ಕೆರೆಗಳನ್ನು ತುಂಬಿಸುವ ಕೆಲಸ ಆಗಿದೆ. ಯಶವಂತರಾಯಗೌಡ ಪಾಟೀಲ್, ವಿಠ್ಠಲ ಕಟದೊಂಡ, ರಾಜು ಆಲಗೂರ ಪ್ರಯತ್ನದಿಂದ ರೇವಣಸಿದ್ಧೇಶ್ವರ ಏತ ನೀರಾವರಿ ಜಾರಿಗೆ ತರಲು ಕಾರಣವಾಗಿದೆ.ಗ್ಯಾರಂಟಿಗಳು ಜನತೆಗೆ ಅನುಕೂಲ ಆಗಿವೆ. ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಐದು ಗ್ಯಾರಂಟಿಗಳು ನಾಡಿನ ಜನರಿಗೆ ಅನುಕೂಲವಾಗಿವೆ. ಸಿಎಂ ಅವರ ಜೊತೆಗೆ ನಾವೆಲ್ಲರೂ ಇರುತ್ತೇವೆ. ಈ ಭಾಗದ ಸಮಗ್ರ ಅಭಿವೃದ್ಧಿ ಮಾಡಲು ಬದ್ಧವಾಗಿದ್ದೇವೆ ಎಂದರು.